EPW editorial : WTO-ವಿಶ್ವ ವಾಣಿಜ್ಯ ವ್ಯವಸ್ಥೆಯ ನಿಯಮಗಳನ್ನು ಮತ್ತೊಮ್ಮೆ ತಿದ್ದಲಾಗುತ್ತಿದೆ..

ಅಮೆರಿಕದ ಟ್ರಂಪ್ ಸರ್ಕಾರವು ತನ್ನ ಅನೂಕೂಲಕ್ಕಾಗಿ ವಿಶ್ವ ವಾಣಿಜ್ಯ ಸಂಸ್ಥೆಯ ಬಹುಪಕ್ಷೀಯ ಚೌಕಟ್ಟನ್ನು ಮುರಿಯಲುದ್ದೇಶಿಸಿದೆಯೇ?

೨೦೧೭ರ ಡಿಸೆಂಬರ್ ೧೦-೧೩ರ ವರೆಗೆ ಅರ್ಜೆಂಟೈನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ  ವಿಶ್ವ ವಾಣಿಜ್ಯ ಸಂಸ್ಥೆಯ (ಡಬಲ್ಯೂ.ಟಿ.ಓ) ೧೧ನೇ ಮಂತ್ರಿಮಟ್ಟದ ಸಮ್ಮೇಳನದಲ್ಲಿ ಎಲ್ಲರಿಗೂ ಒಂದು ವಿಷಯವಂತೂ ಸ್ಪಷ್ಟವಾಯಿತು. ಅದೇನೆಂದರೆ ಅಮೆರಿಕವು ವಿಶ್ವ ವಾಣಿಜ್ಯ ಸಂಸ್ಥೆಯ ಬಹುಪಕ್ಷೀಯ ಚೌಕಟ್ಟನ್ನು ಮುರಿಯಲು ಯತ್ನಿಸುತ್ತಿದೆ ಎಂಬುದು. ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲಿಗ್ತಿಜರ್ ಅವರು ಚರ್ಚೆಯಾಗಲು ನಿಗದಿಯಾಗಿದ್ದ ಯಾವೊಂದು ವಿಷಯದ ಬಗ್ಗೆಯೂ ಯಾವುದೇ ತೀರ್ಮಾನವಾದ ಹಾಗೆ ನೋಡಿಕೊಂಡರಲ್ಲದೆ ಸಮ್ಮೇಳನವು ಎಂದಿನಂತೆ ಒಂದು ಮಂತ್ರಿಗಳ ಮಟ್ಟದ ಘೊಷಣೆಯನ್ನು ಮಾಡದೆ ಅಂತ್ಯವಾಗುವಂತೆಯೂ ಖಾತರಿಮಾಡಿಕೊಂಡರು.

ಕಳೆದ ನವಂಬರ್‌ನಲ್ಲಿ ವಿಯೆಟ್ನಾಮಿನಲ್ಲಿ ನಡೆದ ಏಷಿಯ-ಪೆಸಿಫಿಕ್ ಎಕಾನಾಮಿಕ ಕೋಆಪರೇಷನ್ (ಏಷಿಯಾ-ಪೆಸಿಫಿಕ್ ಆರ್ಥಿಕ ಸಹಕಾರ) ಒಕ್ಕೂಟದ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಅಮೆರಿಕವೇ ಮೊದಲು ಎಂಬ ವಾಣಿಜ್ಯ ನೀತಿಯನ್ನು ಪ್ರತಿಪಾದಿಸಿದಾಗಲೇ ಇಂಥಾ ಒಂದು ಶೋಚನೀಯ ಪರಿಣಾಮದ ಸೂಚನೆಯು ಸಿಕ್ಕಿತ್ತು. ವಾಣಿಜ್ಯದ ಕುರಿತಾದ  ಬಹುಪಕ್ಷೀಯ ಧೋರಣೆಯ ಬಗ್ಗೆ ತಮ್ಮ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದ ಟ್ರಂಪ್ ಅವರು ಅಮೆರಿಕವು ದ್ವಿ ಪಕ್ಷೀಯ ವಾಣಿಜ್ಯ ಒಪ್ಪಂದಗಳ ಮೂಲಕ ಪರಸ್ಪರ ಅನುಕೂಲಕಾರಿ ವಾಣಿಜ್ಯ ನೀತಿಯನ್ನು ಪಾಲಿಸುವುದಾಗಿ ಖಚಿತಪಡಿಸಿದ್ದರು. ಅಮೆರಿಕವು ಅಪಾರವಾದ ವ್ಯಾಪಾರ ಕೊರತೆಯನ್ನು ಅನುಭವಿಸುತ್ತಾ ಉದ್ಯೋಗ, ಹೂಡಿಕೆ ಮತ್ತು ಕೈಗಾರಿಕೆಗಳನ್ನು ಕಳೆದುಕೊಳ್ಳಲು ಅಮೆರಿಕದ ದುರ್ಬಲ ರಾಜಕೀಯ ನಾಯಕತ್ವವೇ ಕಾರಣವೆಂದು ಪ್ರತಿಪಾದಿಸಿದ ಟ್ರಂಪ್ ಅವರು ವಿಶ್ವ ವಾಣಿಜ್ಯ ಸಂಸ್ಥೆಯು ಅಮೆರಿಕವನ್ನು ಕೆಟ್ಟದಾಗಿ ನಡೆಸಿಕೊಂಡಿದೆಯೆಂದೂ ದೂರಿದ್ದರು.

ವಿಶ್ವ ವಾಣಿಜ್ಯ ಸಂಸ್ಥೆಯ ಸಮ್ಮೇಳನದಲ್ಲಿ ಅಮೆರಿಕದ ವಾಣಿಜ್ಯ ಪ್ರತಿನಿಧಿಯು ಆಫ್ರಿಕಾದ ಪ್ರಮುಖ ನಾಲ್ಕು ಹತ್ತಿ ಉತ್ಪಾದಕ ದೇಶಗಳಾದ ಬೆನಿನ್, ಬುರ್ಕಿನೋ ಫಾಸೋ, ಚಾಡ್ ಮತ್ತು ಮಾಲಿ ದೇಶಗಳ ಅಹವಾಲುಗಳಿಗೆ ಕಿಂಚಿತ್ತೂ ಗಮನ ಕೊಡಲಿಲ್ಲ.  ಹಾಗೆ ನೋಡಿದರೆ ಆ ದೇಶಗಳು ಅಮೆರಿಕದ ಒಪ್ಪಿಗೆಯನ್ನು ಪಡೆಯುವ ಸಲುವಾಗಿಯೇ ತಮ್ಮ ರೈತರಿಗೆ ಕೊಡುತ್ತಿದ್ದ ಬೆಂಬಲದ ಮೊತ್ತದಲ್ಲಿ ಮತ್ತು ವಿದೇಶಿ ಉತ್ಪಾದಕರಿಗೆ ತಮ್ಮ ಮಾರುಕಟ್ಟೆಯಲ್ಲಿ ಅವಕಾಶ ಕೊಡುವ ನೀತಿಯಲ್ಲಿ ದೊಡ್ಡ ಮಟ್ಟದ ಹೊಂದಾಣಿಕೆಯನ್ನು ಮಾಡಿಕೊಂಡಿದ್ದವು. ಇದು ತನ್ನ ಪ್ರಜೆಗಳು ಜೀವನ್ಮರಣದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸರ್ವಾಧಿಕಾರಿ ಸಾಮ್ರಾಟನೊಬ್ಬ ತೋರುವ ದುರಹಂಕಾರದ ವರ್ತನೆಯಂತೆಯೇ ಇತ್ತು. ಅದೇರೀತಿ ಭಾರತದ ಹಾಗೂ ಇನ್ನಿತರ ಅಭಿವೃದ್ಧಿಶೀಲ ದೇಶಗಳು ತಮ್ಮ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದಾದ ಆಹಾರ ಸಂಗ್ರಹದ ನೀತಿಯ ಬಗ್ಗೆ ಒಂದು ಶಾಶ್ವತ ಒಪ್ಪಂದಕ್ಕೆ ಬರುವುದಾಗಿ ಕೊಟ್ಟಿದ್ದ ಭರವಸೆಗೂ ಅಮೆರಿಕ ದ್ರೋಹ ಬಗೆಯಿತು. ಇದರ ಜೊತೆಗೆ ಅಮೆರಿಕದ ವಾಣಿಜ್ಯ ಪ್ರತಿನಿಧಿಯು ವಿಶ್ವ ವಾಣಿಜ್ಯ ಸಂಸ್ಥೆಯ ವ್ಯಾಜ್ಯ ಒಪ್ಪಂದ ಸಮಿತಿಯಲ್ಲಿ ಖಾಲಿಯಾಗಿರುವ ಸದಸ್ಯರ ಭರ್ತಿ ಪ್ರಕ್ರಿಯೆಗೂ ತಡೆಯೊಡ್ಡಿ ಸುಮಾರು ತಗಾದೆಗಳು ನೆನೆಗುದಿಗೆ ಬೀಳುವಂತೆ ನೋಡಿಕೊಂಡಿತು. ಆದರೆ ವಿಶ್ವ ವಾಣಿಜ್ಯ ಸಂಸ್ಥೆಯ ಸಭೆಯೊಳಗೆ ಮತ್ತು ಅಕ್ಕಪಕ್ಕದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಗಮನಿಸಿದಲ್ಲಿ ಅಭಿವೃದ್ಧಿಶೀಲ ಮತ್ತು ಬಡರಾಷ್ಟ್ರಗಳೊಡನೆ ಸರ್ವಾಧಿಕಾರೀ ಧೋರಣೆಯೊಂದಿಗೆ ವರ್ತಿಸಿದ್ದು ಅಮೆರಿಕ ಮಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸುಮಾರಷ್ಟು ವಿಷಯಗಳಲ್ಲಿ ಅದರಲ್ಲೂ ಚೀನಾಗೆ ಸಂಬಂಧಪಟ್ಟ ವಿಷಯಗಳಲ್ಲಿ ಐರೋಪ್ಯ ಒಕ್ಕೂಟ, ಜಪಾನ್ ಮತ್ತು ಕೆನಡಗಳು ಅಮೆರಿಕದ ಜೊತೆಜೊತೆಯಾಗಿ ನಿಂತಿದ್ದವು.

ದೋಹಾ ಸುತ್ತಿನ ಬಹುಪಕ್ಷೀಯ ಮಾತುಕತೆಗಳು ಕೊನೆಗೊಂಡಿವೆಯೆಂದೇ ಸುಮಾರಷ್ಟು ಕಾಲದಿಂದ ಅಮೆರಿಕವು ಪರಿಗಣಿಸುತ್ತಾ ಬಂದಿದೆ. ಈ ಸಮ್ಮೇಳನದ ಅಂತ್ಯದ ಹೊತ್ತಿಗೆ ಅಮೆರಿಕದ ವಾಣಿಜ್ಯ ಪ್ರತಿನಿಧಿಯು ಮಾಡಿದ ಈ ಹೇಳಿಕೆಯನ್ನು ಗಮನಿಸಬೇಕು:  ಅಮೆರಿಕವು ಇಂದಿನ ವಾಸ್ತವಗಳಿಗೆ ತಕ್ಕದಾದ ಕೃಷಿ ಸಂಬಂಧೀ ಒಪ್ಪಂದಗಳಾಗುವುದನ್ನು ನಿರೀಕ್ಷಿಸುತ್ತದೆಯೇ ವಿನಃ ೧೬ ವರ್ಷಗಳಷ್ಟು ಹಿಂದಿನ, ಕಾಲಬಾಹಿರ ಮತ್ತು ಅನುಷ್ಠಾನಯೋಗ್ಯವಲ್ಲದ ಹಳೆಯ ಒಪ್ಪಂದಗಳನ್ನಲ್ಲ. ಇದು ಭವಿಷ್ಯದ ಅಭಿವೃದ್ಧಿ  ಸಂಬಂಧೀ ಮಾತುಕೆತಗಳಿಗೆ ಅಡಿಪಾಯವನ್ನು ಹಾಕಿಕೊಟ್ಟಿದ್ದ ದೋಹಾ ಸುತ್ತಿನ  ಮಾತುಕತೆಗಳ ಬಗ್ಗೆ ಮಾಡಿದ ಟೀಕೆಯೇ ಆಗಿತ್ತು. ಇಷ್ಟು ಮಾತ್ರವಲ್ಲ. ಒಂದೆಡೆ ವಿಶ್ವ ವಾಣಿಜ್ಯ ಸಂಸ್ಥೆಯ ಬಹುಪಕ್ಷೀಯ ಚೌಕಟ್ಟು ಕುಸಿಯುತ್ತಿದ್ದರೆ ಮತ್ತೊಂದೆಡೆ ಹೂಡಿಕೆಗೆ ಪೂರಕವಾದ, ಎಲೆಕ್ಟ್ರಾನಿಕ್ ಕಾಮರ್ಸ್, ಅತಿ ಸಣ್ಣ, ಸಣ್ನ ಮತ್ತು ಮಧ್ಯಮ ಗಾತ್ರದ ವಹಿವಾಟುಗಳಿಗೆ ಸಂಬಂಧಪಟ್ಟ ಚೌಕಟ್ಟನ್ನು ರೂಪಿಸುವ ಬಹುವಾಣಿಜ್ಯ ಒಪ್ಪಂದಗಳನ್ನು (ಇಲ್ಲಿ ಸದಸ್ಯತ್ವ ಕಡ್ಡಾಯವಲ್ಲ ಮತ್ತು ವಿಶ್ವ ವಾಣಿಜ್ಯ ಸಂಸ್ಥೆ ಈವರೆಗೆ ಕೈಗೆತ್ತಿಕೊಳ್ಳದ ವಿಷಯಗಳನ್ನೂ ಅದು ಒಳಗೊಳ್ಳುತ್ತದೆ) ಘೋಷಿಸಲಾಯಿತು.

ಹಾಗೆ ನೋಡಿದರೆ ೧೯೪೬ರಲ್ಲಿ ಅಮೆರಿಕವು ಘೋಷಿಸಿದ ಸುಂಕದರಗಳನ್ನು ಕಡಿತಗೊಳಿಸಲು ನಡೆದ ಮಾತುಕತೆಯಿಂದಲೇ ವಾಣಿಜ್ಯ ಮತ್ತು ಸುಂಕಗಳ ಬಗೆಗಿನ ಸಾರ್ವತ್ರಿಕ ಒಪ್ಪಂದವು (ಜನರಲ್ ಅಗ್ರಿಮೆಂಟ್ ಟ್ರೇಡ್ ಅಂಡ್ ಟ್ಯಾರಿಫ್- ಗ್ಯಾಟ್) ಹುಟ್ಟಿಕೊಂಡಿತೆಂಬುದನ್ನು ಇಲ್ಲಿ ನೆನೆದುಕೊಳ್ಳಬಹುದು. ಈ ಮಾತುಕತೆಯಿಂದಾಗಿ ಭಾರತವನ್ನೂ ಒಳಗೊಂಡಂತೆ ೨೩ ದೇಶಗಳು ೧೯೪೭ರ ಅಕ್ಟೋಬರ್‌ನಲ್ಲಿ ಒಂದು ಒಪ್ಪಂದಕ್ಕೆ ಬಂದವು. ಅಂತರರಾಷ್ಟ್ರೀಯ ವ್ಯಾಪಾರಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಂಘಟನೆಯ ಅಗತ್ಯವನ್ನು ೧೯೪೮ರ ಮಾರ್ಚ್‌ನಲ್ಲಿ ೫೩ ದೇಶಗಳು ಒಟ್ಟು ಸೇರಿ ಮಾಡಿಕೊಂಡ ಹವಾನ ಒಡಂಬಡಿಕೆಯು ಪ್ರತಿಪಾದಿಸಿದರೂ ಅದನ್ನು ಅಮೆರಿಕದ ಕಾಂಗ್ರೆಸ್ ಒಪ್ಪದಿದ್ದರಿಂದ ೧೯೯೫ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯು ರೂಪುಗೊಳ್ಳುವವರೆಗೆ ಗ್ಯಾಟ್ ಒಪ್ಪಂದವೇ ಮುಂದುವರೆಯಬೇಕಾಯಿತು. ಇದೇ ಅಕ್ಟೋಬರ್ ೨೦೧೭ಕ್ಕೆ ಗ್ಯಾಟ್ ಒಪ್ಪಂದವಾಗಿ ೭೦ ವರ್ಷಗಳಾಗುತ್ತವೆಯಾದರೂ ಅದನ್ನು ಯಾರು ನೆನಪಿಸಿಕೊಳ್ಳಲಿಲ್ಲ. ಅದೇನೇ ಇದ್ದರೂ ಎರಡನೇ ಮಹಾಯುದ್ಧದ ನಂತರದಲ್ಲಿ ಯಾವ ಬಹುಪಕ್ಷೀಯ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ಅಮೆರಿಕವು ಪ್ರತಿಪಾದಿಸಿತ್ತೋ ಅಂಥಾ ಅಂತರರಾಷ್ಟ್ರೀಯ ವ್ಯವಸ್ಥೆಯ ಭಾಗವಾಗಿರುವ ವಿಶ್ವ ವಾಣಿಜ್ಯ ಸಂಸ್ಥೆಯನ್ನು ನಾಶ ಮಾಡುವುದರಲ್ಲೂ ಅದೇ ಅಮೆರಿಕವೇ ಈಗ ಕೇಂದ್ರ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಗ್ಯಾಟ್ ಸಂಸ್ಥೆಯನ್ನು ಅಮೆರಿಕದ ವ್ಯಾಪಾರ ಆಡಳಿತ ಸಂಸ್ಥೆಗಳೇ ನಿಯಂತ್ರಿಸುತ್ತಾ ಬಂದಿದ್ದವು. ಆಗ ನಡೆಯುತ್ತಿದ್ದ ಪ್ರತಿಯೊಂದು ಬಹುಪಕ್ಷೀಯ ವ್ಯಾಪಾರ ಮಾತುಕತೆಯೂ ಅಮೆರಿಕz ವಾಣಿಜ್ಯ ನೀತಿಯಲ್ಲಿ ಬಂದಂಥ ಯಾವುದಾದರೂ ಬದಲಾವಣೆಯ ಸಂದರ್ಭದಲ್ಲೇ ನಡೆಯುತ್ತಿತ್ತು. ಉದಾಹರಣೆಗೆ ೧೯೫೦ರಲ್ಲಿ ಕೃಷಿಯನ್ನು ಗ್ಯಾಟ್ ನಿಯಮಗಳ ವ್ಯಾಪ್ತಿಯ ಹೊರಗಿಡಲಾಯಿತು. ಅದು ಆಗ ರೋಮ್ ಒಪ್ಪಂದದ ಮೂಲಕ ಐರೋಪ್ಯ ಆರ್ಥಿಕ ಸಮುದಾಯವನ್ನು ಸ್ಥಾಪಿಸಲು ನಡೆಯುತ್ತಿದ್ದ ಪ್ರಯತ್ನಗಳಿಗೂ ಮತ್ತು ಆ ನಂತರ ಏರ್ಪಟ್ಟ ಸಮಾನ ಕೃಷಿ ನೀತಿಗೂ ಪೂರಕವಾಗಿತ್ತು. ಅಮೆರಿಕ ಮತ್ತು ಜಪಾನಿನ ಒತ್ತಡದ ಕಾರಣಗಳಿಗೆ ೧೯೫೮ರಲ್ಲಿ ಜವಳಿ ಮತ್ತು ಬಟ್ಟೆಗಳನ್ನು ಗ್ಯಾಟ್ ವ್ಯಾಪ್ತಿಯಿಂದ ಹೊರಗಿಡಲಾಯಿತು. ಆದರೆ ಉರುಗ್ವೆ ಸುತ್ತಿನ ಮಾತುಕತೆಯಲ್ಲಿ (೧೯೮೬-೯೪) ಈ ಎಲ್ಲಾ ಕ್ಷೇತ್ರಗಳನ್ನು ಮರಳಿ ಗ್ಯಾಟ್ ವ್ಯಾಪ್ತಿಗೆ ತರಲಾಯಿತು. ಏಕೆಂದರೆ ಅದರ ವ್ಯಾಪ್ತಿಯನ್ನು ವಾಣಿಜ್ಯದ ಇನ್ನೂ ಇತರ ಕ್ಷೇತ್ರಗಳಾದ ಸೇವಾ ಕ್ಷೇತ್ರ, ಬೌದ್ಧಿಕ ಸ್ವಾಮ್ಯ ಮತ್ತು ವ್ಯಾಪಾರ ಸಂಬಂಧೀ ಹೂಡಿಕೆಯ ಕ್ರಮಗಳಿಗೂ ವಿಸ್ತರಿಸುವ ಅಗತ್ಯವಿತ್ತು.

ಆದರೆ ಈ ಹಿಂದಿನಂತೆ ಯಾವುದೇ ಪ್ರಜಾಂತ್ರಿಕ ಉತ್ತರದಾಯಿತ್ವವಿಲ್ಲದ ಈ ವಿಶ್ವ ವಾಣಿಜ್ಯ ಸಂಸ್ಥೆಯಲ್ಲೂ ಕೆಲವೇ ಕೆಲವು ಬಲಾಢ್ಯ ದೇಶಗಳು ವ್ಯಾಪಾರ ಮತ್ತು ವ್ಯಾಪಾರ ಸಂಬಂಧೀ ಎಲ್ಲಾ ವಿಷಯಗಳಲ್ಲೂ ತಮ್ಮ ಪ್ರಭಾವವನ್ನೂ ಬೀರುತ್ತಾ ಬಂದಿವೆ. ಅದರಿಂದ  ವಿಶ್ವದ ಅಧೀನ ಆರ್ಥಿಕತೆಗಳ ಎಲ್ಲಾ ಕ್ಷೇತ್ರಗಳ ಮೇಲೂ ಅತ್ಯಂತ ಕೆಟ್ಟ ಪರಿಣಾಮ ಉಂಟಾಗಲು ಕಾರಣವಾಗಿವೆ.

ಟ್ರಂಪ್ ಸರ್ಕಾರವು ದಾಳಿ ನಡೆಸಿರುವುದು ಈ ಅಸಮಾನ ವಾಣಿಜ್ಯ ವ್ಯವಸ್ಥೆಯ ಮೇಲಲ್ಲ. ಸಾಪೇಕ್ಷವಾಗಿ ಸ್ವಲ್ಪ ಮಟ್ಟಿನ ಆರ್ಥಿಕ ಕುಸಿತವನ್ನು ಕಾಣುತ್ತಿರುವ ತನ್ನ ಆರ್ಥಿಕತೆಯು ಚೇತರಿಸಿಕೊಂಡು ಮತ್ತೆ ಜಾಗತಿಕ ಆರ್ಥಿಕತೆಯಲ್ಲಿ ತನ್ನನ್ನು ತಾನು ಏಕಮಾನ್ಯ ಅಗ್ರ ರಾಷ್ಟ್ರವಾಗಿ ಮರುಸ್ಥಾಪಿಸಿಕೊಳ್ಳಲು ಪೂರಕವಾದ ರೀತಿಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳನ್ನು ಬದಲಿಸಲು ಅಮೆರಿಕವು ಅಪೇಕ್ಷಿಸುತ್ತಿದೆ.

ಕೃಪೆ: Economic and Political Weekly

ಅನು: ಶಿವಸುಂದರ್ 

(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

Leave a Reply

Your email address will not be published.

Social Media Auto Publish Powered By : XYZScripts.com