ಸುಪ್ರೀಂ CJIಗೆ ನಾಲ್ವರು ನ್ಯಾಯಮೂರ್ತಿಗಳು ಬರೆದ ಪತ್ರದಲ್ಲೇನಿದೆ……?

ತೀವ್ರ ನೋವು ಮತ್ತು ಕಳವಳದ ಕಾರಣದಿಂದಾಗಿ ನಾವು ನಿಮಗೆ ಈ ಪತ್ರವನ್ನು ಬರೆಯುವುದು ಸೂಕ್ತ ಎಂದು ಭಾವಿಸಿದ್ದೇವೆ. ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ನೀಡಿದ ಕೆಲವು ನಿರ್ದಿಷ್ಟ ತೀರ್ಪುಗಳು ಹೈಕೋರ್ಟ್‌ಗಳ ಸ್ವಾತಂತ್ರ್ಯ ಹಾಗೂ ಒಟ್ಟಾರೆಯಾಗಿ ನ್ಯಾಯದಾನ ವ್ಯವಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ ಬೀರಿರುವ ನಕಾರಾತ್ಮಕ ಪರಿಣಾಮವನ್ನು ಹೇಳುವುದು, ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಕಚೇರಿಯ ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಆ ತೀರ್ಪುಗಳು ಉಂಟುಮಾಡಿರುವ ಪರಿಣಾಮವನ್ನು ತೋರಿಸುವುದು ಪತ್ರದ ಉದ್ದೇಶ.

ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ ಹೈಕೋರ್ಟ್‌ಗಳನ್ನು ಸ್ಥಾಪಿಸಿದ ದಿನದಿಂದಲೂ ಕೆಲವು ಸಂಪ್ರದಾಯಗಳನ್ನು ಒಪ್ಪಿಕೊಂಡು ಬರಲಾಗುತ್ತಿದೆ. ಈ ಕೋರ್ಟ್‌ಗಳನ್ನು ಸ್ಥಾಪಿಸಿದ ಸರಿಸುಮಾರು ಒಂದು ಶತಮಾನದ ನಂತರ ಸ್ಥಾಪನೆಯಾದ ಸುಪ್ರೀಂ ಕೋರ್ಟ್‌ ಕೂಡ ಈ ಸಂಪ್ರದಾಯಗಳನ್ನು ಒಪ್ಪಿಕೊಂಡಿದೆ. ಈ ಸಂಪ್ರದಾಯಗಳ ಮೂಲ ಇರುವುದು ಆಂಗ್ಲೊ–ಸ್ಯಾಕ್ಸನ್ ನ್ಯಾಯಶಾಸ್ತ್ರದಲ್ಲಿ.

ಯಾರಿಗೆ ಯಾವ ಪ್ರಕರಣದ ವಿಚಾರಣೆಯನ್ನು ವಹಿಸಬೇಕು, ಯಾವ ಪೀಠ ಯಾವ ರೀತಿಯ ಪ್ರಕರಣಗಳ ವಿಚಾರಣೆ ನಡೆಸಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರ ಇರುವುದು ಸಿಜೆಐಗೆ ಎಂಬುದು ಎಲ್ಲರೂ ಒಪ್ಪಿಕೊಂಡಿರುವಂಥದ್ದು. ಒಂದಕ್ಕಿಂತ ಹೆಚ್ಚು ಪೀಠಗಳು, ನ್ಯಾಯಮೂರ್ತಿಗಳು ಇರುವ ನ್ಯಾಯಾಲಯಗಳಲ್ಲಿ ಕಲಾಪಗಳು ಸುಸೂತ್ರವಾಗಿ ನಡೆಯಲು ಇಂಥ ವ್ಯವಸ್ಥೆ ಅಗತ್ಯವೂ ಹೌದು. ಯಾವ ಪ್ರಕರಣಗಳನ್ನು ಯಾರು ವಿಚಾರಣೆ ಮಾಡಬೇಕು ಎಂಬುದನ್ನು ಹಂಚುವ ಕೆಲಸದಲ್ಲಿ ಸಿಜೆಐಗೆ ವಿಶೇಷ ಅಧಿಕಾರ ಇದೆ ಎಂಬ ನಿಯಮವನ್ನು ಒಪ್ಪಿಕೊಂಡು ಬಂದಿರುವುದು ಕೋರ್ಟ್‌ನ ಕಲಾಪಗಳು ಪರಿಣಾಮಕಾರಿಯಾಗಿ, ಶಿಸ್ತುಬದ್ಧವಾಗಿ ನಡೆಯಬೇಕು ಎಂಬ ಉದ್ದೇಶದಿಂದ. ಸಿಜೆಐಗೆ ತಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚಿನ ಕಾನೂನಾತ್ಮಕ ಅಥವಾ ಇನ್ಯಾವುದೇ ಬಗೆಯ ಅಧಿಕಾರ ಇದೆ ಎಂಬ ಕಾರಣಕ್ಕೆ ಅಲ್ಲ. ನ್ಯಾಯಮೂರ್ತಿಗಳೆಲ್ಲ ಸಮಾನರು, ಆದರೆ ಅವರಲ್ಲಿ ಸಿಜೆಐ ಮೊದಲ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂಬುದು ಈ ದೇಶದ ನ್ಯಾಯಶಾಸ್ತ್ರ ಒಪ್ಪಿರುವ ವಿಚಾರ – ಉಳಿದ ನ್ಯಾಯಮೂರ್ತಿಗಳಿಗಿಂತ ಸಿಜೆಐ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.

ಯಾವ ಪೀಠಕ್ಕೆ ಯಾವ ಪ್ರಕರಣವನ್ನು ವಹಿಸಬೇಕು ಎಂಬ ವಿಚಾರದಲ್ಲಿ ಸಿಜೆಐಗೆ ಮಾರ್ಗದರ್ಶನ ನೀಡಲು ಬಹುಕಾಲದಿಂದ ನಡೆದುಬಂದಿರುವ ಸಂಪ್ರದಾಯಗಳು ಇವೆ. ನ್ಯಾಯಪೀಠದಲ್ಲಿ ಎಷ್ಟು ಜನ ಇರಬೇಕು, ಆ ಪೀಠದಲ್ಲಿನ ಪ್ರಾತಿನಿಧ್ಯ ಹೇಗಿರಬೇಕು ಎಂಬುದನ್ನೂ ಈ ಸಂಪ್ರದಾಯಗಳು ಹೇಳುತ್ತವೆ.

ಒಬ್ಬರಿಗಿಂತ ಹೆಚ್ಚು ನ್ಯಾಯಮೂರ್ತಿಗಳು ಇರುವ ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ಸೇರಿದಂತೆ ನ್ಯಾಯಾಂಗದ ಯಾವುದೇ ಅಂಗಸಂಸ್ಥೆಯ ಸದಸ್ಯರು, ಯಾವ ಪ್ರಕರಣವನ್ನು ತಾವು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು, ಯಾವ ಪ್ರಕರಣಕ್ಕೆ ಎಷ್ಟು ಜನ ನ್ಯಾಯಮೂರ್ತಿಗಳ ಪೀಠ ರಚನೆಯಾಗಬೇಕು ಎಂದು ತೀರ್ಮಾನಿಸುವ ಅಧಿಕಾರವನ್ನು ತಾವೇ ಚಲಾಯಿಸಬಾರದು; ಸಿಜೆಐ ತೀರ್ಮಾನಕ್ಕೆ ಗೌರವ ಕೊಡಬೇಕು ಎಂಬುದು ಈ ಸಂಪ್ರದಾಯಗಳ ಜೊತೆಯಲ್ಲೇ ಪಾಲಿಸಿಕೊಂಡು ಬಂದಿರುವ ಇನ್ನೊಂದು ಸಂಪ್ರದಾಯ.

ಮೇಲೆ ಹೇಳಿರುವ ಎರಡು ನಿಯಮಗಳನ್ನು ಪಾಲಿಸದೆ ಇದ್ದಾಗ ಅಪ್ರಿಯ, ಅನಪೇಕ್ಷಿತ ಪರಿಣಾಮಗಳು ಉಂಟಾಗುತ್ತವೆ. ಸಂಸ್ಥೆಯ ಬಗ್ಗೆ ದೇಶದ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡುತ್ತವೆ. ನಿಯಮಗಳನ್ನು ಪಾಲಿಸದಿರುವುದರಿಂದ ಉಂಟಾಗುವ ಗೊಂದಲಗಳ ಬಗ್ಗೆ ಇಲ್ಲಿ ಪ್ರತ್ಯೇಕವಾಗಿ ಮಾತನಾಡುವ ಅಗತ್ಯ ಇಲ್ಲ.

ಈ ಎರಡು ನಿಯಮಗಳ ಪಾಲನೆ ಈಚಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಆಗಿಲ್ಲ ಎಂಬುದನ್ನು ನಾವು ವಿಷಾದದಿಂದ ಹೇಳುತ್ತಿದ್ದೇವೆ. ಈ ದೇಶದ ಮೇಲೆ ಮತ್ತು ಈ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲಂತಹ ಕೆಲವು ಪ್ರಕರಣಗಳ ವಿಚಾರಣೆಯನ್ನು ಈ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ‘ತಮಗೆ ಸರಿಕಂಡ’ ಪೀಠಗಳಿಗೆ ಹಂಚಿಕೆ ಮಾಡಿದ ನಿದರ್ಶನಗಳು ಇವೆ. ಆ ಪ್ರಕರಣಗಳನ್ನು ಹೀಗೆ ಹಂಚಿಕೆ ಮಾಡಿರುವುದಕ್ಕೆ ತಾರ್ಕಿಕ ಕಾರಣಗಳು ಇಲ್ಲ. ಯಾವುದೇ ಬೆಲೆ ತೆತ್ತಾದರೂ ಈ ರೀತಿ ಆಗದಂತೆ ತಡೆಯಬೇಕು.

ಈ ಸಂಸ್ಥೆಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾವು ವಿವರಗಳನ್ನೆಲ್ಲ ಇಲ್ಲಿ ಉಲ್ಲೇಖಿಸುತ್ತಿಲ್ಲ. ಆದರೆ, ನಿಯಮಗಳನ್ನು ಮೀರಿರುವ ಕಾರಣ ಈ ಸಂಸ್ಥೆಯ ಹೆಸರಿಗೆ ಈಗಾಗಲೇ ಒಂದಿಷ್ಟು ಧಕ್ಕೆಯಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯ ನಿಯಮಗಳನ್ನು (ಎಂಒಪಿ) ಅಂತಿಮಗೊಳಿಸುವ ವಿಚಾರದಲ್ಲಿ ಇನ್ನು ವಿಳಂಬ ಮಾಡಬಾರದು ಎಂದು ಆರ್‌.ಪಿ. ಲೂಥ್ರಾ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ 2017ರ ಅಕ್ಟೋಬರ್‌ 27ರಂದು ನೀಡಿದ ಆದೇಶದ ಬಗ್ಗೆ ಇಲ್ಲಿ ನಾವು ಹೇಳಬೇಕಿದೆ. ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸಂವಿಧಾನ ಪೀಠ ನೀಡಿರುವ ಆದೇಶದಲ್ಲಿ ಇದೇ ವಿಷಯದ ಬಗ್ಗೆ ಹೇಳಿರುವಾಗ, ಈ ವಿಷಯದ ಬಗ್ಗೆ ಬೇರೊಂದು ಪೀಠ ಪರಿಶೀಲನೆ ನಡೆಸಿದ್ದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸ.

ಅದು ಏನೇ ಇರಲಿ. ಸಂವಿಧಾನ ಪೀಠದ ಆದೇಶಕ್ಕೆ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು (ಕೊಲಿಜಿಯಂ) ವಿಸ್ತೃತ ಚರ್ಚೆ ನಡೆಸಿ, ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯ ನಿಯಮಗಳನ್ನು (ಎಂಒಪಿ) ಅಂತಿಮಗೊಳಿಸಿ, ಅದನ್ನು ಅಂದಿನ ಸಿಜೆಐ ಕೇಂದ್ರ ಸರ್ಕಾರಕ್ಕೆ 2017ರ ಮಾರ್ಚ್‌ ತಿಂಗಳಲ್ಲಿ ರವಾನಿಸಿದರು. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಾಗಿ, ಸಂವಿಧಾನ ಪೀಠ ನೀಡಿದ ತೀರ್ಮಾನಕ್ಕೆ ಅನುಗುಣವಾಗಿ ಕೊಲಿಜಿಯಂ ಸಿದ್ಧಪಡಿಸಿದ ಎಂಒಪಿಯನ್ನು ಸರ್ಕಾರ ಒಪ್ಪಿದೆ ಎನ್ನಬಹುದು. ಹಾಗಾಗಿ, ನೇಮಕಾತಿ ಪ್ರಕ್ರಿಯೆಯ ನಿಯಮಗಳಿಗೆ ಸಂಬಂಧಿಸಿದಂತೆ ತನ್ನ ಅನಿಸಿಕೆಗಳನ್ನು ಹೇಳಲು ಲೂಥ್ರಾ ಪ್ರಕರಣದ ವಿಚಾರಣೆ ನಡೆಸಿದ ಪೀಠಕ್ಕೆ ಅವಕಾಶ ಇರಲಿಲ್ಲ.

ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಈ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ 2017ರ ಜುಲೈ 4ರಂದು ನಡೆಸಿತು. ತಪ್ಪೆಸಗಿದ ನ್ಯಾಯಮೂರ್ತಿಯ ವಿರುದ್ಧ ಪ್ರಯೋಗಿಸಲು ವಾಗ್ದಂಡನೆ ಹೊರತಾಗಿ ಬೇರೊಂದು ಅಸ್ತ್ರ ಬೇಕು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು ಎಂದು ಏಳು ಜನರ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದರು. ಆದರೆ, ಎಂಒಪಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ.

ನೇಮಕ ಪ್ರಕ್ರಿಯೆಯ ನಿಯಮಾವಳಿಗಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಪ್ರಸ್ತಾಪಿಸಬೇಕು, ಅದರ ಬಗ್ಗೆ ಪೂರ್ಣ ಪೀಠ ಮಾತನಾಡಬೇಕು. ಇಂತಹ ಮುಖ್ಯ ವಿಚಾರವನ್ನು ಸಂವಿಧಾನ ಪೀಠ ಹೊರತುಪಡಿಸಿ ಬೇರೆ ಯಾರೂ ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು.

ಈ ಮೇಲಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೊಲಿಜಿಯಂನ ಇತರ ಸದಸ್ಯರ ಜೊತೆ ಪೂರ್ಣ ಪ್ರಮಾಣದಲ್ಲಿ ಚರ್ಚಿಸಿ, ಅಗತ್ಯ ಕಂಡುಬಂದರೆ ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ಜೊತೆ ಕೂಡ ಚರ್ಚಿಸಿ, ಪರಿಹಾರ ಕ್ರಮ ಕೈಗೊಳ್ಳುವ ಕರ್ತವ್ಯ ಸಿಜೆಐ ಅವರದ್ದಾಗಿದೆ.

ಆರ್.ಪಿ. ಲೂಥ್ರಾ ಪ್ರಕರಣದಲ್ಲಿ ನೀಡಿದ ಆದೇಶದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನೀವು (ಸಿಜೆಐ) ಪರಿಶೀಲಿಸಿ, ಪರಿಹರಿಸಿದ ನಂತರ, ಇದೇ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿರುವ ಪ್ರಕರಣಗಳ ಬಗ್ಗೆ ನಿಮಗೆ ನಾವು ತೀರಾ ಅಗತ್ಯ ಕಂಡುಬಂದರೆ ತಿಳಿಸುತ್ತೇವೆ.

ವಿಶ್ವಾಸದಿಂದ

ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕೂರ್, ಕುರಿಯನ್ ಜೋಸೆಫ್

Leave a Reply

Your email address will not be published.

Social Media Auto Publish Powered By : XYZScripts.com