ಬೀದರ್‌ ಬಂದ್‌ : ಪ್ರತಿಭಟನಾಕಾರರಿಂದ ಕಲ್ಲು ತೂರಾಟ : ಪರಿಸ್ಥಿತಿ ಉದ್ವಿಗ್ನ

ಬೀದರ್‌ : ಭೀಮ ಕೋರೆಗಾಂವ್‌ ಹಾಗೂ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಬೀದರ್‌ ಜಿಲ್ಲಾ ಬಂದ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾಲ್ಕಿ , ಹುಮ್ನಾಬಾದ್‌ನಲ್ಲೂ ಬಂದ್‌ ವಾತಾವರಣ ನೆಲೆಸಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಆಂಧ್ರ ಪ್ರದೇಶ, ತೆಲಂಗಾಣಕ್ಕೆ ತೆರಳಬೇಕಾಗಿದ್ದ ನೂರಾರು ಪ್ರಯಾಣಿಕರು ಬಸ್‌ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಮತ್ತೊಂದೆಡೆ ನಗರದಲ್ಲಿ ಪೊಲೀಸರ ಅನುಮತಿ ಮೀರಿ ಉಗ್ರ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪ್ರತಿಭಟನಾಕಾರರು ಆಯುರ್ವೇದಿಕ್‌ ಕಾಲೇಜು, ಪಿ.ಜಿ ಸೆಂಟರ್‌ಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಅನೇಕ ಪ್ರದೇಶಗಳಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪ್ರತಿಭಟನಾಕಾರರು ಮಾಜಿ ಶಾಸಕ ಸುಭಾಷ್‌ ಕಲ್ಲೂರು ವಾಹನದ ಗಾಜುಗಳನ್ನು ಪುಡಿ ಮಾಡಿದ್ದಾರೆ.

ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಸ್ಥಳೀಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇವರ ವಿರುದ್ದ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com