ಮಠಗಳ ಸ್ವಾಧೀನ ವಿಚಾರ : ಸರ್ಕಾರ ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗ್ತಿದೆ : ಪೇಜಾವರ ಶ್ರೀ

ಉಡುಪಿ /ಚಿಕ್ಕೋಡಿ : ದೇವಾಲಯ ಹಾಗೂ ಮಠಗಳ ಸ್ವಾಧೀನ ವಿಚಾರ ಕುರಿತಂತೆ ಉಡುಪಿಯ ಪೇಜಾವರ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದು, ಇದು ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ನಾನು ಇದರ ವಿರುದ್ಧ ಹೋರಾಟ ಮಾಡಲ್ಲ, ಜನತೆಗೆ ಬಿಟ್ಟಿದ್ದೇನೆ. ಇದರಿಂದ ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟಗೊಳಿಸುತ್ತಿದೆ. ಜಾತ್ಯಾತೀತ ಸರಕಾರ ಈ ರೀತಿ ಮಾಡಬಾರದು. ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು. ಆದರೆ ಸರಕಾರ ವ್ಯತಿರಿಕ್ತ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಅಲ್ಪಸಂಖ್ಯಾತ ಪ್ರಕರಣವನ್ನು ಕೈ ಬಿಡಲು ಮುಂದಾಗಿತ್ತು. ಮುಗ್ಧರಾದ ಎಲ್ಲರ ಪ್ರಕರಣವನ್ನು ಸರಕಾರ ಕೈ ಬಿಡಲಿ. ಕೃಷ್ಣಮಠವನ್ನು ಸ್ವಾಧೀನಪಡಿಸಿದರೆ, ನಾನು ಮಠದಿಂದ ಹೊರಬರುವೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಇರಲಾರೆ ಎಂದಿದ್ದಾರೆ.

ಇನ್ನು ಇದೇ ವಿಚಾರ ಸಂಬಂದ ಕನೇರಿಯ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಲಾಭ ಪಡೆದುಕೊಳ್ಳದ ಮಠಗಳ ಸೇರ್ಪಡೆ ಕಾಯಿದೆಯಲ್ಲಿ ಬೇಡ. ಈ ಕಾಯಿದೆ ಜಾರಿಯಿಂದ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಸ್ವಾಮೀಜಿಗಳು ರಾಜಕೀಯ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಸಂಬಂಧ ಮಾತನಾಡಿದ ಅವರು, ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿಸುವ ಸಂಪ್ರದಾಯ ಇತ್ತು, ಆದ್ರೆ ಇದೀಗ ಸನ್ಯಾಸವನ್ನೇ ತ್ಯಾಗ ಮಾಡಿ ಸ್ವಾಮೀಜಿಗಳ ರಾಜಕೀಯ ಸೇರ್ಪಡೆಯಾಗುತ್ತಿದ್ದಾರೆ. ಇದು ಎಲ್ಲ ತ್ಯಾಗಕ್ಕಿಂತಲೂ ದೊಡ್ಡ ತ್ಯಾಗ ಎಂದು ಸ್ವಾಮೀಜಿ ವ್ಯಂಗ್ಯವಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com