ಹೆಣದ ಮೇಲೆ ರಾಜಕೀಯ ಮಾಡುವುದೇ BJP ಯವರ ಕೆಲಸ : ಸಿಎಂ

ಪುತ್ತೂರು : ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವವರು ಅದಕ್ಕಾಗಿ ಕೋಮುವಾದಿಗಳನ್ನು ಏಜೆಂಟರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕೋಮುವಾದಿಗಳು ಹಾಗೂ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರನ್ನು ಹತ್ತಿಕ್ಕಲು ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಜಾರಿಗೆ ತರಲಿದೆ ಎಂದು ಅವರು ತಿಳಿಸಿದ್ದಾರೆ.

ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕೋಮು ಗಲಭೆಗಳಲ್ಲಿ ಪ್ರಾಣ ಕಳೆದುಕೊಳ್ಳುವವರು ಅಮಾಯಕರು,  ದಲಿತರು, ಹಿಂದುಳಿದವರು, ಬಡವರ ಮಕ್ಕಳು.

ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರು ಅಥವಾ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮದವರನ್ನು ಎತ್ತಿ ಕಟ್ಟುವವರ ಮಕ್ಕಳ್ಯಾರೂ  ಸಾಯುವುದಿಲ್ಲ. ಜೈಲಿಗೆ ಹೋಗುವುದಿಲ್ಲ.

ನಾನು ಸಹ ಹಿಂದು. ನಮ್ಮ ಮನೆಯ ದೇವರು ಸಿದ್ದರಾಮೇಶ್ವರ. ನಮ್ಮ ಮನೆಯಲ್ಲಿ ಅದೇ ದೇವರನ್ನು ಪೂಜೆ ಮಾಡುತ್ತಾರೆ. ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕೇ ?

ಕೋಮು ಗಲಭೆಯಲ್ಲಿ‌ ಯಾರಾದರೂ ಸತ್ತರೆ ಹಿಂದೂ ಸಾವು ಎನ್ನುತ್ತಾರೆ. ಬೇರೆಯವರು ಪ್ರಾಣ ಕಳೆದುಕೊಂಡರೆ ಅದು ಸಾವು ಅಲ್ಲವೇ ? ಗೌರಿ ಲಂಕೇಶ್ ಹತ್ಯೆ ಆದಾಗ ಬಿಜೆಪಿಯ ಒಬ್ಬರೂ ಪಾರ್ಥಿವ ಶರೀರ ನೋಡಲು ಹೋಗಲಿಲ್ಲ. ಅವರು ಹಿಂದೂ ಅಲ್ಲವೇ ? ಸಾವು ಮತ್ತು ಹೆಣದ ಮೇಲೆ ರಾಜಕೀಯ ಮಾಡಬಾರದು. ಆ ರೀತಿ  ಮಾಡುವವರನ್ನು ಜನ ಧಿಕ್ಕರಿಸಬೇಕು. ಅವರಿಗೆ ಸಹಕಾರ ಕೊಡಬಾರದು.

ಕರಾವಳಿ ಜಿಲ್ಲೆಗಳಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಲುಸಬೇಕಾದರೆ ನೀವು ಕೋಮು ಗಲಭೆ ಮಾಡಿಸಬೇಕು ಎಂದು ತಮ್ಮ ಮುಂದೆ ಕೈ ಕಟ್ಟಿ ನಿಲ್ಲುವ ತಮ್ಮ ಪಕ್ಷದ ರಾಜ್ಯ ನಾಯಕರಿಗೆ ಅಮಿತ್ ಶಾ ಪಾಠ ಮಾಡುತ್ತಾರೆ. ಇದನ್ನು ಸಂಸದ ಪ್ರತಾಪ್ ಸಿಂಹ ಅವರೇ ಹೇಳಿದ್ದಾರೆ.

ತಪ್ಪು ಮಾಡಿದವರು ಯಾವುದೇ ಧರ್ಮದವರಾಗಿರಲಿ ಶಿಕ್ಷೆ ಆಗಬೇಕು. ಆದರೆ ನಿರಪರಾಧಿಗಳಿಗೆ ಹಾನಿ ಆಗಬಾರದು. ನಾವು ಇನ್ನೊಬ್ಬರನ್ನು, ಎಲ್ಲರನ್ನೂ, ಎಲ್ಲ ಧರ್ಮದವರನ್ನು ಪ್ರೀತಿಸಬೇಕು. ಆಗ ನಮ್ಮ ಬದುಕು ಸಾರ್ಥಕ ಆಗುತ್ತದೆ.

ದಕ್ಷಿಣ ಕನ್ನಡ ವಿದ್ಯಾವಂತರ, ಸುಸಂಸ್ಕೃತರ, ಬುದ್ಧಿವಂತರ ಜಿಲ್ಲೆ. ಇಂತಹ ಜಿಲ್ಲೆಯಲ್ಲಿ ಕೋಮುವಾದಿಗಳು ಬೆಂಕಿ ಹಚ್ಚಿ ರಾಜಕೀಯ ಮಾಡುತ್ತಿರುವುದು ಖಂಡನೀಯ. ಅಂತಹವರನ್ನು ಬೆಂಬಲಿಸಬೇಡಿ. ಬಿಜೆಪಿಯವರಿಗೆ ಬೇರೆ ಕಾರ್ಯಕ್ರಮವೇ ಇಲ್ಲ. ಕೋಮು ಭಾವನೆ ಕೆರಳಿಸಿ, ಹೆಣದ ಮೇಲೆ ರಾಜಕೀಯ ಮಾಡುವುದೇ ಅವರ ಕೆಲಸ ಎಂದು ಮುಖ್ಯಮಂತ್ರಿಯವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com