BJPಯವರು ಜಾತಿ ಕನ್ನಡಕ ಕಳಚಿ, ಮಾನವೀಯ ದೃಷ್ಟಿಯಿಂದ ನೋಡಲಿ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿಯವರು ಜಾತಿ ಕನ್ನಡಕ ಹಾಕಿಕೊಂಡಿದ್ದಾರೆ. ಅವರು ಎಲ್ಲವನ್ನೂ ಆ ಕನ್ನಡಕದಿಂದಲೇ ನೋಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಮುಖ್ಯಮಂತ್ರಿಯವರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಕೋಮು ಗಲಭೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ಮಾತ್ರ ಕೈ ಬಿಡಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ಆರೋಪ ಸರಿಯಲ್ಲ. ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡುವುದೂ ಸಮಂಜಸವಲ್ಲ.

ಯಾವುದೇ ಜಾತಿ, ಧರ್ಮದವರಾಗಿರಲಿ ಜನಪರ ಹೋರಾಟಗಳಲ್ಲಿ ಭಾಗಿಯಾಗಿರುವ ನಿರಪರಾಧಿಗಳ ವಿರುದ್ಧ ಕೇಸು ದಾಖಲಾಗಿದ್ದರೆ ವಾಪಸ್ ಪಡೆಯುತ್ತೇವೆ. ಅಲ್ಪಸಂಖ್ಯಾತರ ವಿಷಯ ಮಾತ್ರ ಏಕೆ ಪ್ರಸ್ತಾಪವಾಗುತ್ತಿದೆ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಅವರ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಾಚಾರ್ ಸಮಿತಿ ನೇಮಕವಾಗಿತ್ತು. ಜತೆಗೆ ರಂಗನಾಥ ಮಿಶ್ರಾ ಅವರ ಸಮಿತಿಯೂ ರಚನೆಯಾಗಿತ್ತು.

ಬಿಜೆಪಿಯವರು ಕೇವಲ ಅಲ್ಪಸಂಖ್ಯಾತರ ಬಗ್ಗೆಯೇ ಬೊಟ್ಟು ಮಾಡಿ ಹೇಳುವುದು ಏಕೆ. ಇಂದಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದವರೂ ಭಾಗವಹಿಸಿಲ್ಲವೇ ? ಬಿಜೆಪಿಯವರು ಮೊದಲು ಜಾತಿ ಎಂಬ ಕನ್ನಡಕವನ್ನು ಕಳಚಿ, ಮಾನವೀಯ ದೃಷ್ಟಿಯಿಂದ ನೋಡುವುದನ್ನು ಕಲಿಯಲಿ ಎಂದು ಮುಖ್ಯಮಂತ್ರಿಯವರು ಹೇಳಿದರು.

ಮಾರ್ಚ್ 11ರಂದು ಎರಡನೇ ಸುತ್ತಿನ ಕಾರ್ಯಕ್ರಮ ನಡೆಯಲಿದೆ. ಕಳೆದ ಏಳು ವರ್ಷದಿಂದ ರಾಜ್ಯ ಪೋಲಿಯೋ ಮುಕ್ತವಾಗಿದ್ದರೂ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ.

ಪಕ್ಕದ ರಾಷ್ಟ್ರಗಳೂ ಪೋಲಿಯೋ ಮುಕ್ತ ಆಗಬೇಕು. ಇಲ್ಲದಿದ್ದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯ ಏಳು ವರ್ಷದಿಂದ ಪೋಲಿಯೋ ಮುಕ್ತವಾಗಿದ್ದರೂ ಲಸಿಕೆ ಕಾರ್ಯಕ್ರಮ ನಿಲ್ಲಿಸುವುದಿಲ್ಲ. ಇದು ನಿರಂತರವಾದ ಪಕ್ರಿಯೆ ಎಂದು ಮುಖ್ಯಮಂತ್ರಿಯವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com