ನನ್ನ ಷರಾ : ತೊಗಾಡಿಯಾ ದೊಡ್ಡಪ್ಪಂಗೆ, ಅನಂತ ಅನ್ನೋ ಅಣ್ತಮ್ಮಂಗೆ ಆಡೇಳಿದ ವತ್ತು

ನಾನು ಅಂಗೇ ಆಡೇಳ್ಕಂಡು ಓಯ್ತಿದ್ದೆ.
“ಜಯತೇ ಜಯತೇ ಜಯತೇ, ಸತ್ಯ ಮೇವ ಜಯತೇ”
ಅಂತ, ನಿಮಗೆ ಆಡು ಗೊತ್ತಿರ್‍ತೈತೆ, ಯಾವ ಪಿಚ್ಚರ್ದು ಅಂತ ಗೊತ್ತಿರತ್ತೋ ಇಲ್ವೋ. ಇರಲೀ, ಕಲ್ಪವೃಕ್ಷ ಅಂತ ಪಿಚ್ಚರ್ ಎಸ್ರು, ಕು. ರಾ. ಸೀತಾರಾಮ ಸಾಸ್ತ್ರೀ ಬರೆದಿದ್ದು, ಜಯದೇವ್ ಸಂಗೀತ ಮಾಡಿದ್ದು, ಮನ್ನಾಡೇ ಆಡಿದ್ದು. ನಾನುಟ್ಟಿದ್ ಮಾರ್ನೇ ವರ್ಸ ೧೯೬೯ ನಾಗೆ ಬಂದಿರೋ ಪಿಚ್ಚರ್ರು. ನಂಗಂತೂ ಈ ಆಡು ಯಾವಾಗ್ಲೂ ಮನ್ಸಾಗೇ ಬರ್‍ತಿರತ್ತೆ. ಅಂಗೇ ಆಡ್ಕೊಂಡು ಬರ್‍ತಿರೋವತ್ಗೆ, ಯಾರೋ ಅಳ್ತಿದ್ತು ಕೇಳಿಸ್ತು.
ಯಾವ್ದೋ ಇರೀ ಜೀವ, ಬಿಕ್ಕಿ ಬಿಕ್ಕಿ ಅಳ್ತೈತೆ. ನಮ್ಮ ಅಪ್ಪನಂಗೋ, ದೊಡ್ಡಪ್ಪನಂಗೋ ಇರೋ ಅಜ್ಜನು. ಓಗಿ ಅತ್ಲಾಗೆ ಮಾತಾಡ್ಸೋಣ. ಕೈಲಾಗಿದ್ ಮಾಡೋಣಾ ಅಂತ ಓದೆ.
“ಸಾಮೀ, ತಮ್ಮೆಸ್ರೇನು ದೇವ್ರು?” ಅಂತ ಕೇಳ್ದೆ.
“ತೊಗಾಡಿಯಾ” ಅಂತು ಆ ಇರೀ ಜೀವ. ಏನು ಅಳ್ತಿದ್ದೀಯಾಂದ್ರೆ ಉಸುರೊಲ್ದು. ಸುಮ್ಕೇ ಒಂದೇ ಅಳ.
ಎಂತೂ ಆಡ್ಕೊಂಡು ಬತ್ತಿದ್ದದ್ನಲ್ಲಾ ಅದ್ನೇ ಮುಂದುವರಿಸಿದೆ. ಆ ಜೀವಕ್ಕೇನಾರ ಸಮಾಧಾನ ಆಗ್ಬೋದೇನೋ ಅಂತ.
“ಬೇವ ಬಿತ್ತಿ ಮಾವು ಬೆಳೆವ ತವಕ ಬೇಡ ತೊಗಾಡಿಯಾ
ಬೆಳೆಸಿ ನೋವ ಅಳಿಸಿ ನಲಿವ ಆಗ ಬೇಡ ಮತೀಯಾ
ಕೆಡಕು ಬಯಸೆ ಕೆಡುವೆ ಖಚಿತ
ಪಡೆವೆ ನೋವು ಖಂಡಿತ,
ಸತ್ಯವಾದ ಘನತೇ, ಸೋಲೆ ಕಾಣದಂತೆ……. ಜಯತೆ ಜಯತೆ ಜಯತೆ….”
“ಯಪ್ಪಾ ನಾ ಸೋತೆ, ಯಪ್ಪಾ ನಾ ಸೋತೆ…..” ಅಂತ ದೊಡ್ಡಪ್ಪನಂತಿರೋ ತೊಗಾಡಿಯಾ ಇನ್ನೂ ಅಳು ಜೋರಿಕ್ಕಂಡ್ರು. ನಂಗೆ ಬಯ ಆಗಿ, ಯಾರೂ ನೋಡ್ಕಳ್ಲಿಲ್ಲಾ ಅಂದ್ರೆ ನಮ್ಮನೆ ಬಾಗ್ಲು ತೆಗ್ದೇ ಇರತ್ತೆ ಬಾರಪ್ಪಾ, ಐದು ಜನಕ್ಕೆ ಬೇಯೋ ಪಾತ್ರೆನಾಗೇ ಆರು ಜನಕ್ಕೆ ಬೇಯೋಲ್ವೇ. ಇರೀರಿಲ್ಲದೇರೋ ಮನೆ. ಮಕ್ಕಳಿಗೆ ತಾತನಿಲ್ದೇರೋ ಮನೆ. ಬಂದು ಮಕ್ಳು ಜತೆ ಆಡ್ಕಂಡಿರು, ಒತ್ತೊತ್ತಿಗೆ ನನ್ನೆಂಡ್ರು ಬೇಯ್ಸಿಕ್ತಾಳೆ, ಮಕ್ಳು ನಿನ್ ಮನ್ಸಿಗೆ ಕುಸಿ ಕೊಡ್ತಾವೆ. ಬಾರಪ್ಪೌ” ಅಂತೇಳಿ ಬಂದೆ. ನನ್ನ ಯೋಗ್ಯತೆ ಅಸ್ಟೇಯಾ. ಇನ್ನೇನೇಳಕ್ಕಾದೀತು?
ಆಮ್ಯಾಕೆ ಅಂಗೇ ಆಡೇಳ್ಕಂಡ್ ಬತ್ತಿರೋ ಒತ್ಗೆ, ಇನ್ನಾರೋ ನನ್ನ ತಮ್ಮನೋ ಅಣ್ಣನೋ ಇದ್ದಂಗಿದ್ನಪ್ಪ.
ಅವನದು ಅದೆಂತದೋ ಬಾಸೆ. ನಮ್ಗೆ ಇಂಗಿಂಗೆ ಅಂತ ಪಾಟ ಏಳಿರೋ ಇರಿಯರು ಯಾವತ್ತೂ ಇಂತಾ ಮಾತುಗಳನ್ನ ಏಳಿರ್‍ಲಿಲ್ಲಾಂತೀನಿ. ಉರಿಉರಿತಿದ್ದ, ಉರಿಸ್ತೀನಿ ಅಂತಿದ್ದ. ಪಾಪದ ಅಣತಮ್ಮಂಗೇನೋ ಆಗೈತೆ ಅಂತ ಅತ್ರ ಓಗಿ, “ಯಾಕ್ಲಾ ಅಣ್ತಮ್ಮಾ, ಇಂಗೇ ಮೈಕೈಯೆಲ್ಲಾ ಪರ್ಚ್ಕೋತ್ತಿದ್ದೀಯಾ. ಸುದಾರಿಸ್ಕೋಪಾ. ಇಂಗೆಲ್ಲಾ ಆಡೋವ್ರ ದೆಯ್ಯ ಮೆಟ್ಕಂಡೈತೆ ಅಂತಾರೆ, ಉಚ್ಚು ಇಡ್ದೈತೆ ಅಂತಾರೆ. ಬಾ ಅಣ್ತಮ್ಮಾ. ವಸಿ ಸಮಾದಾನ ಮಾಡ್ಕೊಂಡು, ಮನ್ಸ ಸಮ ಮಾಡ್ಕೋ.” ಅಂತಾನೇ ಇದ್ದೀನಿ. ಅದೇನೇನೋ ಬಾಯ್ಗ್ ಬಂದಂತೆ ಯೋಳ್ತನೇ ಅವ್ನೆ.
ಸರಿ, ದೊಡ್ಡಪ್ಪನಂತಿರೋ ತೊಗಾಡಿಯಾಗೆ ಯೋಳ್ದಂಗೆ ಈ ಅಣ್ತಮ್ಮಂಗೂ ಆಡೇಳ್ದೆ.
“ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳಿಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ ಸೋಲೆ ಕಾಣದಂತೆ….. ಜಯತೆ ಜಯತೆ ಜಯತೆ…..”
ಅಯ್ಯೋ ದ್ಯಾವ್ರೇ, ಇದನ್ನ ಕೇಳಿ ಆ ಅಣ್ತಮ್ಮಂಗೆ ಪಿತ್ತ ಇನ್ನೂ ಕೆರಳ್ ಬುಡ್ತೂಂತೀನಿ. “ಏಯ್, ನೀನು ಯಾರೋ, ನಮಗೆ ಅಪತ್ಯದ ಮಾತೇಳ್ತಿದ್ದೀಯಾಂದ್ರೆ, ನೀನು ಸಾಯಿತಿನೇ ಇರ್ಬೇಕು. ಬುದ್ದಿಜೀವಿನೇ ಇರಬೇಕು. ಓಗೋ, ಓಗೋ…. ನಾವು ದನ ಕಣೋಲೈ, ನಾವು ದೇವ್ರಾಗ್ತೀವೋಲೈ….. ಯಾವನೋ ಈ ಆಡು ಬರ್‍ದಿದ್ದು? ಅವನು ಸೈಟ್ ಬೇಕೂಂತ ಬರ್‍ದಿದ್ದು ಕಣೋಲೈ. ನೀವೆಲ್ಲಾ ಒಂದೇ ಕಣೋ….”
ಯಪ್ಪಾ ನಾನು ಅಲ್ಲಿಂದ ಓಡೋಡಿ ಬಂದ್ ಬುಟ್ಟೆ. ಇದನ್ ನೋಡ್ತಿದ್ದೋನ್ಗೆ ಕೇಳ್ದೆ. ಅಣ್ಣಾ ಈ ವಯ್ಯ ಯಾರು? ಬಾಳ್ಬೇಕಾಗಿರೋನು, ಬದುಕಬೇಕಾಗಿರೋನು, ಕಿರೀರ್‍ಗೆ ಮುಂದಾಗಿ, ಇರೀರ್ಗೆ ಇಂದಾಗಿ ಎಲ್ಲಾ ಒಳ್ಳೆ ಕೆಲ್ಸಕ್ಕೂ ಮುಂದಾಗಿ ನಡೀಬೇಕಾಗಿರೋ ಈ ವಯಸ್ಸಿಗ್ಯಾಕೆ ಇಂಗಾದ. ಯಾರಾದ್ರೂ ನೆತ್ತಿ ಮ್ಯಾಲೆ ನಿಂಬೇಅಣ್ಣು ಚಚ್ಚಿ, ಒಂದಿಷ್ಟು ಜೀರಿಗೆ ಬಾಯಿಗೆ ಆಕಿ, ಬೇವಿನ್ಸೊಪ್ಪಲ್ಲಿ ನೀರೊಡೆಸೋದೋ ಅಥ್ವಾ ತಲೆ ನೋಡೋ ಡಾಕುಟ್ರೇ ಔವ್ರಂತೆ. ಅವ್ರತ್ರ ಕರ್‍ಕೊಂಡೋಗೋದಲ್ವಾ” ಅಂದೆ.
“ಅಯ್ಯೋ, ಈ ವಯ್ಯ ಅನಂತ ಕುಮಾರ ಎಗ್ಡೇಂತ. ಇವಯ್ಯನು ಇಂಗೇ. ಪಾಪ ಅವ್ರಪ್ಪ ಅಮ್ಮ, ಸ್ಕೂಲ್ನಾಗೆ ಪಾಠ ಯೋಳ್ದೋವ್ರೆಲ್ಲಾ ಈಯಪ್ಪನ್ನ ಕಿರಿವಯ್ಯಸಿಂದ ಗಮನಿಸ್ಕೊಂಡಿಲ್ಲಾಂತ ಅನ್ಸತ್ತೆ. ಇಂತಾ ಮಾತಾಡ್ತೌವ್ನೆ. ಬಿಡಣ್ಣೋ. ಮುಂದ್ಕೋಗಣ್ಣೌ” ಅಂದ.
ಆದ್ರೆ, ನಮ್ಮನೇಲಿ, ನಮ್ಮಿಸ್ಕೂಲ್ನಾಗೆ ಇಂಗೆಲ್ಲಾ ಪಾಟ ಮಾಡಿಲ್ವಲ್ಲಾ. ಎಲ್ರೂ ನಿಮ್ಮೋರು, ಎಲ್ರೂ ಅಣ್ತಮ್ಮ ಅಂತ ಯೋಳ್ಕೊಟ್ಟೌವ್ರೆ. ಇಸ್ಕೂಲ್ ನಾಗೆ ನಮ್ಮ ಪಾಟ ಯೇಳ್ದೌವ್ರು, ಆದಿಕವಿ ಪಂಪ, “ಮನುಷ್ಯ ಜಾತಿ ತಾನೊಂದೇ ವಲಂ” ಅಂದಿರೋದನ್ನ, “ಎಲ್ರೂನೂವೇ ಉಟ್ತಿದಂಗೇ ಇಸ್ವ ಮಾನವ” ಅಂತ ಪುಟ್ಟಪ್ಪಜ್ಜ ಯೋಳಿರೋದೆನ್ನೆಲ್ಲಾ ಕೇಳ್ಕಂಡು,
“ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು, ಏನಾದರಾಗು ಮೊದಲು ಮಾನವನಾಗು…. ಏನಾದರಾಗು, ನೀ ಬಯಸಿದಂತಾಗು… ಏನಾದರೂ ಸರಿಯೇ ಮೊದಲು ಮಾನವನಾಗು” ಅಂತ ಸಿದ್ದಯ್ಯ ಪುರಾಣಿಕರು ಬರೆದಿರೋ ಪದ್ಯನಾ ಪಾಟ ಅಂತ ಕಲ್ತೊಂಡ್ ಬಂದಿದ್ದೀವಿ. ನಾನೇನು ದನಾನಾ? ಅಂತ ಅನುಮಾನ ಬಂದಿರೋ ಈ ನನ್ನ ತಮ್ಮನಂಗೋ, ಅಣ್ಣನಂಗೋ ಇರೋ ಈ ಮನ್ಸಂಗೆ ನೀನು ಮನ್ಸನೇ ಕಣಯ್ಯಾ ಅಂತ ಪಾಟ ಯೋಳೋಕೆ ಪಿಲಾನ್ ಮಾಡ್ತಾ ಮುಂದೆ ಆಡ್ಕೊಂಡು ಬಂದೆ.
“ಮಧುರ ಭಾವ ತುಂಬಿದಂತ ಮನಸೇ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ
ಸರಳ ಜೀವಿಗೆಂದಿಗೂ ಸೋಲೆ ಇಲ್ಲ ಕಾಣಿರಾ
ಸತ್ಯವಾದ ಘನತೇ ಸೋಲೆ ಕಾಣದಂತೆ… ಜಯತೆ ಜಯತೆ ಜಯತೆ….”

Leave a Reply

Your email address will not be published.

Social Media Auto Publish Powered By : XYZScripts.com