ಸಿದ್ದರಾಮಯ್ಯ ಏನು ಅಂತ ದೇಶಕ್ಕೇ ಗೊತ್ತು, ನಾನು ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದವನಲ್ಲ : CM

ಮೈಸೂರು : ನಾನು ಏನು, ರಾಜಕಾರಣದಲ್ಲಿ ಹೇಗೆ ಬದುಕುತ್ತಿದ್ದೇನೆ. ನನ್ನ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯ, ದೇಶದ ಜನರಿಗೆ ಗೊತ್ತಿದೆ. ನನ್ನ ರಾಜಕೀಯ ತೆರೆದ ಪುಸ್ತಕ. ಹೀಗಿರುವಾಗ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರು ನನ್ನ ಬಗ್ಗೆ ಹೇಳುವ ಸುಳ್ಳುಗಳನ್ನು ಜನ ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಜನತೆ ನಮಗಿಂತ ಬಹಳ ಬುದ್ಧಿವಂತರು. ನಾನೊಬ್ಬನೇ ಬುದ್ಧಿವಂತ ಎಂದು ತಿಳಿದುಕೊಂಡರೆ ಅದು ಮೂರ್ಖತನ. ಸಿದ್ದರಾಮಯ್ಯ ಏನು ಎಂಬುದು ಮೈಸೂರು ಜಿಲ್ಲೆಯವರೂ ಸೇರಿದಂತೆ ರಾಜ್ಯದ ಜನರಿಗೆ ಗೊತ್ತಿದೆ. ನಾನು ನಿನ್ನೆ, ಮೊನ್ನೆ ಅಧಿಕಾರಕ್ಕೆ ಬಂದಿಲ್ಲ. 1984ರಲ್ಲೇ ಮಂತ್ರಿಯಾಗಿದ್ದೆ. ರಾಜ್ಯದ ಜನತೆ ನನ್ನನ್ನು ಗಮನಿಸುತ್ತಿದ್ದಾರೆ. ಪರಿವರ್ತನಾ ಯಾತ್ರೆ ಹೆಸರಲ್ಲಿ ಇಲ್ಲಿಗೆ ಬಂದು ನನ್ನ ಬಗ್ಗೆ ಸುಳ್ಳು ಹೇಳಿದರೆ ಜನ ನಂಬುವರೇ ? ಬದಲಾವಣೆ ಆಗುವರೇ ? ಎಂದು ಪ್ರಶ್ನಿಸಿದ್ದಾರೆ.

ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ ?. ಈ ಜಿಲ್ಲೆಗಳಲ್ಲಿ ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಸುಮ್ಮನೆ ತಮಟೆ ಬಾರಿಸಿಕೊಂಡು, ಪುಂಗಿ ಊದಿಕೊಂಡು ಓಡಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರು ಮಾಡಿದ್ದಾದರೂ ಏನು ? ಜೈಲಿಗೆ ಹೋಗಿ ಬಂದಿದ್ದೇ ಅವರ ಸಾಧನೆ. ಸುಮ್ಮನೆ ಕಥೆ, ಸುಳ್ಳು ಹೇಳಿಕೊಂಡು ತಿರುಗಾಡಬಾರದು ಎಂದಿದ್ದಾರೆ.

ನಾವು ಇನ್ನೊಬ್ಬರನ್ನು ಟೀಕೆ ಮಾಡುವಾಗ ನಮ್ಮದೇನಿದೆ ಎಂದು ನೋಡಿಕೊಳ್ಳಬೇಕು. ಶ್ರೀನಿವಾಸ ಪ್ರಸಾದ್ ಸೋಲಿನ ಹತಾಶೆಯಿಂದ ನನ್ನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ. ಅವರ ಮಟ್ಟಕ್ಕೆ ಹೋಗಿ ನಾನು ಮಾತನಾಡಲಾರೆ. ನನ್ನ ಸಂಪುಟದಲ್ಲಿ ಅವರು ಮಂತ್ರಿ ಆಗಿರಲಿಲ್ಲವೇ. ಆಗ ಏಕೆ ಮಾತನಾಡಲಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದಿರುವ ಪ್ರಕಾಶ್ ಜಾವಡೇಕರ್ ಅವರಿಗೆ ಜ್ಯೋತಿಷ್ಯ ಏನಾದರೂ ಗೊತ್ತೇ ? ಕರ್ನಾಟಕದ ಬಗ್ಗೆ ಅವರಿಗೇನು ಗೊತ್ತು ? ಯಡಿಯೂರಪ್ಪ ಅವರಿಗೇ ಕರ್ನಾಟಕ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

 

Leave a Reply

Your email address will not be published.