ಗೌರಿಯ ಧ್ವನಿಯನ್ನು ಮೌನವಾಗಿಸಿದಾಗ ನನ್ನಂತಹ ಅನೇಕರು ಹುಟ್ಟುತ್ತಾರೆ : ಪ್ರಕಾಶ್‌ ರೈ

ಬೆಂಗಳೂರು : ನಾವು ಗೌರಿಯನ್ನು ಸಮಾಧಿ ಮಾಡಲಿಲ್ಲ . ಅವರನ್ನು ಬಿತ್ತಿದ್ದೇವೆ. ಅದು ಚಿಕ್ಕದಾಗಿ ಶುರುವಾದ ಧ್ವನಿಯಾಗಿ ಬಳಿಕ ದೊಡ್ಡ ಧ್ವನಿಯಾಗಿ ಹೊರಬರಲಿದೆ ಎಂದು ನಟ ಪ್ರಕಾಶ್‌ ರೈ ಹೇಳಿದ್ದಾರೆ.

ಬದುಕಿದ್ದಾಗ ಜನಪರವಾಗಿ ಹಾಗೂ ಸಮಾಜದ ಒಳಿತಿಗಾಗಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಮಡಿದಾಗ ಅವರನ್ನು ಸಮಾಧಿ ಮಾಡುವುದಿಲ್ಲ. ಬದಲಾಗಿ ಬಿತ್ತುತ್ತೇವೆ. ಅದು ಮತ್ತೆ ಮೊಳೆಕೆಯೊಡೆದು ಹುಟ್ಟಿ ಮರವಾಗಿ ಬಳಿಕ ಹಲವು ಧ್ವನಿಯಾಗುತ್ತದೆ ಎಂದಿದ್ದಾರೆ.

ಗೌರಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್‌ ರೈ, ಕೆಲ ಮರಣಗಳೇ ಹಾಗೆ ಅದು ಸಾಯೋದಿಲ್ಲ. ಬದಲಾಗಿ ಹುಟ್ಟಿಸುತ್ತದೆ. ಒಬ್ಬ ರೋಹಿತ್‌ ವೇಮುಲನ ಮರಣ ಕನ್ಹಯ್ಯ ಕುಮಾರ್‌ನನ್ನು ಹುಟ್ಟಿಸಿತು. ದಲಿತರ ಕೊಲೆಯಾದಾಗ ಜಿಗ್ನೇಶ್‌ ಮೇವಾನಿ ಹುಟ್ಟಿದ್ದಾನೆ. ಗೌರಿಯ ಧ್ವನಿಯನ್ನು ಮೌನವಾಗಿಸಿದಾಗ ನನ್ನಂತಹ ಅನೇಕರು ಹುಟ್ಟಿದ್ದಾರೆ. ಹುಟ್ಟುತ್ತಾರೆ. ಸಹಜ ಸಾವಾಗಿದ್ದರೆ ನಾವೆಲ್ಲರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೆವು. ಆದರೆ ಗೌರಿಯ ಸಾವನ್ನು ನೋಡಿ ಧ್ವನಿಯನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಹೋರಾಡುವ ಶ್ರದ್ಧಾಂಜಲಿಯಾಗಿದೆ ಎಂದಿದ್ದಾರೆ.

ದುರುಳರಿಗೆ ಧ್ವನಿಯೆತ್ತುವವರನ್ನು ಒಂಟಿಯಾಗಿಸಿ ಬೇಟೆಯಡುವ ಅಭ್ಯಾಸ. ಇಂದು ನಾನು ದನಿ ಎತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಗೌರಿಯ ಪ್ರಶ್ನೆ. ಹೌದು ಗೌರಿ ನನ್ನನ್ನು ಕಾಡುತ್ತಿದ್ದಾಳೆ, ನನ್ನನ್ನು ಒಬ್ಬಂಟಿಯಾಗಿ ಏಕೆ ಬಿಟ್ಟೆ ಎಂದು ಪ್ರಶ್ನಿಸುತ್ತಿದ್ದಾಳೆ. ಆಧ್ಯಾತ್ಮಿಗಳಾಗಿದ್ದವರು ಹೇಳುತ್ತಾರೆ ಸತ್ತ ಮೇಲೆ ಅವರು ಮೇಲೆ ನಿಂತು ನಮ್ಮನ್ನು ನೋಡುತ್ತಾರೆ ಎಂದು. ಆದರೆ ಗೌರಿಯಂತಹವರು ಸತ್ತರೆ ಮೇಲೆ ನಿಂತು ನೋಡುವುದಿಲ್ಲ. ನಮ್ಮೆಲ್ಲರ ದನಿಯಾಗಿ ಮಾತನಾಡುತ್ತಾರೆ. ಎಲ್ಲಾ ಶಕ್ತಿಗಳನ್ನು ಒಂದೆಡೆ ಸೇರಿಸಿದ ಮೇಲೆ ಎಲ್ಲರೂ ಸೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.