ಮತ್ತೆ ವೈದ್ಯರ ಮುಷ್ಕರ : ಬೆಂಗಳೂರು ಸೇರಿದಂತೆ ಹಲವೆಡೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು : ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017ನ್ನು ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ವೈದ್ಯಕೀಯ ಪರಿಷತ್‌ ಕರೆ ನೀಡಿದ್ದ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ (ಒಪಿಡಿ ) ಬಂದ್‌ ಆಗಿರಲಿದೆ. ಕರ್ನಾಟಕದಲ್ಲೂ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ಮಣಿಪಾಲ್‌, ಅಪೋಲೋ, ನಾರಾಯಣ ನೇತ್ರಾಲಯ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಎಂದಿನಂತೆ ಒಪಿಡಿ ಸೇವೆ ಲಭ್ಯವಿದೆ. ಮೈಸೂರಿನಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಒಪಿಡಿ ಸೇವೆ ಒದಗಿಸುತ್ತಿವೆ. ರಾಯಚೂರು, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿರುವದಾಗಿ ಹೇಳಲಾಗಿದೆ.

ಈ ವಿಚಾರ ಸಂಬಂಧ ಸೋಮವಾರ ಕೇಂದ್ರ ವೈದ್ಯಕೀಯ ಸಚಿವ ಜೆ.ಪಿ ನಡ್ಡಾ ಅವರೊಂದಿಗೆ ವೈದ್ಯಕೀಯ ಸಂಘ ಮಾತುಕತ ನಡೆಸಿದ್ದು, ಸಂಧಾನ ಮಾತುಕತೆ ವಿಫಲವಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಕಳೆದ ಶಕ್ರವಾರ ವೈದ್ಯ ಆಯೋಗ ಮಸೂದೆ, ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಮಂಗಳವಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ವಿಧೇಯಕದ ಅನುಸಾರ ಭ್ರಷ್ಟಾಚಾರದ ಆರೋಪ ಹೊತ್ತಿರುವ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ರದ್ದಾಗಲಿದ್ದು, ಇದರ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅಸ್ತಿತ್ವಕ್ಕೆ ಬರಲಿದೆ.

ಈ ಹಿಂದೆ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಎಂಸಿಐ ಹೊತ್ತುಕೊಂಡಿತ್ತು. ಆದರೆ ಈ ಸಂಸ್ಥೆಯ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಈ ಹಿಂದೆ ಚೇರ್ಮನ್‌ ಆಗಿದ್ದ ಕೇತನ್‌ ದೇಸಾಯಿಯವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಅಂದಿನಿಂದ ಈ ಸಂಸ್ಥೆ ಜಾಗದಲ್ಲಿ ಹೊಸ ಸಂಸ್ಥೆ ಸ್ಥಾಪನೆಗೆ ಬೇಡಿಕೆ ಇತ್ತು. ಆದ್ದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರ ಮತ್ತು ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ ಸರ್ಕಾರ  ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಮುಂದಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com