ದೇಶದ ಆ ಚೇತನ ಇಲ್ಲದ ಮೇಲೆ… ನಗು ಮೂಡೀತು ಹೇಗೆ… ನೆನಪು ಮಾಸೀತು ಹೇಗೆ…?

ಎದ್ದು ನಿಂತ ಅವರಿಬ್ಬರೂ ಅರೆಕ್ಷಣ ಪರಸ್ಪರ ದಿಟ್ಟಿಸಿದ್ರೂ ಅಲ್ಲಿದ್ದಿದ್ದು ಶೂನ್ಯ ಭಾವ.. ಜೊತೆ ಜೊತೆಯಾಗಿ ಹೆಜ್ಜೆಯಿಡುತ್ತಾ ಸಾಗುತ್ತಿದ್ದ ಅವರಿಗೆ ಗೌರವರಕ್ಷೆ, ವಂದನೆ ಇತ್ತು… ಸಾವಿರಾರು ವಿವಿಐಪಿ ಕಣ್ಗಳು ಇವರತ್ತಲೇ ದೃಷ್ಟಿಯಿಟ್ಟಿದ್ರೂ ಅಲ್ಲಿದ್ದಿದ್ದು ಘನಮೌನ… ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದ ಆಕೆಗೆ ಆ ದಿನ, ತಾಯ್ತನ ತಂದುಕೊಟ್ಟ ಆ ಕ್ಷಣ ನೆನಪಾಗಿದ್ದಿರಬಹುದು..

ಮೊದಲ ಬಾರಿಗೆ ಕಂದನನ್ನ ಎತ್ತಿ ಮುದ್ದಾಡಿದ್ದು, ತಲೆ ನೇವರಿಸಿದ್ರಿಂದ ಹಿಡಿದು ಕಡೆಯ ಬಾರಿ ನೋಡಿದ ಮುಖ, ಕೇಳಿದ್ದ ದನಿ ನೆನಪಾಗಿರಬಹುದು.. ಈಕೆಗೆ ಕಳೆದಿದ್ದ ಮೊದಲ ಭೇಟಿಯ ಸಿಹಿ ಕ್ಷಣ, ಕೊನೆ ಮಾತು ಕಣ್ಮುಂದೆ ಬಂದಿರಬಹುದು.. ಒಂದೊಂದೇ ಮೆಟ್ಟಿಲು ಹತ್ತಿ ಸಾಗಿದ ಅವರು ಎದುರಾಗಿದ್ದು ದೇಶದ ಗಣ್ಯಾತಿಗಣ್ಯರ ದಂಡು.. ಇವರ ಬರುವಿಕೆಗಾಗಿ ಕಾದು ನಿಂತಿದ್ದಿದ್ದು ರಾಷ್ಟ್ರದ ಅತ್ಯುನ್ನತ ವ್ಯಕ್ತಿ , ದೇಶದ ಮೊದಲ ಪ್ರಜೆ..


ಅವರ ಮುಂದೆ ಇವರು ನಿಂತಾಗ ಹಿನ್ನಲೆಯಲ್ಲಿ ಕೇಳಿಬಂದಿದ್ದು ಕರ್ತವ್ಯಕ್ಕಾಗಿ ಸರ್ವಸ್ವವನ್ನ ಅರ್ಪಿಸಿ ಅಗಲಿದ ಆ ಚೇತನದ ಯಶೋಗಾಥೆ.. ಮರುಘಳಿಗೆಯಲ್ಲೇ ಅವರಿಬ್ಬರಿಗೂ ದೇಶದ ಅಗ್ರಮಾನ್ಯ ವ್ಯಕ್ತಿ ಯಿಂದ ಗೌರವ ನಮಸ್ಕಾರ.. ಕೈಗಿತ್ತಿದ್ದು ಬೆಲೆ ಕಟ್ಟಲಾಗದ ಗೌರವಯುತ ಬಿರುದು.. ಇಡೀ ದೇಶ ಇವರಿಬ್ಬರನ್ನ ಗೌರವಿಸಿದೆ, ಗುರುತಿಸಿದೆ, ಗಮನಿಸಿದೆ.. ಇಷ್ಟಾದ್ರೂ ಅವರಿಬ್ಬರ ಮೊಗದಲ್ಲಿ ಅದೇ ಶೂನ್ಯಭಾವ.. ಯಾಕಂದ್ರೆ ಈ ಬಿರುದು – ಅತ್ಯುನ್ನತ ಗೌರವದ ಹೆಮ್ಮೆಗೆ ಕಾರಣವಾದ ಚೇತನ ಈಗ ಜೊತೆಯಲ್ಲಿಲ್ಲ.. ಇದ್ದಿದ್ದು ಕೇವಲ ಈ ಜನ್ಮಕ್ಕಾಗುವಷ್ಟು ನೆನಪು ಮಾತ್ರ..


ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸೇನೆಯ ಅತ್ಯುನ್ನತ ಗೌರವ ಮರಣೋತ್ತರ ಅಶೋಕ ಚಕ್ರ ಗೌರವಕ್ಕೆ ಪಾತ್ರರಾದ ಹುತಾತ್ಮ ವೀರ ಯೋಧ ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ಅವರ ಹೆತ್ತ ತಾಯಿ ಮತ್ತು ಮಡದಿಯನ್ನ ಕಂಡಾಗ ನನ್ನ ಮನದಲ್ಲಿ ಓಡಿದಿಷ್ಟು…

ಅಮರ ಜವಾನರಿಗೆ ಜೈ,

ಪ್ರಶಾಂತ್‌ ಬಿ.ಆರ್‌ ಅವರ ಫೇಸ್‌ಬುಕ್‌ ವಾಲ್‌ನಿಂದ

Leave a Reply

Your email address will not be published.

Social Media Auto Publish Powered By : XYZScripts.com