ವ್ಯಕ್ತಿ ಸತ್ತನೆಂದು ಕಾಸ್ಗಂಜ್‌ನಲ್ಲಿ ಹಿಂಸಾಚಾರ : ನಾನಿನ್ನೂ ಬದುಕಿದ್ದೇನೆಂದ ರಾಹುಲ್‌ ಉಪಾಧ್ಯಾಯ

ಲಖನೌ : ಗಣರಾಜ್ಯೋತ್ಸವ ದಿನದಂದು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಮೃತಪಟ್ಟಿದ್ದರೆನ್ನಲಾದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿ ಜೀವಂತವಾಗಿದ್ದು, ನಾನಿನ್ನೂ ಬದುಕಿದ್ದೇನೆ ಎಂದು ಸ್ವತಃ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಹಿಂಸಾಚಾರದ ವೇಳೆ ರಾಹುಲ್‌ ಉಪಾಧ್ಯಾಯ ಹಾಗೂ ಚಂದನ್‌ ಗುಪ್ತಾ ಎಂಬುವವರು ಮೃತಪಟ್ಟಿದ್ದರು ಎಂಬ ಕಾರಣಕ್ಕೆ ಕಾಸ್ಗಂಜ್‌ನಲ್ಲಿ ಮತ್ತೆ ಪ್ರತಿಭಟನೆ ನಡೆದು ಹಿಂಸಾಚಾರ ನಡೆಸಲಾಗಿತ್ತು.

ತಾನು ಸತ್ತಿದ್ದೇನೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕಾರಣಕ್ಕಾಗಿ ಗಲಭೆ ಎದ್ದಿತ್ತು ಎಂಬುದರ ಬಗ್ಗೆ ನನ್ನ ಸ್ನೇಹಿತನೊಬ್ಬ ನನಗೆ ಮಾಹಿತಿ ನೀಡಿದ. ಕಾಸ್ಗಂಜ್‌ನಲ್ಲಿ ಹಿಂಸಾಚಾರ ನಡೆದಾಗ ನಾನು ಅಲ್ಲಿರಲಿಲ್ಲ, ನನ್ನ ಗ್ರಾಮಕ್ಕೆ ಹೋಗಿದ್ದೆ. ನಾನು ಸತ್ತಿದ್ದೇನೆಂಬ ಸುದ್ದಿ ಸುಳ್ಳು, ನಾನಿನ್ನೂ ಬದುಕಿದ್ದು ಆರೋಗ್ಯವಾಗಿದ್ದೇನೆ ಎಂದು ರಾಹುಲ್‌ ಉಪಾಧ್ಯಾಯ ಹೇಳಿದ್ದಾರೆ.

ಗಲಭೆ ನಡೆಸುವ ಸಲುವಾಗಿಯೇ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್‌ ಉಪಾಧ್ಯಾಯ ಸತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದರು. ಆದರೆ ರಾಹುಲ್‌ ಜೀವಂತವಾಗಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದ ನಾಲ್ವರನ್ನು ಬಂಧಿಸಿದ್ದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಸ್ಗಂಜ್‌ನಲ್ಲಿ ಮೂರು ದಿನಗಳಿಂದ ಹಿಂಸಾಚಾರ ಭುಗಿಲೆದ್ದಿದ್ದು ಇದುವರೆಗೂ ಪೊಲೀಸರು 113 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com