‘ರಾಜಕಾರಣದಲ್ಲಿ ಧರ್ಮವಿರಬೇಕು, ಧರ್ಮದಲ್ಲಿ ರಾಜಕಾರಣ ಬೆರೆಸಬಾರದು’ : CM

ಬೆಂಗಳೂರು : ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣವನ್ನು ಯಾರೂ ಬೆರೆಸಬಾರದು. ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವವರು ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ ನೀಡಿರುವ ಸಂದೇಶವನ್ನು ಅರ್ಥ ಮಾಡಿಕೊಂಡರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ರಾಜ್ಯ ಹಜ್ ಸಮಿತಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಹಜ್‌ಯಾತ್ರೆಗೆ ತೆರಳುವವರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ನಾಡಗೀತೆಯಲ್ಲಿ “ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಸಿಖ್ಖ, ಜೈನರ ಉದ್ಯಾನ” ಎಂದು ಕನ್ನಡ ನಾಡನ್ನು ವರ್ಣಿಸಿದ್ದಾರೆ. ಈ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವವರು ಮನುಷ್ಯರಾಗಲು ನಾಲಾಯಕ್ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ಇತ್ತೀಚೆಗೆ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಹಜ್‌ಯಾತ್ರಿಗಳ ಸಬ್ಸಿಡಿಯನ್ನು ರದ್ದು ಮಾಡಿದೆ. ಬಿಜೆಪಿಯವರು ಅಲ್ಪಸಂಖ್ಯಾತರ ಬಗ್ಗೆ ಹೊಂದಿರುವ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ. ಯಾತ್ರಿಗಳ ಹೆಸರಿನಲ್ಲಿ ಏರ್ ಇಂಡಿಯಾದ ನಷ್ಟವನ್ನು ಭರಿಸಲಾಗುತ್ತಿತ್ತು. ಸರಕಾರ ನೀಡುವ ಸಬ್ಸಿಡಿ ಹಣವನ್ನು ನಂಬಿಕೊಂಡು ಯಾರೂ ದೇವರ ಯಾತ್ರೆಯನ್ನು ಮಾಡಲ್ಲ.

ಪ್ರತಿಯೊಂದು ಧರ್ಮದಲ್ಲೂ ದಯೆ, ಕರುಣೆ ಇರುತ್ತದೆ. ಬಸವಣ್ಣ “ದಯೇಯೇ ಧರ್ಮದ ಮೂಲವಯ್ಯ, ದಯೇ ಇಲ್ಲದ ಧರ್ಮ ಯಾವುದಯ್ಯ” ಎಂದಿದ್ದರು. ಯಾವ ಧರ್ಮವೂ ಮನುಷ್ಯ, ಮನುಷ್ಯರ ನಡುವೆ ದ್ವೇಷದ ಭಾವನೆ ಬಿತ್ತಲ್ಲ. ಪ್ರೀತಿಸುವುದನ್ನೆ ಕಲಿಸುತ್ತದೆ. ಪ್ರೀತಿ ಇರುವೆಡೆ ದ್ವೇಷ ಹುಟ್ಟು ಹಾಕುವ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌರ್ಹಾದತೆಯಿಂದ ಎಲ್ಲರೂ ಬದುಕಬೇಕು. ಆ ಮೂಲಕ ನಮ್ಮ ಕನ್ನಡ ನಾಡು ಅಭಿವೃದ್ಧಿ, ಸಮೃದ್ಧಿಯಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಿಂದ ೬೬೨೪ ಮಂದಿ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಒಟ್ಟು ೧೮ ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸತತ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಆಯ್ಕೆಯಾಗದೆ ಇದ್ದವರು ನಾಲ್ಕನೆ ಬಾರಿ ನೇರವಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಕೇಂದ್ರ ಸರಕಾರ ನೂತನ ಹಜ್ ನೀತಿಯಲ್ಲಿ  ಆ ಮೀಸಲಾತಿ ವರ್ಗವನ್ನು ತೆಗೆದು ಹಾಕಿ, ಹೊಸದಾಗಿ ೪೫ ವರ್ಷ ಮೇಲ್ಪಟ್ಟ ಮಹಿಳೆಯರು ಸಂಗಾತಿ ಇಲ್ಲದೆ ಯಾತ್ರೆಗೆ ತೆರಳುವ ಅವಕಾಶವನ್ನು ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಸತತ ನಾಲ್ಕನೆ ಬಾರಿ ಅರ್ಜಿ ಸಲ್ಲಿಸಿ, ಆಯ್ಕೆಯ ನೀರಿಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published.