ಕೇವಲ ರಾಜಕೀಯದಿಂದ, ಮತ-ಧರ್ಮದ ಚಿಂತನೆಯಿಂದ ರಾಜ್ಯ ಅಭಿವೃದ್ಧಿಯಾಗಲ್ಲ : CM

ಬೆಂಗಳೂರು :  ರಾಜ್ಯದ ಹಲವೆಡೆ ಇಂದು 69ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ.ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿದ್ದಾರೆ.

ಚಿಕ್ಕಬಳ್ಳಾಪುರದ ಕ್ರೀಡಾಂಗಣದ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ಮಾಡಿದರು. ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿಸಚಿವ ಬಸವರಾಜ ರಾಯರೆಡ್ಡಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಯಾದಗಿರಿಯಲ್ಲೂ ಸಚಿವ ಪ್ರಿಯಾಂಕ್‌ ಖರ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನವರಿ 26 ಕ್ಕೆ ವಿಶೇಷವಾದ ಮಹತ್ವವಿದೆ. 1947 ರ ಆಗಸ್ಟ್ 15 ನಾವು ಬ್ರಿಟೀಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದ ಮಹತ್ವದ ದಿನವಾದರೆ, 1950 ರ ಜನವರಿ 26 ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಜಾತ್ಯಾತೀತ ಮೌಲ್ಯಗಳ ಆಧಾರದಲ್ಲಿ ದೇಶವನ್ನು ಕಟ್ಟಲು ಸಂಕಲ್ಪ ಮಾಡಿದ ನಿರ್ಣಾಯಕ ದಿನ. ಸಂವಿಧಾನದ ಈ ಮೂಲಭೂತ ಆಶಯಗಳಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
ನಮ್ಮ ಈ ಸ್ವರಾಜ್ಯ ಬ್ರಿಟೀಷ್ ಸಂಸತ್ತಿನ ಉಡುಗೊರೆಯಾಗಿರುವುದಿಲ್ಲ. ಅದು ನಮ್ಮ ಭಾರತದ ಸಂಪೂರ್ಣ ಅಭಿವ್ಯಕ್ತಿಯ ಘೋಷಣೆಯಾಗಿರುತ್ತದೆ. ಅದು ನಮ್ಮ ದೇಶದ ಉತ್ಕೃಷ್ಠ ರಕ್ತದಿಂದ ಪಡೆದ ನಿಧಿಯಾಗಿರುತ್ತದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯಾ ಪೂರ್ವದಲ್ಲಿ ಭವಿಷ್ಯ ನುಡಿದಿದ್ದರು. ಆ ನಿಧಿ ದೇಶದ ಜನರ ಬದುಕಿನಲ್ಲಿ ಸಾಕಾರಗೊಂಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಮೂಲಕ.
ನಮ್ಮಲ್ಲಿ ದೇಶದ ಅರಿವನ್ನೂ ಹಾಗೂ ದೇಶಾಭಿಮಾನದ ಕಿಚ್ಚನ್ನೂ ಹೊತ್ತಿಸಿದ್ದು ರಾಷ್ಟ್ರೀಯ ಚಳುವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧಿ ಅವರ ಮುಂದಾಳತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳುವಳಿಯ ಭದ್ರ ಬುನಾದಿ ರೂಪುಗೊಂಡಿದ್ದೇ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿ ನಡೆದುಕೊಂಡು ಬರುತ್ತಿರುವ ಭಾರತದ ಪ್ರಜಾಪ್ರಭುತ್ವ.
ಗಣರಾಜ್ಯೋತ್ಸವದ ಶುಭ ದಿನವಾದ ಇಂದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದಿಷ್ಟು ಚಿಂತನೆಗಳನ್ನು ನನ್ನ ನಾಡ ಜನತೆಯಲ್ಲಿ ಹಂಚಿಕೊಳ್ಳಬಯಸುತ್ತೇನೆ. ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.
ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜ ಧರ್ಮ ಎಂದು ಮುಖ್ಯಮಂತ್ರಿಯಾದ ನಾನು ತ್ರಿಕರಣ ಪೂರ್ವಕವಾಗಿ ನಂಬಿಕೊಂಡು ಬಂದಿದ್ದೇನೆ.

ಅಭಿವೃದ್ಧಿಯ ಬಾಗಿಲುಗಳನ್ನು ತೆರೆಯಲು ರಾಜಕೀಯ ಅಧಿಕಾರ ಮುಖ್ಯ ಕೀಲಿ ಕೈ ಎಂಬ ಡಾ ಬಿ. ಆರ್. ಅಂಬೇಡ್ಕರ್ ಅವರ ಕಿವಿಮಾತು ನನ್ನ ರಾಜಕೀಯ ಜೀವನದ ನಿಲುವು ಕೂಡಾ ಆಗಿದೆ.
ಇಡೀ ವಿಶ್ವಕ್ಕೇ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನೀಡಿದ ಡಾ ಬಿ. ಆರ್. ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ ಆತ್ಮ ಇಲ್ಲದ ದೇಹ ಇದ್ದಂತೆ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ ಎಂದಿದ್ದಾರೆ.

ಡಾ ಬಿ. ಆರ್. ಅಂಬೇಡ್ಕರ್ ಅವರು 1950 ರ ಜನವರಿ 26 ರಂದು ಸಂವಿಧಾನ ಜಾರಿಗೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಸದಾ ಕಾಲ ನೆನಪಿಡಬೇಕಾದ ಒಂದು ಮಾತನ್ನು ಹೇಳಿದ್ದರು. ಈ ದಿನ ಭಾರತೀಯರಾದ ನಾವು ಒಂದು ವೈರುದ್ಯಗಳ ಘಟ್ಟಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ರಾಜಕೀಯವಾಗಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಹೋಗುತ್ತಿರುತ್ತೇವೆ. ಆದರೆ, ಅದೇ ವೇಳೆ, ಸಾಮಾಜಿಕ ಮತ್ತು ಆರ್ಥಿಕ ರಚನೆಗಳಲ್ಲಿ ಅಸಮಾನತೆ ಮುಂದುವರೆಯುತ್ತಲೇ ಇರುತ್ತದೆ. ಇಂತಹ ವೈರುಧ್ಯಗಳು ಮುಂದುವರೆಯುತ್ತಾ ಹೋದರೆ, ನಾವು ಶ್ರಮವಹಿಸಿ ಕಟ್ಟಿದ ಪ್ರಜಾ ಪ್ರಭುತ್ವದ ಸೌಧವನ್ನು ಅಸಮಾನತೆಯಿಂದ ಬಾಧಿತರಾಗುವ ಶೋಷಿತರೇ ಕೆಡವಿ ಹಾಕಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗಣರಾಜ್ಯದ ದಿನವಾದ ಇಂದು ನಾವು ಮುಖ್ಯವಾದ ಎರಡು ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ. ಆ ಮೂಲಕ ದೇಶದ ಸಾರ್ವಭೌಮತ್ವವನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು.
ದೇಶ ನಿಜಕ್ಕೂ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ. ಇದನ್ನು ಸಾಧಿಸಬೇಕೆಂದರೆ ಸಾವಿರಾರು ಜಾತಿಗಳಾಗಿ, ಮೇಲು-ಕೀಳು ಎಂಬ ತಾರತಮ್ಯಗಳಲ್ಲಿ ಛಿದ್ರವಾಗಿರುವ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆಯನ್ನು ಸ್ಥಾಪಿಸಿ ದೇಶವನ್ನು ಆಂತರಿಕವಾಗಿ ಸದೃಢಗೊಳಿಸಬೇಕಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ನಮ್ಮ ಸರ್ಕಾರ ಮುನ್ನಡೆದಿದೆ.

ಜಾತ್ಯಾತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲೊಂದು. ಇದು ಅನ್ಯ ಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಉದಾತ್ತ ಮಾನವೀಯ ಗುಣ. ಜಾತಿ-ಧರ್ಮವನ್ನು ಮೀರಿ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಪಂಪ ಮಹಾಕವಿಯ ವಾಣಿ ಕೂಡಾ ಸಂವಿಧಾನದ ಈ ಆಶಯವನ್ನೇ ನೆನಪುಮಾಡಿ ಕೊಡುತ್ತದೆ.
ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹು ಧರ್ಮ, ಬಹು ಭಾಷೆ ಮತ್ತು ಬಹು ಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯವಿಲ್ಲ. ವೈಚಾರಿಕ ಮತ್ತು ಸಾಮಾಜಿಕ ಸಹಿಷ್ಣುತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಇತ್ತೀಚೆಗೆ ಅಸಹಿಷ್ಣುತೆ ಎನ್ನುವುದು ರಾಷ್ಟ್ರೀಯ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದಿದೆ. ಪ್ರಜಾಪ್ರಭುತ್ವದ ಆಶಯಗಳಗೆ ಅನುಗುಣವಾಗಿ ಸಾಂಸ್ಕøತಿಕವಾಗಿ ದೇಶವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳಿಂದ ಹಿಡಿದು ಸಾಮಾನ್ಯ ಮನುಷ್ಯನವರೆಗೆ ಎಲ್ಲರೂ ದೇಶಾದ್ಯಂತ ಅಸಹಿಷ್ಣುತೆಯ ವಿರುದ್ಧ ಧ್ವನಿ ಎತ್ತತೊಡಗಿದ್ದಾರೆ. ಈ ರೀತಿ ದನಿ ಎತ್ತುವವರ ದಮನ ಕಾರ್ಯವೂ ನಡೆಯುತ್ತಿದೆ. ಅವರನ್ನು ನಿಂದಿನಿ ಹಂಗಿಸಿ ನೈತಿಕವಾಗಿ ಕುಸಿದು ಹೋಗುವಂತೆ ಮಾಡುವ ಪ್ರಯತ್ನವೂ ಮುಂದುವರೆಯುತ್ತಿದೆ. ಇದು ಪ್ರಜಾತಂತ್ರದ ನಡೆ ಅಲ್ಲ.
ಕೇವಲ ರಾಜಕೀಯದಿಂದಾಗಲೀ, ಮತ-ಧರ್ಮದ ಚಿಂತನೆಗಳಿಂದಾಗಲೀ ದೇಶದ ಅಭಿವೃದ್ಧಿ ಸಾಧ್ಯವಾಗದು. ನಿಜವಾಗಿಯೂ ದೇಶ ಅಭಿವೃದ್ಧಿ ಹೊಂದುವುದು ವೈಜ್ಞಾನಿಕ ಪ್ರಗತಿ, ತಂತ್ರಜ್ಞಾನದ ಅಭಿವೃದ್ಧಿ ಮತ್ತು ವೈಚಾರಿಕ ಚಿಂತನೆಗಳಿಂದ.
ರಾಜಕೀಯ ಮತ್ತು ಧರ್ಮ ಎರಡೂ ಹಳತಾಗಿ ಬಿಟ್ಟಿವೆ. ಈ ಕಾಲ ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅಪ್ಪಿಕೊಳ್ಳುವ ಕಾಲ ಎಂದು ಭಾರತದ ಪ್ರಥಮ ಪ್ರಧಾನಿ ಮತ್ತು ಮುತ್ಸದ್ಧಿ ರಾಜಕಾರಣಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಹೇಳಿದ್ದರು. ಈ ಆಶಯಗಳನ್ನು ಸಾಕಾಗೊಳಿಸುವುದು ಜನರಿಂದ ಆಯ್ಕೆಯಾದ ಪ್ರತಿಯೊಂದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಪಾಲನೆ ಮಾಡುವ ನಮ್ಮ ಕೈಗಳಿಗೆ ತಮ್ಮ ಸಹಕಾರ ಮತ್ತು ಸದಾಶಯದ ಬೆಂಬಲ ಸದಾ ಇರಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com