BSY ಧರಿಸುವ ಹಸಿರು ಶಾಲಿನಲ್ಲಿ ಮೆತ್ತಿದ ರೈತರ ರಕ್ತ ಇನ್ನೂ ಮಾಸಿಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಾರ್ವಜನಿಕ ವೇದಿಕೆಗಳಲ್ಲಿ ಆರೋಪಿಸಲು ನಿಮಗೇನು ನೈತಿಕತೆ ಇದೆ. ಇದಲ್ಲದೇ ನಿಮ್ಮ ಪಕ್ಷದ ವಾಟ್ಸಪ್ ಗ್ರೂಪ್ ನಲ್ಲಿ ರೈತರ ಸಾವಿನ ಕುರಿತು 2 ನಿಮಿಷದ ವೀಡಿಯೋ ಮಾಡಿ ಸರ್ಕಾರದ ವಿರುದ್ದ ಚುನಾವಣಾ ಅಪಪ್ರಚಾರ ಹಾಗೂ ದೂಷಣೆಯಲ್ಲಿ ತೊಡಗಿದ್ದೀರಿ. ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನೀವು ಸಿಎಂ ಆದ ಮೂರೇ ದಿನಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ಅನ್ನದಾತರನ್ನು ನಿಮ್ಮ ಸರ್ಕಾರ ಕೊಲೆ ಮಾಡಿದೆ. ನೀವು ಧರಿಸಿಕೊಳ್ಳುವ ಹಸಿರು ಶಾಲಿನಲ್ಲಿ ಮೆತ್ತಿರುವ ಹುತಾತ್ಮ ರೈತರಾದ ಹಾವೇರಿಯ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೇಮಪ್ಪ ಹೂನ್ನತ್ತಿಯ ರಕ್ತದ ಕಲೆ ಮಾಸಿದೆಯೇ ಎಂದು ವಿಮರ್ಶೆ ಮಾಡಿಕೊಳ್ಳಿ  ಎಂದು ಬಿಜೆಪಿ ವಿರುದ್ದ ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನಿಮ್ಮ ಮೋದಿ ಸರ್ಕಾರ ಹೇಳಿರುವುದನ್ನು ಕರ್ನಾಟಕದ ರೈತರು ಮರೆತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರ್ಕಾರ 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದನ್ನು ನೀವು ಮರೆತಿದ್ದೀರಿ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ದೇಶದ ಕೆಲವು ಕೈಗಾರಿಕೋದ್ಯಮಿಗಳಿಗೆ 1.30 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಮೋದಿ ರೈತರ ಸಾಲ ಏಕೆ ಮನ್ನಾ ಮಾಡಿಲ್ಲ ಎಂದು ನೀವೇ ಮೋದಿಯವರನ್ನು ಕೇಳಿ ರಾಜ್ಯದ ರೈತರಿಗೆ ಉತ್ತರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ಸಮಸ್ಯೆ ಬಂದಾಗ ಸರ್ವ ಪಕ್ಷ ಸಭೆ ಬಹಿಷ್ಕರಿಸಿ ಬಿಜೆಪಿ ರೈತರ ಸಮಸ್ಯೆ ಕುರಿತು ನಿರ್ಲಕ್ಷತನ ಮೆರೆದಿದ್ದನ್ನು ರೈತರು ನೋಡಿದ್ದಾರೆ. ಮಹದಾಯಿ ಕುರಿತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಳಿ ನಿಮ್ಮ ಹೆಸರಿಗೆ ಪತ್ರ ಬರೆಸಿ ನಾಟಕ ಮಾಡಿದ ನೀವು ಬಳಿಕ ಅದನ್ನು ಓದಲು ಹುಬ್ಬಳ್ಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಸಿ ಡೊಂಬರಾಟ ನಡೆಸಿದ್ರಿ. ಮಹದಾಯಿ ಕುರಿತು ನೀವು ಮಾಡಿದ ನಾಟಕ ಕ್ಷಮಿಸಲೂ ಅರ್ಹವೇ ಎಂದು ಪ್ರಶ್ನಿಸಿದ್ದಾರೆ.

ರೈತರ ಕುರಿತು ನಮ್ಮ ಸರ್ಕಾರಕ್ಕಿರುವ ಬದ್ಥತೆ ಪ್ರಶ್ನಿಸಲು ನಿಮಗೆ ಯಾವ ಅರ್ಹತೆಯೂ ಇಲ್ಲ ಎಂದು ಗುಡುಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com