ಮಹದಾಯಿ ವಿವಾದ : BJP ಕರೆ ನೀಡಿದ್ದ ನರಗುಂದ ಬಂದ್‌ನ ಡೀಟೇಲ್ಸ್‌ ಇಲ್ಲಿದೆ….

ಗದಗ : ಕಳಸಾ ಬಂಡೂರಿ, ಮಹದಾಯಿಗಾಗಿ ಬಿಜೆಪಿ ಬಂದ್ ಕರೆ ಭಾಗಶ: ಯಶಸ್ವಿಯಾಯಿತು. ಮಹದಾಯಿ ವಿವಾದದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಮೂಲಕ ಬಂಡಾಯದ ನಾಡು ರಾಜಕೀಯ ಪ್ರೇರಿತ ಬಂದ್ ಗೆ ಸಾಕ್ಷಿಯಾಯಿತು. ಜೊತೆಗೆ ಮಹದಾಯಿ ಹೋರಾಟಗಾರರ ಹಾಗೂ ಬಿಜೆಪಿ ಸಮಾವೇಶದ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.

ಮಹದಾಯಿ ವಿವಾದದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಇಂದು ಬೆಳಿಗ್ಗೆಯಿಂದಲೇ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಟ್ಟಣದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಇನ್ನು ಮುಂಜಾಗೃತ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದ್ದು, ಹಲವೆಡೆ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾಗಿದ್ದರು.

ಈ ವೇಳೆ ಸರ್ಕಾರಿ ಹಾಗೂ ಖಾಸಗಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇನ್ನು ಶಾಸಕ ಬಿ.ಆರ್.ಯಾವಗಲ್ ಅವರ ಜನಸಂಪರ್ಕ ಕಾರ್ಯಾಲಯದ ಎದುರು ಬಿಜೆಪಿ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚುವ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಬಂದ್ ಹಿನ್ನೆಲೆ ವ್ಯಾಪಕ ಪೊಲೀಸ್ ಬಂದೋಬಸ್ಥ್ ಹಾಕಲಾಗಿತ್ತು. ಪುರಸಭೆಯಿಂದ ಹುಬ್ಬಳ್ಳಿ ರಸ್ತೆ ಬಳಿಯ ಬೃಹತ್ ವೇದಿಕೆವರೆಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ನಡೆದ ಸಮಾವೇಶದಲ್ಲಿ ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ ಸಿ ಪಾಟೀಲ್, ಕಳಸಪ್ಪ ಬಂಡಿ, ಎಂಎಲ್ಸಿ ಎಸ್ ವಿ ಸುಂಕನೂರ, ಮಾಜಿ ಶಾಸಕರಾದ ಶ್ರೀಶೈಲಪ್ಪ ಬಿದರೂರ, ಮಹಾದೇವಪ್ಪ ಯಾದವಾಡ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.


ಇನ್ನು ಇದೇ ವೇಳೆ ತಾಲೂಕಿನಲ್ಲಿ ಮಹದಾಯಿ ಹೋರಾಟದ ಕೇಂದ್ರ ಸಮಿತಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ 4 ಜಿಲ್ಲೆ 11 ತಾಲೂಕಿನ ಮಹದಾಯಿ ಹೋರಾಟದ ರೈತ ಮುಖಂಡರು ಪಾಲ್ಗೊಂಡು ಮುಂದಿನ ಹೋರಾಟದ ರೂಪರೇಷೆ ಕುರಿತು ಚರ್ಚಿಸಿದರು. ರಾಜಕೀಯ ಪ್ರತಿಭಟನೆಯಾಚೆಗೆ ತಮ್ಮ ಮುಂದಿನ ಹೋರಾಟದ ನಡೆಯ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ರೈತರು ಹಲವಾರು ನಿರ್ಧಾರ ಕೈಗೊಂಡಿದ್ದು ವಿಶೇಷವಾಗಿತ್ತು.

ಒಟ್ಟಾರೆಯಾಗಿ ಮಹದಾಯಿಗಾಗಿ ಇಷ್ಟು ದಿನ ರೈತಪರ ಸಂಘಟನೆಗಳು ಹೋರಾಡುತ್ತಿದ್ದರೆ ಇಂದು ಅದಕ್ಕೆ ರಾಜಕೀಯ ಪಕ್ಷವೊಂದು ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಮಹದಾಯಿ ಹೋರಾಟ ಭಾಗಶಃ ಯಶಸ್ವಿಯಾದಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com