ಗೀತಾ ವಸಂತ ಅಂಕಣ – ಸಖೀಗೀತ : ಚಳಿಯೆಂಬ ಇಳೆಯ ಕಾವ್ಯ ….


ಗದಗುಡುವ ಚಳಿಯಲ್ಲಿ ತೊಗರೊಲೆಯ ಮುಂದೆ ಕುಳಿತು ಮೈ ಕೈ ಬೆಚ್ಚಗಾಗಿಸಿಕೊಳ್ಳುವ ನೆನೆಪು ಜನ್ಮಾಂತರದ ನೆನಪಿನಂತೆಕಾಡುತ್ತದೆ. ಈ ಕ್ಷಣಕ್ಕೂ ಆ ನೆನಪಲ್ಲಿ ಜೀವ ಬೆಚ್ಚಗಾಗುತ್ತದೆ. ಮಳೆಗಾಲದ ತೇವ ಒಸರುತ್ತ ಪಾಚಿಗಟ್ಟಿಹೋಗಿದ್ದ ಮನೆಯಂಗಳ, ತುಳಸಿಕಟ್ಟೆ, ಮುಂದೆ ಹಾವಿನಂತೆ ಹರಿದ ಹಸಿರು ಹಾದಿಗಳೆಲ್ಲ ನಿಧಾನಕ್ಕೆ ಪೊರೆಕಳಚಿದಂತೆ ಬಿಸಿಲಿಗೆ ಮೈಯೊಡ್ಡಿ ಮಲಗಿವೆ. ಚಳಿಗಾಲದ ಮಾಯೆಯೊಂದು ಅವುಗಳ ಮೇಲೆ ತನ್ನ ಮಂಜಿನ ತೆಳು ಸರಗನ್ನು ಮಾಟವಾಗಿ ಹೊದೆಸಿದಂತಿದೆ.ಈ ಋತುಗಳು ಬದಲಾಗುತ್ತ ಇಡಿಯ ಲೋಕವನ್ನುತಮ್ಮತೆಕ್ಕೆಗೆತೆಗೆದುಕೊಂಡು ಕುಣಿಸುವುದೇ ಒಂದು ಚಂದ. ಋತುಗಳ ಪ್ರೇಮ ಲೀಲೆಯಲ್ಲಿ ಹೊಸಬಳಾಗುವ ಮೊದಲಗತ್ತಿಯಂಥ ಭೂಮಿ, ಸದಾ ನವನವೋನ್ಮೇಶಶಾಲಿನಿ.


ಕುಳಿರ್ಗಾಳಿಯಲ್ಲಿ ಮಂಕುಮಂಕಾದಂತೆ ತೋರುವ ಚಳಿಗಾಲಕ್ಕೂ ತನ್ನದೇ ಆದ ಒಂದು ಛಾರ್ಮ್‍ಇದೆ. ಹೊದಿಕೆ ಮೇಲೆ ಹೊದಿಕೆ ಹೊದ್ದು ಬೆಚ್ಚನೆ ಗೂಡನ್ನು ನಿರ್ಮಿಸಿಕೊಂಡು ಲೋಕದ ಕೊಂಡಿಕಳಚಿದಂತೆ ನಿದ್ದೆಮಾಡುವ ಸುಖ ಇನ್ಯಾವಕಾಲದಲ್ಲೂ ಬಾರದು. ಈ ರಗ್ಗು ಗಿಗ್ಗು ಗೊತ್ತಿರದಕಾಲದಲ್ಲಿ ಕಂಬಳಿಗಳೇ ಹೊದಿಕೆ.ಮಲೆನಾಡಿನ ಮಾತುಕತೆಗಳಲ್ಲಿ ಈ ಸಲ ಮೂರು ಕಂಬಳಿ ಚಳಿ, ಈ ಸಲ ನಾಲ್ಕು ಕಂಬಳಿ ಚಳಿ ಎಂದು ಚಳಿಯನ್ನು ಅಳತೆ ಮಾಡುವ ಮಾತುಗಳು ಬಂದು ಹೋಗುವುದುಂಟು. ಕಂಬಳಿಗಳ ಮಧ್ಯೆಥರಗುಡುತ್ತ ಕೊನೆಕೊನೆಗೆ ಹಿತವಾದ ಬೆಚ್ಚನೆ ಭಾವದಲ್ಲಿ ಬೆರೆತುಹೋದಜೀವಕ್ಕೆ ಬೆಳಗಾಗುವುದೇ ಬೇಡವೆಂಬ ಮೊಂಡಾಟ. ಈ ಕಂಬಳಿರಾಶಿಯನ್ನು ಒದ್ದುಎದ್ದು ಬರುವುದೆಂದರೆ, ಭವಭವಗಳನ್ನು ದಾಟಿ ಬರುವಷ್ಟು ಕಷ್ಟ ಎನಿಸುವುದು. ಎದ್ದು ಬಂದದ್ದೇಧಗಧಗಿಸುವ ಬಚ್ಚಲೊಲೆಯ ಮುಂದೆ ನಾವು ಮಕ್ಕಳು ಹಾಜರಾಗುತ್ತಿದ್ದೆವು. ಒಲೆಯೆಂಬೊ ಬ್ರಹ್ಮಾಂಡದೊಳಗ್ಲೆ ಧಗಧಗಿಸುವ ಜ್ವಾಲೆಗಳಲ್ಲಿ ಹದಿನಾಲ್ಕು ಲೋಕಗಳನ್ನು ಕನಸುತ್ತ ಬೆಂಕಿಯಲ್ಲಿ ಅರಳಿದ ಹೂಗಳಂತೆ ಕುಳಿತ ನಮ್ಮನ್ನ್ಲು“ಏಳಿ ಏಳಿದೇವರಪೂಜೆಗೆ ಹೂಕೊಯ್ದುಕೊಂಡು ಬನ್ನಿ” ಎಂಬ ಕಠೋರವಾಣಿ ಕಿವಿಗಪ್ಪಳಿಸುತ್ತ ತಿವಿದು ಎಬ್ಬಿಸುವುದು.


ಚುಮು ಚುಮು ನಸುಕಲ್ಲಿ ಹೊರಬಂದು ಹೂವುಗಳ ಲೋಕ ಹೊಕ್ಕರೆ ತೀರಿತು.  ಮುಕ್ಕೋಟಿ ದೇವರುಗಳೂ ಆ ಹೂವುಗಳಲ್ಲೇ ಪ್ರತ್ಯಕ್ಷವಾದ ಭಾಸ. ಅಜ್ಜಿಗಂಧತೇಯುವ ಸದ್ದು, ಅಜ್ಜನ ಮಂತ್ರಗಳ ನಾದಮಯತೆಯಲ್ಲಿ ಬೆಳಗಿಗೊಂದು ದಿವ್ಯಸ್ವರೂಪ. ಬಿಳಿ, ಕೆಂಪು, ಹಳದಿ ದಾಸವಾಳಗಳು, ರಕ್ತರಂಜಿತ ಕೆಂಪು ಕಾಬಾಳೆ, ಹಳದಿ ಮೇಲೆ ಕೆಂಪು ಚುಕ್ಕಿಯ ಕಾಬಾಳೆ, ಗೆಂಟಿಗೆ, ನಿತ್ಯಪುಷ್ಪ, ನೀಲಿ ಶಂಖಪುಷ್ಪ, ಅಚ್ಚಹಳದಿ ಕೋಟೆ ಹೂ ಇನ್ನೂ ಏನೇನೋ ಹೂಗಳು. ಆ ಹೂವುಗಳ ಮೇಲೆಲ್ಲ ಚುಮುಕಿಸಿದ ಇಬ್ಬನಿ.ಹೂ ತೊಟ್ಟು ಮುಟ್ಟಿದರೆ ಇಬ್ಬನಿಯ ಶೀತಲ ಅನುಭವಕ್ಕೆ ಮೈಯೆಲ್ಲ ಝುಮುಗುಟ್ಟುವುದು. ಕೊನೆ ಕೊನೆಗೆ ಕೈಯೆಲ್ಲ ಮರಗಟ್ಟಿದಂತಾಗುವುದು.ಎತ್ತರಕ್ಕೆ ಬೆಳೆದ ಕರವೀರ ಹೂಗಳನ್ನು ಕೊಯ್ಯಲುಕೊಕ್ಕೆಯೇ ಬೇಕು.ಕೊಕ್ಕೆಯೆಂದರೆ ಬಾಗು ಹಲ್ಲಿರುವ ಉದ್ದನೆಯ ಕೋಲು. ಅದರಕೊಕ್ಕಿನಲ್ಲಿ ಹೂವನ್ನು ಗುರಿಯಿಟ್ಟು ಸಿಕ್ಕಿಸಿ ಎಳೆಯಬೇಕು. ಹೂವಿಗೆ ನೋವಾಗದಂತೆಎಚ್ಚರವಹಿಸಬೇಕು. ಹೀಗೆ ಎಳೆದಾಗ ಇಬ್ಬನಿಯೆಲ್ಲ ಪಟಪಟನೆ ಮೈ ಮೇಲೆ ಮಳೆಗರೆದು ಗದಗುಟ್ಟುವಂತೆ ಮಾಡುವುದು.ಹಾಗೂ ಹೀಗೂ ಹೂವಿನ ಬಿದಿರುಚೊಬ್ಬೆತುಂಬಿ ತುಳುಕುವಾಗ ಖುಷಿಯೇ ಖುಷಿ. ಲೋಕದ ಬಣ್ಣ-ನವಿರು ಎಲ್ಲವನ್ನು ಚೊಬ್ಬೆಯೊಳಗೆ ತುಂಬಿಕೊಂಡಂಥ ರಾಗಗಳು ಮುಂಜಾವಿನ ಮೂಡನ್ನು ಪ್ರಫುಲ್ಲಗೊಳಿಸುವುದು. ಚಪ್ಪಲಿಯಿಲ್ಲದ ಕಾಲಿನಲ್ಲಿ ಹುಲ್ಲಿನ ಹಾಸಿನಮೇಲೆ ನಡೆದುಬರುವಾಗ ಮತ್ತೆ ಈ ಇಬ್ಬನಿಗಳ ದಿವ್ಯಸ್ಪರ್ಷ. ಹುಲ್ಲಿನ ಮೇಲೆ ಹೊಳೆಯುತ್ತಾ ಸೂರ್ಯನನ್ನೇ ಪ್ರತಿಫಲಿಸುವ ಅವುಗಳ ಡೌಲು ಹೇಳತೀರದು. ನಿಧಾನಕ್ಕೆಅವರಿಸುವ ಎಳೆಬಿಸಿಲ ಕಚಗುಳಿ, ಕೈಗಳನ್ನು ಅಘ್ರಾಣಿಸಿದರೆ ಮೋಹಗೊಳಿಸುವಂಥ ಹೂಗಳ ಮಿಶ್ರಗಂಧ, ದೂರದೂರಕ್ಕೆ ದಿಟ್ಟಿಹಾಯಿಸಿದಂತೆಲ್ಲ ಮಂಜಿನ ಸೆರಗುಕಳಚಿ ತಮ್ಮಉಬ್ಬು ತಗ್ಗುಗಳ ದಿವ್ಯದರ್ಶನ ಮಾಡಿಸುವ ಬೆಟ್ಟ ಗುಡ್ಡಗಳ ವಿಸ್ತಾರ… ಭುವಿಯೆಂಬ ಸ್ವರ್ಗದಲ್ಲಿ ಲೀಲೆಯಿಂದ ನಡೆಯುತ್ತ ಮತ್ತೆ ಮನೆಯ ಹೊಸ್ತಿಲು ತುಳಿಯುವಷ್ಟರಲ್ಲಿ ಮಗೆಕಾಯಿ ತೆಳ್ಳೆವ್ವಿನ ಘಮಕ್ಕೆ ರಸನೇಂದ್ರಿಯಗಳೆಲ್ಲ ಚುರುಕಾಗುವುದು. ಮೂಗರಳಿ, ನಾಲಿಗೆಯಲ್ಲಿ ನಿರೂರಿ ಬಾಳೆ ಎಲೆಯ ಮುಂದೆ ಹಾಜರಾಗುವುದು.ಚಳಿಗಾಲವು ಹೀಗೆ ರೂಪ, ರಸ, ಗಂಧ, ಸ್ಪರ್ಷ, ವಾಸನೆಗಳನ್ನೆಲ್ಲ ಕೆರಳಿಸಿ ತಣಿಸಿ ಅರಳಿಸುವ ಪರಿಗೆ ಮನ ಶರಣೆನ್ನುವುದು.
ಬೆಳ್ಳಂಬೆಳಗ್ಗೆ ಶಾಲೆಗೆ ಹೋಗುವ ದಾರಿಯಂತೂ ಗಂಧರ್ವರಾ ಸೀಮೆಯೇ ಸೈ. ಗುಡ್ಡಗಳನ್ನೇರುತ್ತ ಇಳಿಯುತ್ತ ಸಾಗುವ ನಾವು ಬಾಲಗಂಧರ್ವರು.ಇಬ್ಬನಿಯ ಕೊನೆಯಿಲ್ಲದ ಲೀಲೆಗೆ ಬೆರಗೋ ಬೆರಗು.ಎಲ್ಲಿ ನೋಡಿದರಲ್ಲಿ ಪೋಣಿಸಿದ ಮುತ್ತಿನ ಮಣಿಗಳಂತೆ ಚೆಲ್ಲಿಚೆಲ್ಲವರಿದ ಸ್ವರ್ಗದ ಹನಿಗಳು.ಈ ಹನಿಗಳು ಮುಂದೆ ಶಾಲೆ, ಕಾಲೇಜುಗಳಲ್ಲಿ ಕವಿಸಾಲುಗಳಲ್ಲೂ ಕಾಣಿಸಿಕೊಂಡವು.


ಎಲೆಗಳ ಮೇಲೇ ಹೂಗಳ ಒಳಗೇ
ಅಮೃತದ ಬಿಂದು
ಕಂಡವು- ಅಮೃತದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೇತಂದು
ಈಗ ಇಲ್ಲಿಗೇತಂದು.

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು – ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು… (ಬೆಳಗು- ಬೆಂದ್ರೆ)
ಬೆಳಗಿನ ಬಣ್ಣ-ಭಾವಗಳನ್ನು ತುಂಬಿಕೊಳ್ಳುತ್ತಾ ಶಾಲೆಗೆ ಹೋಗುವಾಗ “ಕಾಣದೋ ಬಣ್ಣಾ ಕಣ್ಣಿಗೆಕಾಣದೋ ಬಣ್ಣಾ” ಎಂಬ ಬೇಂದ್ರೆಯ ಸಾಲುಗಳು ಅರ್ಥವಾಗದೇಕಾಡುವವು. ಈ ಕಾಣದ ಬಣ್ಣಗಳ ಬೇಟೆಗಾರ ಆಮೇಲೆ ದಕ್ಕಿದಎಂಬುದು ಬೇರೆ ಮಾತು! ಅದುಕಾವ್ಯಲೀಲೆಯ ಮಾತು. ಕಾಡಿನ ಕವಿ ಕುವೆಂಪು ಅವರನ್ನು ಈ ಇಬ್ಬನಿ ಇನ್ನಿಲ್ಲದಂತೆ ಕಾಡಿದೆ.

ಸ್ವರ್ಗವನು ಬೇಟೆಯಾಡಲು ಹೊರಟೆ ಹೊತ್ತಾರೆ
ಹಸಿದ ಹೆಬ್ಬುಲಿಯಂತೆ, ಸೌಂದರ್ಯಧೇನುವಾ
ಭಾದ್ರಪದ ಮಾಸದಾ ಪ್ರಾತಃಸಮಯ ಸೂರ್ಯ
ಸುಂದರ ಮರೀಚಿಯಲಿ ಮಿಂದು, ತೃಣಗಣ ಶಿರದಿ
ಕುಣಿಕುಣಿವ ಹಿಮಮಣಿಯ ಸಾಸಿರ ಸೊಡರ್ಗಳಿಂ
ರಮಣೀಯವಾಗಿತ್ತು, ಹುಡಿಮಾಡಿಕಿಡಿಯಿಟ್ಟು
ಮಳೆಬಿಲ್ಲನವನಿಯೊಳೆರಚಿದಂತೆ!….. (ಹಿಮಮಣಿ – ಕುವೆಂಪು)
ಹಸಿರುಕ್ಕಿ ಹರಿಯುವಾ ಹುಲ್ಲೆಸಳ ಮುಡಿಯತುದಿ
ಮಣಿದೀಪವೆನೆಉರಿವಉಜ್ಜಲ ಹಿಮದ ಬಿಂದು!
ಸೌಂದರ್ಯದೇವತೆಯ ಮೂಗುತಿಯ ಹನಿಮುತ್ತು
ನೇಲುತಿದೆ, ಜೋಲುತಿದೆ, ಮಿರುಮಿರುಗಿತಿದೆ ನೋಡು! (ಹಿಮಮಣಿ – ಕುವೆಂಪು)


ಸೌಂದರ್ಯ ಸಾಕಾರರೂಪದಂತೆ ಕಂಡ ಇದೇ ಇಬ್ಬನಿ ಇನ್ನೊಂದೆಡೆ ಕಬ್ಬಿಗನ ಅಪರೂಪದ ಸಂಪತ್ತಾಗಿ ಅವರಿಗೆ ಕಂಡಿದೆ. ಇನ್ನೊಂದೆಡೆ ಆಕಾಶದಿಂದ ಬಿದ್ದ ಸೂರ್ಯನ ಕಿಡಿಯಾಗಿ, ಸೂರ್ಯನನ್ನೇ ಪ್ರತಿಫಲಿಸುವ ದಿಟ್ಟ ಬಿಂದುವಾಗಿ ಕಂಡಿದೆ.ಯಾವುದೂ ಅಮುಖ್ಯವಲ್ಲ ಎಂಬ ಅವರದರ್ಶನಕ್ಕೂಇಬ್ಬನಿಕನ್ನಡಿ ಹಿಡಿದಿದೆ.
ಹೀಗೆಲ್ಲ ಯೋಚಿಸುತ್ತ  ಚಳಿಹಿಡಿದ ಹಾದಿಗಳಲ್ಲಿ ವಾಕಿಂಗ್ ಹೋಗುವಾಗ ಯಾರದೋ ಮೊಬೈಲ್‍ನಲ್ಲಿ “ಇಬ್ಬನೀತಬ್ಬಿದಾ ಇಳೆಯಲಿ ರವಿತೇಜಾಕಣ್ಣತೆರೆದೂ…” ಎಂಬ ಹಾಡುರಿಂಗಣಿಸುತ್ತದೆ. ಎಳೆವಯದ ಪ್ರೇಮಿಗಳು ಕೈ ಕೈ ಹಿಡಿದು ನಡೆಯುವುದು ಕಾಣಿಸುತ್ತದೆ. ಸ್ಪೆಟರ್ ಮಫ್ಲರ್‍ಗಳಲ್ಲಿ ಬೆಚ್ಚಗಾಗುತ್ತ ಪರಸ್ಪರ ಒತ್ತಾಸೆಯಾಗಿ ಕುಳಿತ ವೃದ್ಧ ದಂಪತಿಗಳು ಕಾಣಿಸುತ್ತಾರೆ.ಜಗತ್ತು ಪ್ರೇಮಮಯವಾಗಿದೆ ಎನಿಸಲು ಇಂಥ ಒಂದೆರಡು ದೃಶ್ಯಕಾವ್ಯಗಳು ಸಾಕು. ಇನ್ನುಪ್ರೇಮಕಾವ್ಯಗಳ ತುಂಬೆಲ್ಲ ಚಳಿಯ ಸಾಲುಗಳು… ವಿರಹದ ಪಲಕುಗಳು… ಇನಿಯನನ್ನುತಬ್ಬುವ ಕನವರಿಕೆಗಳು ಹಾಸಿ ಹರಡಿವೆ.ತನ್ನದೈನಂದಿನ ಜಂಜಡಗಳಲ್ಲಿ ಕಳೆದು ಹೋಗಿರುವ ಅವನು ಬಂದಾನೋ… ಬಾರನೋ… ಎಂಬ ಜೋಕಾಲಿಯಲ್ಲಿ ಜೀಕುತ್ತ ಚಿತ್ತ ಮಂಜಿನಲ್ಲಿ ಮರೆಯಾಗಿ ಹೋಗುವುದು… ಅವನನ್ನು ಹುಡುಕುತ್ತಾ ಹುಡುಕುತ್ತಾ ದಾರಿಗಳೇ ಕಾಣಿಯಾಗುವುದು…. ಕನಸಿನಲಿ ಉರಿವಒಲೆಯಲಿ ಅಂಗಾಂಗ ಅರಳಿ ಬೆಚ್ಚಗಾಗುವುದು…ಎಚ್ಚರದಲ್ಲಿ ಇಬ್ಬನಿತಂತೆಕರಗುವದು..ಎಲ್ಲಕಾವ್ಯದಂತಿದೆ. ಋತುಗಳು ಸರಿದಂತೆ ಅವುಗಳ ಜೊತೆ ಚಲಿಸುತ್ತ ಮನಸು ಒಂದಷ್ಟು ಮಾಗಿದಂತಿದೆ.ಎಷ್ಟೋ ಮಾಗಿಯ ಛಳಿಗೆ ಸಾಕ್ಷಿಯಾಗಿದೆ.ಕ್ಷಣಿಕವಾಗಿ ಹೊಳೆದು, ಹೊಮ್ಮಿ, ನೆಲದಲ್ಲಿ ಇಂಗಿಹೋಗುವ ಇಬ್ಬನಿಯಂತೆ ನೆನಪುಗಳು ಎದೆಯಲ್ಲಿಇಂಗುತ್ತಒರತೆಯಾಗಿವೆ. ಒಮ್ಮೊಮ್ಮೆ ಪುಳಕ, ಒಮ್ಮೊಮ್ಮೆ ನಡುಕುವನ್ನುಂಟು ಮಾಡುತ್ತವೆ. ಥೇಟ್‍ಕಾವ್ಯದಂತೆ.

Leave a Reply

Your email address will not be published.

Social Media Auto Publish Powered By : XYZScripts.com