ಸಿದ್ದರಾಮಯ್ಯ ದೇಶಕಂಡ ಬೇಜವಾಬ್ದಾರಿ CM : ಯಡಿಯೂರಪ್ಪ

ಬೆಂಗಳೂರು : ಮಾಜಿ ಸಿಎಂ ಬಿಎಸ್‌ವೈ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅಮಿತ್‌ ಶಾ ವಿರುದ್ದ ಕೇಳಿದ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಕೆಂಡಾಮಂಡಲರಾದ ಸಂಗತಿ ನಡೆದಿದೆ.

ಅಮಿತ್‌ ಶಾ ಹೋರಾಟದ ಟಾಸ್ಕ್‌ ನೀಡಿ ಪ್ರಚೋದನೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕೆರಳಿದ ಬಿಎಸ್‌ವೈ, ನಾವು ಪ್ರಚೋದನೆ ಮಾಡಿದ್ದೇ ಆದರೆ ಅದನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಈ ಹಿಂದೆ ಅಮಿತ್ ಶಾ ನನಗೆ ಟಾಸ್ಕ್‌ ನೀಡಿದ್ದಕ್ಕೆ ಈ ರೀತಿ ಉಗ್ರ ಹೋರಾಟ ಮಾಡುತ್ತೇನೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ. ಪ್ರತಾಪ್‌ ಸಿಂಹ ಆದರೂ ಸರಿ ಯಾವನಾದರೂ ಸರಿ ಪ್ರಚೋದನಕಾರಿ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲಿ ಎಂದಿದ್ದು, ಮಾಧ್ಯಮ ಪ್ರತಿನಿಧಿಗಳು ಬೇಜವಾಬ್ದಾರಿ ಪ್ರಶ್ನೆಗಳನ್ನು ಕೇಳಬೇಡಿ. ನಾನು ಹೇಳುವುದನ್ನು ಸುಮ್ಮನೆ ಕೇಳಿ ಎಂದು ಗುಡುಗಿದ್ದಾರೆ.

ಇದೇ ವೇಳೆ ಮಂಗಳೂರು ಉದ್ವಿಗ್ನ ವಿಚಾರ ಕುರಿತಂತೆ ಮಾತನಾಡಿದ ಬಿಎಸ್‌ವೈ, ನಿನ್ನೆ ಮಂಗಳೂರಿನ ಸೂರತ್ಕಲ್ ನಲ್ಲಿ ಹಾಡು ಹಗಲೇ ತಲವಾರನಿಂದ ದೀಪಕ್ ಎಂಬ 20 ವರ್ಷದ ಯುವಕನ ಕೊಲೆಯಾಗಿದೆ. ಇದರಲ್ಲಿ ಉಸ್ತುವಾರಿ ಸಚಿವ ರಮಾನಾಥ್ ರೈ ಕೈವಾಡವಿದೆ. ಈ ಹಿಂದೆ ಅಲ್ಲಿ ೨೦ ಕೊಲೆಯಾಗಿದೆ, ಇದು ೨೧ ನೇ ಕೊಲೆ. ಇವರ ಬೇಜವಾಬ್ದಾರಿ ಎಂಥದ್ದೆಂದರೆ ಮೃತದೆಹವನ್ನು ಮನೆಯವರಿಗೆ ಒಯ್ಯಲು ಅವಕಾಶ ನೀಡದೆ ಪೊಲೀಸರೇ ಒಯ್ದು ಸಂಘರ್ಷಕ್ಕೆ ಪೊಲೀಸರು ಕಾರಣ ಆಗಿದ್ದಾರೆ. ಕೇರಳದಲ್ಲಾದ ರೀತಿಯಲ್ಲಿ ಕೊಲೆಗಳು ನಡೆಯುತ್ತಿವೆ. ಇದನ್ನು ಖಂಡಿಸಲು ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರು ಸೇರುತ್ತಿದ್ದಾರೆ, ದೊಡ್ಡ ಹೋರಾಟ ಆಯೋಜಿಸಲಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಸಿಎಂ ವಿರುದ್ದ ಗುಡುಗಿದ ಬಿಎಸ್‌ವೈ, ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಇವರು ಏನು ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ದೇಶ ಕಂಡ ಬೇಜವಾಬ್ದಾರಿ ಸಿಎಂ ಎಂದಿದ್ದಾರೆ.

 

 

 

Leave a Reply

Your email address will not be published.