ವಿಷ ಕುಡ್ದು ಸಾಯ್ತೀನೇ ಹೊರತು ಮತ್ತೆ JDS ಗೆ ಹೋಗಲ್ಲ : ಜಮೀರ್ ಅಹ್ಮದ್
ಮಂಡ್ಯ : ನಾವು ಜೆಡಿಎಸ್ ಪಕ್ಷ ಬಿಡ್ತೀವಿ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಕುಮಾರಸ್ವಾಮಿವರೇ ಪಕ್ಷ ಬಿಡು ಅಂತಾ ಹೇಳಿದ್ದಕ್ಕೆ ಜೆಡಿಎಸ್ ಪಕ್ಷ ಬಿಟ್ಟಿದ್ದೀವಿ. ಕುಮಾರಸ್ವಾಮಿ ಯವರೇ ಹೇಳಿದ ಕಾರಣಕ್ಕೆ ನಾವು ರಾಜ್ಯ ಸಭೆಯಲ್ಲಿ ಅಡ್ಡ ಮತದಾನ ಮಾಡಿದ್ದು. ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಕೊಡಿ ಅಂದಿದ್ದೆ ನಾವು ಮಾಡಿದ್ದ ತಪ್ಪು. ಜೆಡಿಎಸ್ ಪಕ್ಷದಲ್ಲಿ ಎಲ್ಲವು ಹಣಕ್ಕಾಗಿ ನಡೆಯುತ್ತದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ.
ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಮೊದಲ ಬಾರಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ 120 ಸ್ಥಾನ ಗೆಲ್ಲೋದಿರಲಿ 60 ಕಡೆ ಮೊದಲು ಅಭ್ಯರ್ಥಿಯನ್ನ ನಿಲ್ಲಿಸಲಿ. ಅಪ್ಪ ಮಕ್ಕಳು ಇಬ್ಬರು ಸೇರಿ ನಮ್ಮ ಮೂರು ಜನರ ಕ್ಷೇತ್ರದಲ್ಲಿ ದಿನ ಬೆಳಗಾದ್ರೆ ಇರ್ತಾರೆ. ಕುಮಾರ ಸ್ವಾಮಿಯನ್ನು ಸಿ.ಎಂ. ಮಾಡಿದ್ದು ದೇವೇಗೌಡ್ರಲ್ಲ ಬದಲಾಗಿ ನಾವುಗಳು. ಇವ್ರ ಹಣೆಬರಹ ದೇವರು ಬರೀತಾರೆ. ನಮ್ಮ ಹಣೇ ಬರಹ ಇವ್ರು ಬರೀಯಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದೇ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿರುವ ಅವರು, ಬಿಜೆಪಿಯವರು ಆರ್ಎಸ್ಎಸ್ ಜೊತೆ ಸೇರ್ಕೊಂಡು ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ಜನರು ಬಿಜೆಪಿ ಇಂತಹ ಕೋಮುವಾದಿ ಬಿಜೆಪಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ವಿಷ ತೆಗೆದುಕೊಂಡು ಬೇಕಾದ್ರೆ ಸಾಯ್ತಿನಿ . ಆದರೆ ಮತ್ತೆ ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸೇರಿ ಪಕ್ಷದ ರಾಜ್ಯದ ವರಿಷ್ಠರು ನಮ್ಮ ಏಳು ಜನರಿಗೂ ಟಿಕೆಟ್ ಕನ್ಫರ್ಮ್ ಮಾಡಿದೆ. ಮಾಧ್ಯಮ ಗಳಲ್ಲಿ ನಮಗೆ ಇನ್ನು ಟಿಕೆಟ್ ಕನ್ಫರ್ಮ್ ಆಗಿಲ್ಲ ಅಂತಾ ಬರ್ತಿದೆ ಇದು ಸುಳ್ಳು. ಒಂದು ವೇಳೆ ಕಾಂಗ್ರೆಸ್ ಪಕ್ಷ ನಮಗೆ ಟಿಕೆಟ್ ಕೊಡದಿದ್ರು ಚಿಂತೆ ಇಲ್ಲ ಪಕ್ಷದ ಕಾರ್ಯಕರ್ತನಾಗೆ ಇದ್ದು ಕೆಲಸ ಮಾಡುತ್ತೇನೆ. ಜೆಡಿಎಸ್ ಪಕ್ಷದಲ್ಲಿ ಕೊಡೋ ಚಿತ್ರಹಿಂಸೆಯನ್ನು ಯಾರು ತಡ್ಕೊಂಡು ಇರ್ತಾರೆ ಎಂದಿದ್ದಾರೆ.