‘ಅನುಭವ’ದಿಂದ ಮೇಲೆದ್ದು ಬಂದ ‘ಅಭಿನಯ’ ‘ಕಾಶೀ’ಯಾತ್ರೆಯ ಬಗ್ಗೆ ಹೇಳಿದ್ದು ಹೀಗೆ……

ಕಾಶೀನಾಥ್‌, ಕನ್ನಡ ಚಿತ್ರರಂಗದ ಮೇರು ನಟ. ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅದ್ಭುತ ಅಭಿನಯದ ಮೂಲಕ ಜನಮನಗೆದ್ದಿದ್ದ ಕಲಾವಿದ. ಇವರ ಗರಡಿಯಲ್ಲಿ ಅನೇಕ ಕಲಾವಿದರು ಉದ್ಭವವಾಗಿದ್ದರು. ಉಪೇಂದ್ರ, ವ. ಮನೋಹರ್‌, ಅಭಿನಯ….ಹೀಗೆ ಹಲವರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟ ಕೀರ್ತಿ ಕಾಶೀನಾಥ್ ಅವರಿಗೆ ಸಲ್ಲುತ್ತದೆ.

ಅವರದ್ದೇ ಗರಡಿಯಲ್ಲಿ ಪಳಗಿದ ನಟಿ ಅಭಿನಯ ಏನ್‌ ಸುದ್ದಿ ಜೊತೆ ಕಾಶೀನಾಥ್‌ ಅವರ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಾಶಿನಾಥ್‌ ಇಲ್ಲ ಎಂಬುದನ್ನು ನನ್ನಿಂದ ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನಮಗೆ ತಂದೆಯಾಗಿ, ಗುರುವಾಗಿ, ಸಹನಾಮೂರ್ತಿಯಾಗಿ, ಅಭಿನಯದ ಇಂಚಿಂಚನ್ನೂ ಹೇಳಿಕೊಟ್ಟ ಮಹಾನ್‌ ಕಲಾವಿದ. ಅವರ ಜೊತೆ ಮಾಡಿದ ಮೊದಲ ಸಿನಿಮಾ ಅನಭವ. ನಮ್ಮ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ನನ್ನನ್ನ ಆ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಿದ್ದರು. ಇಂದು ಅಭಿನಯ ಎಂಬ ನಟಿ ಇದ್ದಾಳೆ ಎಂದರೆ ಅದಕ್ಕೆ ಕಾಶೀನಾಥ್‌ ಅವರೇ ಕಾರಣ ಎಂದಿದ್ದಾರೆ.

ಕಾಶೀನಾಥ್‌ ಸಹನಾಮೂರ್ತಿ, ಇದುವರೆಗೂ ಅವು ಯಾರ ಬಳಿಯೂ ಗದರಿದ್ದನ್ನಾಗಲಿ, ಬೈದದ್ದನ್ನಾಗಲಿ ನೋಡೇ ಇಲ್ಲ. ಅವರಿಗಿದ್ದ ತಾಳ್ಮೆ ಇದುವರೆಗೂ ಇನ್ಯಾರಲ್ಲಿಯೂ ನಾನು ನೋಡಿಲ್ಲ. ತಾನೊಬ್ಬ ನಿರ್ದೇಶಕ, ನಟ ಎಂಬ ಯಾವುದೇ ಅಹಂಕಾರ ಅವರಲ್ಲಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ್ದ ಜೀವ ಅದು. ತಮ್ಮ ಕಷ್ಟಗಳೇನಿದ್ದರೂ ಯಾರಲ್ಲಿಯೂ ಹೇಳಿಕೊಳ್ಳದೆ ಸದಾ ನಗುಮೊಗದಿಂದ ಇರುತ್ತಿದ್ದರು.

ಅನುಭವ ಸಿನಿಮಾ ಮಾಡಿದಾಗಿ ನನಗೆ 13 ವರ್ಷ . ಸಿನಿಮಾ ಎಂದರೆ, ನಟನೆ ಎಂದರೆ ನನಗೇನೂ ತಿಳಿದಿರಲಿಲ್ಲ. ಅವರ ಸಿನಿಮಾದಲ್ಲಿ ಡಬ್ಬಲ್‌ ಮೀನಿಂಗ್‌ ಜಾಸ್ತಿ ಎಂಬ ಮಾತನಾಡುತ್ತಾರೆ.  ಜನ ಏನನ್ನು ಬಯಸುತ್ತಿದ್ದರೋ ಆ ರೀತಿ ಸಿನಿಮಾ ಮಾಡಿದ್ದರು ಕಾಶೀನಾಥ್‌. ಜನರಿಗೆ ಅವರ ಅಭಿನಯ ಇಷ್ಟವಾಯಿತು ಅದಕ್ಕೆ ಅಂತಹ ಸಿನಿಮಾ ಮಾಡಿದ್ದರು. ಸಿನಿಮಾದ ಹೊರತಾಗಿ ಅವರೆಂದೂ ಹೆಣ್ಣನ್ನು ಆ ರೀತಿ ನೋಡಿದವರೇ ಅಲ್ಲ. ಹೆಣ್ಣಿಗೆ ಗೌರವ ಕೊಡುವುದು ಹೇಗೆ ಎಂದು ಕಾಶೀನಾಥ್‌ ಅವರಿಂದ ಕಲಿಯಬೇಕು ಎಂದಿದ್ದಾರೆ.

ವಯಸ್ಸಾದಂತೆ ಅವರಿಗೆ ಮರೆವು ಹೆಚ್ಚಾಗುತ್ತಾ ಹೋಯಿತು. ದಿನೇ ದಿನೇ ದೇಹ ಕೃಶವಾಗುತ್ತಾ ಹೋಯಿತು. ಅವರಿಗೆ ಕ್ಯಾನ್ಸರ್‌ ಇತ್ತೆಂಬ ವಿಚಾರವೇ ತಿಳಿದಿರಲಿಲ್ಲ. ಏಕಾಂಗಿಯಾಗಿಯೇ ಎಲ್ಲವನ್ನು ಅನುಭವಿಸಿದ ವ್ಯಕ್ತಿ ಕಾಶೀನಾಥ್‌. ಅಂತಹವರನ್ನು ಕಳೆದುಕೊಂಡ ದುಃಖ ಎಂದಿಗೂ ಮಾಸುವುದಿಲ್ಲ. ಈಗಲೂ ಅವರು ನಮ್ಮ ಜೊತೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂತಹ ಮೇರು ಕಲಾವಿದ ಮತ್ತೊಮ್ಮೆ ಹುಟ್ಟಿ ಬರುವಂತಾಗಲಿ ಎಂದು ಆಶಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com