ನನ್ನ ಕಿಡ್ನ್ಯಾಪ್‌ ಮಾಡಿದ್ದರಲ್ಲಿ BSY ಪಾತ್ರವಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಎಂದ ವಿನಯ್‌

ಬೆಂಗಳೂರು : ಬಿಜೆಪಿ ಮೂಲದ ವಿನಯ್‌ ಹಾಗೂ ಯಡಿಯೂರಪ್ಪ ಆಪ್ತ ಸಂತೋಷ್‌ ನಡುವಿನ ಕಿತ್ತಾಟ ಕೊನೆಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರಕರಣದ ಸಂತ್ರಸ್ತ ವಿನಯ್‌ ತಮ್ಮ ಕಿಡ್ನ್ಯಾಪ್‌ ಪ್ರಕರಣ ಸಂಬಂಧ ಮಹಾಲಕ್ಷ್ಮಿ ಲೇ ಔಟ್‌ ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ವಿನಯ್‌ ಪತ್ನಿ ಶೋಭಾ , ಯಡಿಯೂರಪ್ಪನವರಿಗೆ ಬರೆದ ಪತ್ರಕ್ಕೆಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ.

ಬಳಿಕ ಮಾತನಾಡಿದ ವಿನಯ್‌, ನನ್ನ ಮೇಲಿನ ಹಲ್ಲೆ ಪ್ರಕರಣದಲ್ಲಿ ಯಡಿಯೂರಪ್ಪ ಹಾಗೂ ಸಂತೋಷ್‌ ಪಾತ್ರವಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ನಾನು 10ನೇ ತಾರೀಕಿನವರೆಗೂ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಯಡಿಯೂರಪ್ಪ ಉತ್ತರಿಸದಿದ್ದಲ್ಲಿ ಕಾನೂನು ರೀತಿಯ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಶೋಭಾ, ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು, ಅದರಲ್ಲಿ ವಿನಯ್ ಮೇಲಾದ ದೌರ್ಜನ್ಯಕ್ಕೆ ನ್ಯಾಯ ಕೇಳಿದ್ದಲ್ಲದೆ, ನೀವು ಸಂತೋಷ್‌ನನ್ನು ರಕ್ಷಿಸುತ್ತಿದ್ದೀರಿ, ಹೆಣ್ಣು ಮಕ್ಕಳ ಶಾಪ ನಿಮ್ಮನ್ನು ತಟ್ಟದೇ ಬಿಡುವುದಿಲ್ಲ ಎಂದಿದ್ದರು. ಈ ಪತ್ರವನ್ನು ಮಹಿಳಾ ಆಯೋಗ, ಪ್ರಧಾನಿ ಮೋದಿ ಅವರಿಗೂ ಕಳುಹಿಸಿದ್ದರು.

ಈಗ ಈ ಪತ್ರವನ್ನು ಮಹಾಲಕ್ಷ್ಮಿಪುರಂನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ವಿವರಣೆ ನೀಡುವಂತೆ ವಿನಯ್‌ ಹಾಗೂ ಶೋಭಾಗೆ ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿನಯ್‌ ಪೊಲೀಸ್ ಠಾಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ.

 

Leave a Reply

Your email address will not be published.