ತಲೆನೋವು ಅಂತ ಹೋಗಿದ್ದಕ್ಕೆ ಚಿಕಿತ್ಸೆ ಮಾಡಿ ಚಿಪ್ಪನೇ ಕಿತ್ತೆಸೆದ ವೈದ್ಯರು..!!

ಬೆಂಗಳೂರು : ತಲೆ ನೋವು ಎಂದು ಬಂದರೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯನೊಬ್ಬ ತಲೆಯ ಚಿಪ್ಪು ತೆಗೆದು ಎಸೆದಿರುವುದಾಗಿ ಆರೋಪಿಸಿ ಮಂಜುನಾಥ್‌ ಎಂಬುವವರ ತಾಯಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮಂಜುನಾಥ್‌ ಎಂಬುವರು ವರ್ತೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಕಳೆದ ವರ್ಷ ಪೆಬ್ರವರಿ 2ರಂದು ವೈಟ್‌ಫೀಲ್ಡ್‌ನಲ್ಲಿರುವ ತಮ್ಮ ದೊಡ್ಡಮ್ಮನ ಮನೆಗೆ ಹೋಗಿದ್ದ ಮಂಜುನಾಥ್‌ಗೆ ತಲೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್‌ ಸಮೀಪದ ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು.

ಇದರಿಂದ ಗಾಬರಿಯಾದ ಕುಟುಂಬಸ್ಥರು ಸಾಲ ಮಾಡಿ ಮಂಜುನಾಥ್‌ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ಈ ವೇಳೆ ವೈದ್ಯರು ಮಂಜುನಾಥ್‌ ತಲೆಯ ಒಂದು ಭಾಗದ ಚಿಪ್ಪನ್ನು ಹೊರಗೆತೆಗೆದಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಪಡೆದ ಮಂಜುನಾಥ್‌ ಬಳಿಕ ಭದ್ರಾವತಿಗೆ ತೆರಳಿದ್ದರು.

ಐದಾರು ತಿಂಗಳ ಬಳಿಕ ಮತ್ತೆ ಮಂಜುನಾಥ್‌ಗೆ ತಲೆನೋವು ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರಲ್ಲಿ ಪರೀಕ್ಷಿಸಿದಾಗ ಮಂಜುನಾಥ್‌ ತಲೆಯಲ್ಲಿ ಚಿಪ್ಪಿಲ್ಲ ಎಂದಿದ್ದಾರೆ. ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿದ ವೈದ್ಯರು ಚರ್ಮವನ್ನೇ ಹೊಂದಿಕೆ ಮಾಡಿ ಹೊಲಿಗೆ ಹಾಕಿದ್ದಾರೆ ಎಂದಿದ್ದಾರೆ. ಇದರಿಂದ ಗಾಬರಿಯಾದ ತಾಯಿ ರುಕ್ಮಿಣಿ ವೈದೇಹಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ವೈದ್ಯರು ಉಡಾಫೆಯ ಉತ್ತರ ನೀಡಿದ್ದಲ್ಲದೆ,ಚಿಪ್ಪನ್ನು ಎಸೆದಿರುವುದಾಗಿ ಹೇಳಿದ್ದರು ಎಂದು ರುಕ್ಮಿಣಿ ದೂರಿನಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯ ಗುರುಪ್ರಸಾದ್‌ ಹಾಗೂ ರಾಜೇಶ್‌ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com