VOTE FOR JOB : ಯುವಕರ ಹೋರಾಟಕ್ಕೆ ಸಾಥ್‌ ನೀಡಿದ ಜನಾಂದೋಲನ ಮೈತ್ರಿ

ಬೆಂಗಳೂರು : ಕರ್ನಾಟಕದ ಯುವಜನತೆ ನಡೆಸುತ್ತಿರುವ ‘ಉದ್ಯೋಗಕ್ಕೇ ಓಟು’ ಎಂಬ ಆಂದೋಲನವು ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದ್ದ ಚಳವಳಿಯಾಗಿದ್ದು, ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಜನಾಂದೋಲನಗಳ ಮಹಾಮೈತ್ರಿ’ಯು ಘೋಷಿಸಿದೆ.

ಇಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾಂದೋಲನಗಳ ಮಹಾಮೈತ್ರಿಯ ಶ್ರೀ ಎಸ್.ಆರ್.ಹಿರೇಮಠ್, ರಾಘವೇಂದ್ರ ಕುಷ್ಟಗಿ ಮತ್ತು ಸಿ.ಎನ್.ದೀಪಕ್‍, ‘ಮಹಾಮೈತ್ರಿಯು ನಮ್ಮ ದೇಶದ ನಿಜವಾದ ಅಭಿವೃದ್ಧಿಯನ್ನು ಬಯಸುತ್ತದೆ. ಅದಕ್ಕಾಗಿ ಜನರ ನಿಜವಾದ ಸಮಸ್ಯೆಗಳು ಚುನಾವಣೆಯ ಅಜೆಂಡಾ ಆಗಬೇಕೆಂಬುದು ನಮ್ಮ ನಿಲುವು. ಈ ಹಿಂದೆ ರೈತರ ಸಾಲಮನ್ನಾಗಾಗಿ ಆಗ್ರಹಿಸಿ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಹೋರಾಟ ನಡೆದಾಗ, ಅದನ್ನೂ ಬೆಂಬಲಿಸಿದ್ದೆವು. ಅದೇ ರೀತಿ ಯುವ ಭಾರತದ ಪ್ರಮುಖ ಸಮಸ್ಯೆಯಾದ ನಿರುದ್ಯೋಗವನ್ನೂ ಕೂಡಾ ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆ. ಈ ಹಕ್ಕೊತ್ತಾಯದೊಂದಿಗೆ ನಡೆಯುತ್ತಿರುವ ‘ಉದ್ಯೋಗಕ್ಕೇ ಓಟು, ನೋ ಜಾಬ್ ನೋ ವೋಟ್’ ಆಂದೋಲನವು ಈ ಕಾಲದ ಹೊಸಬಗೆಯ ಚಳವಳಿಯಾಗಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಮಹಾಮೈತ್ರಿಯು ಬೆಂಬಲಿಸುತ್ತದೆ’ ಎಂದರು.
‘ಭಾರತವು ಅರ್ಧದಷ್ಟು ಯುವಜನರನ್ನು ಒಳಗೊಂಡಿರುವ ದೇಶವಾಗಿದೆ. ಆದರೆ ಯುವಜನರ ಶಕ್ತಿ ಸಾಮರ್ಥ್ಯಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಕೆಯಾಗುತ್ತಿಲ್ಲ. ಏಕೆಂದರೆ, ನಮ್ಮನ್ನು ಆಳುತ್ತಿರುವ ಪಕ್ಷಗಳ ಬೇಜಬಾಬ್ದಾರಿಯಿಂದ ಈ ಯುವಜನರಿಗೆ ಸೂಕ್ತ ಉದ್ಯೋಗ ನೀಡಿ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಯುವಕರು ತಮ್ಮ ಊರುಗಳಲ್ಲಿಯೇ ಸ್ವಾವಲಂಬಿಗಳಾಗಲು ಸಾಧ್ಯವಾಗುವಂತೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯಂತಹ ನವೀನ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸ್ವಾಮಿನಾಥನ್ ಆಯೋಗದ ಕೆಲವೇ ಶಿಫಾರಸ್ಸುಗಳನ್ನು ಜಾರಿಗೊಳಿಸಿದರೂ ಕೃಷಿಯೆಡೆಗೆ ಯುವಜನತೆ ಮರಳುವಂತೆ ಮಾಡಬಹುದು. ಅದೇ ರೀತಿ ಗುತ್ತಿಗೆ ಆಧಾರಿತ ನೌಕರಿಗಳಲ್ಲಿ ಇರುವವರಿಗೆ ಸೇವಾಭದ್ರತೆ ನೀಡುವ ಮೂಲಕ ಯಾವುದೇ ತಾಂತ್ರಿಕ ಅಡ್ಡಿಯೂ ಇಲ್ಲದಂತೆ ಉದ್ಯೋಗದ ಘನತೆಯನ್ನು ಕಾಪಾಡಬಹುದು ಎಂದಿದ್ದಾರೆ.

ಹಾಗೆಯೇ ಸರ್ಕಾರಿ ವಲಯದ ಹುದ್ದೆಗಳನ್ನೂ ಸೇರಿದಂತೆ ಖಾಲಿ ಹುದ್ದೆಗಳನ್ನು ಶಾಶ್ವತವಾಗಿ ತುಂಬುವ ಮೂಲಕ ಸಾಕಷ್ಟು ಉದ್ಯೋಗ ಸೃಷ್ಟಿ ಸಾಧ್ಯವಿದೆ. ಆದರೆ, ಸರ್ಕಾರದ ನೀತಿ ಜನಸಾಮಾನ್ಯರಿಗಾಗಿ ಉದ್ಯೋಗ ಸೃಷ್ಟಿಸುವುದಾಗಿಲ್ಲ, ಆದ್ದರಿಂದ ಅವರಿಗೆ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ’ ಎಂದು ಈ ಪತ್ರಿಕಾ ಗೋಷ್ಠಿಗಾಗಿ ನೀಡಿರುವ ಲಿಖಿತ ಹೇಳಿಕೆಯಲ್ಲಿ ಮಹಾಮೈತ್ರಿಯ ಮಾರ್ಗದರ್ಶಿ ಮಂಡಳಿಯ ಸದಸ್ಯರಾದ ಶ್ರೀ ದೇವನೂರ ಮಹಾದೇವರವರು ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com