ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ : ಅರ್ಧಕ್ಕೇ ಶೂಟಿಂಗ್ ನಿಲ್ಲಿಸಿ ಹೊರಟ ಭಾಯಿಜಾನ್‌

ಮುಂಬೈ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ರೇಸ್‌ 3 ಚಿತ್ರದ ಶೂಟಿಂಗನ್ನು ಅರ್ಧಕ್ಕೇ ನಿಲ್ಲಿಸಿ ಬಿಗಿ ಭದ್ರತೆಯೊಂದಿಗೆ ಅವರನ್ನು ಮನೆಗೆ ತಲುಪಿಸಿದ ಪ್ರಸಂಗ ನಡೆದಿದೆ.
ಇತ್ತೀಚೆಗಷ್ಟೇ ಸಲ್ಮಾನ್‌ ಖಾನ್‌ ಕೃಷ್ಣಮೃಗ ಪ್ರಕರಣ ಸಂಬಂಧ ಜೋಧ್‌ಪುರ ಕೋರ್ಟ್‌ಗೆ ತೆರಳಿದ್ದರು. ಇದರ ಮರುದಿನ ಲಾರೆನ್ಸ್‌ ಬಿಷ್ಣೋಯ್‌ ಎಂಬ ಗ್ಯಾಂಗ್‌ಸ್ಟರ್‌ ಒಬ್ಬ ಸಲ್ಮಾನ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಅಲ್ಲದೆ ಇತ್ತೀಚೆಗೆ ಕೆಲ ವ್ಯಕ್ತಿಗಳು ಸಲ್ಮಾನ್‌ ಮೇಲೆ ದಾಳಿಗೆ ಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಸಲ್ಮಾನ್‌ ಖಾನ್‌ ರೇಸ್‌ 3 ಸಿನಿಮಾದ ಚಿತ್ರೀಕಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಚಿತ್ರದ ಶೂಟಿಂಗ್‌ ವೇಳೆ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿರುವುದನ್ನು ನೋಡಿ ಎಚ್ಚೆತ್ತುಕೊಂಡ ಚಿತ್ರತಂಡ ಪೊಲೀಸರಿಗೆ ಮಾಹಿತಿ ನೀಡಿದೆ. ಬಳಿಕ ಆಗಮಿಸಿದ ಪೊಲೀಸರು ಸಲ್ಮಾನ್‌ ಜೊತೆ ಚಿತ್ರ ನಿರ್ಮಾಪಕ ರಮೇಶ್‌ ತೌರಾನಿಯವರನ್ನು ಬೆಂಗಾವಲು ಪಡೆ ವಾಹನದಲ್ಲಿ ಮನೆಗೆ ತಲುಪಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಶೂಟಿಂಗ್ ವೇಳೆ ಸಲ್ಮಾನ್‌ಗೆ ಇನ್ನಷ್ಟು ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಸಲ್ಮಾನ್‌ ಜೊತೆ ರೇಸ್‌ 3 ಸಿ ಸಿನಿಮಾದಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌ ನಟಿಸುತ್ತಿದ್ದು, ಗೊಂದಲದ ಮಧ್ಯೆ ಇಂದಿನ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.

Leave a Reply

Your email address will not be published.