ನನ್ನ ಷರಾ…. : ಮೇಲೆದ್ದ ಮೇವಾನಿ, ದಹಿಸಿಹೋದ ದಾನಮ್ಮ : ಎರಡರ ನಡುವೆ….

ಇತ್ತೀಚೆಗೆ ಯಾವುದೇ ವಿಷಯದ ಬಗ್ಗೆ ಒಂದು ಪೂರ್ಣ ಪ್ರಮಾಣದಲ್ಲಿ ಸಮಗ್ರ ದೃಷ್ಟಿಕೋನದಿಂದ ಒಂದು ಲೇಖನ ಬರೆಯಲು ಹೋದರೆ ತುಂಬಾ ಕಷ್ಟವಾಗುತ್ತದೆ. ಒಂದು ಘಟನೆಗೆ ಹಲವು ಆಯಾಮಗಳು, ಹಲವು ವ್ಯಾಖ್ಯಾನಗಳು, ಹಲವು ನಿರ್ಧಾರಗಳು. ಇವೆಲ್ಲಾ ಯಾವುದೇ ವಿಷಯಕ್ಕೂ ಹೊಸತೇನೂ ಅಲ್ಲ. ಆದರೆ, ಅವುಗಳಿಗೆ ಹಲವಾರು ದಶಕಗಳ, ಶತಮಾನಗಳ ಇತಿಹಾಸವೂ ಕೂಡ ಹಿನ್ನೆಲೆಯಾಗಿ ಧುತ್ತೆಂದು ನಿಲ್ಲುತ್ತದೆ. ಎಷ್ಟರಮಟ್ಟಿಗೆ ಜಿಗುಪ್ಸೆಯಾಗುವುದೆಂದರೆ, ಸಾವಿರಾರು ವರ್ಷಗಳಿಂದ ಇದೇ ವಿಷಯಗಳಿಗೆ ಹೋರಾಟ ಮಾಡುತ್ತಾ, ಹೊಡೆದಾಡಿಕೊಂಡಿರುವುದು ಕಷ್ಟ ಎನಿಸಿ ಸುಮ್ಮನಾಗಿಬಿಡೋಣ ಅಂದರೆ, ಆಗುವುದೇ? ಸಾಧ್ಯವಾಗದು. ಇವೆಲ್ಲಾ ಜೀವ, ಜೀವನ ಕ್ರಮ, ಬದುಕಿನ ಕಟ್ಟಿಕೊಳ್ಳುವ ಬಗೆ, ಶೋಷಣೆ, ಅಳಿವು ಉಳಿವು; ಹೀಗೆ ಹತ್ತು ಹಲವು ಜೀವಂತ ವಿಷಯಗಳಲ್ಲಿ ಬೆರೆತುಹೋಗಿದೆ.
ಕನಿಷ್ಟ ಪಕ್ಷ ಹೊಸ ತಲೆಮಾರುಗಳಿಗೆ ಹೊಸ ಸಮಸ್ಯೆಗಳು ಬಂದರೆ ಅಂತಹ ಸಮಸ್ಯೆಗಳ ಬಗ್ಗೆ ಹೊಸ ಸಂಶೋಧನೆ ಮಾಡಬಹುದು. ಖಂಡಿತವಾಗಿ ಯಾವುದೇ ಹೊಸ ಶೋಧನೆ ಎಂದರೂ ಅದನ್ನು ಬಗೆ ಹರಿಸಲು ಭೂತವನ್ನೇ ಬಗೆಯಬೇಕು.

ಗಟ್ಟಿಯಾಗಿ ಹೋರಾಡು:
ಗುಜರಾತಿನಲ್ಲಿ ಗೆಲುವು ಸಾಧಿಸಿದ ಜಿಗ್ನೇಶ್ ಮೇವಾನಿಗೆ ಅಭಿನಂದನೆ ಸಲ್ಲಿಸಿದರೆ, ಬ್ಯಾಂಡೇಜ್ ಕಟ್ಟಿ ಎತ್ತಿ ಹಿಡಿದ ಹೆಬ್ಬಿಟ್ಟನ ಚಿತ್ರ ಮಾರುತ್ತರ ಬಂದಿತು.
ನಿರ್ಣಾಯಕ ಸ್ಥಾನದಲ್ಲಿ ನಿಂತು ನಿರ್ಣಯಗಳನ್ನು ತೆಗೆದುಕೊಳ್ಳಲು ಈಗ ಸಾಧ್ಯವಾದೀತೇ? ಜಿಗ್ನೇಶ್ ಅಸೆಂಬ್ಲಿಯನ್ನು ಪ್ರವೇಶಿಸುವುದೆಂದರೆ, ವ್ಯೂಹದೊಳಗೆ ಪ್ರವೇಶಿಸಿ ಮತ್ತೆ ಎದುರಾಳಿಗಳೊಂದಿಗೆ ಹೋರಾಡಬೇಕು ಎನ್ನುತ್ತದೆಯೇ ಆ ಚಿತ್ರ ಎಂದು ಆಲೋಚಿಸಿದೆ. ಏನೇ ಆದರೂ ಕಾಂಗ್ರೆಸ್, ಎಸ್ ಡಿ ಪಿ ಐದಂತಹ ಪಕ್ಷಗಳು ತಮ್ಮ ಸಾಮಾನ್ಯ ಎದುರಾಳಿಯನ್ನು ಗಮನದಲ್ಲಿಟ್ಟುಕೊಂಡು ಜಿಗ್ನೇಶ್ ರವರನ್ನು ಬೆಂಬಲಿಸಿದ್ದು ದಲಿತ ಚಳವಳಿಯನ್ನು ಬಲಪಡಿಸುವುದು ಎಂಬ ಸೂಕ್ಷ್ಮ ಬಲವನ್ನು ಗುರುತಿಸುತ್ತೇನೆ.
ಸ್ವಾತಂತ್ರ್ಯದ ನಂತರ, ಅದರಲ್ಲೂ ಸಂವಿಧಾನದ ರಚನೆಯ ನಂತರ ಈ ಹೊತ್ತಿಗಾಗಲೇ ದಲಿತ ಎಂಬ ಪರಿಭಾಷೆಯೇ ಬಳಕೆಯಲ್ಲಿಲ್ಲದಂತಾಗಿರಬೇಕಿತ್ತು. ಮೀಸಲಾತಿಗೆ ಸಂಬಂಧಪಟ್ಟಂತಹ ಅಂಬೇಡ್ಕರ್ ರವರ ಧೋರಣೆಗಳಲ್ಲಿ ನಾನು ಗುರುತಿಸಲು ಯತ್ನಿಸುವುದು ಇದನ್ನೇ. ಆದರೆ, ಸಾಮಾನ್ಯ ಮಾನವ ಅಥವಾ ನಾಗರಿಕ ಪ್ರಜ್ಞೆಯ ಅವಧಿಯಲ್ಲಿ ಇನ್ನೂ ದಲಿತ ಪ್ರಜ್ಞೆಯಾಗಿ ಉಳಿದಿದೆ ಎಂದರೆ, ದಲಿತರ ಸ್ಥಿತಿಗತಿಗಳು ಸ್ವಾತಂತ್ರ್ಯಾನಂತರದಲ್ಲೂ ಪೂರ್ವದ ಸ್ಥಿತಿಯಲ್ಲೇ ಜೀವಂತವಾಗಿವೆ ಎಂದಾಯ್ತು. ಯಾವ ಶೋಷಿತರ, ದಮನಿತರ, ದಲಿತರ ನೇರ ಪ್ರತಿನಿಧಿಯಾಗಿ ನಿಂತು ಹೋರಾಡಿದ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಮುಂದಿಟ್ಟುಕೊಂಡು, ಅದನ್ನೇ ಆಸರೆಯಾಗಿ ಬಳಸಿಕೊಂಡು ಅದೇ ಅಂಬೇಡ್ಕರ್ ಹೊಂದಿದ್ದ ಆಶಯಗಳನ್ನು ವಿಫಲಗೊಳಿಸುವ ವಿದ್ಯಮಾನಗಳನ್ನು ನಾವು ನೇರವಾಗಿ ಸಾಕ್ಷೀಕರಿಸುತ್ತಿದ್ದೇವೆ.

ಇಲ್ಲಿ ದಲಿತೇತರ ದಲಿತ ವಿರೋಧಿ ಅಥವಾ ಅಸಡ್ಡೆಯ ನಿಲುವುಗಳಿಗಿಂತ ನನಗೆ ಕಾಡುವ ಸಂಗತಿ ಎಂದರೆ ಬಲಿತ ದಲಿತರ ಧೋರಣೆಗಳು. ತಮ್ಮದೇ ಕುಟುಂಬ, ಸಮುದಾಯದ ಹೀನಾಯ ಪರಿಸ್ಥಿತಿಯ ಭೂತವನ್ನು ದಾಟಿ ಬಂದು ಶಿಕ್ಷಣ, ಉದ್ಯೋಗ, ಅಧಿಕಾರ, ಸ್ಥಾನಮಾನಗಳು ದೊರೆತಾದ ಮೇಲೆ ಅದನ್ನು ತಮ್ಮದೇ ಸ್ವಸಾಮರ್ಥ್ಯವೆಂದು ಭಾವಿಸುತ್ತಾ, ಬಿಂಬಿಸುತ್ತಾ ಸಂದರ್ಭೋಚಿತವಾಗಿ ಅಂಬೇಡ್ಕರ್‌ಗೆ ಜೈಕಾರ ಹಾಕುತ್ತಾ ಐಶಾರಾಮದ ಬದುಕನ್ನು ನಡೆಸುತ್ತಿರುವ ಬಲಿತವರ ಸಮುದಾಯದ ಪ್ರಜ್ಞೆಯನ್ನು ಪ್ರಶ್ನಿಸುತ್ತೇನೆ. ಇಲ್ಲಿಯೇ ಜಾತ್ಯಾಭಿಮಾನಕ್ಕೂ, ಸಮುದಾಯ ಪ್ರಜ್ಞೆಗೂ ಸ್ಪಷ್ಟವಾದಂತಹ ನಡುಗೆರೆಯನ್ನು ಎಳೆಯಬೇಕಾಗಿರುವುದು.
ಭೂಮಿ, ವಸತಿ, ಶಿಕ್ಷಣ, ಆಹಾರ ಮತ್ತು ಆರೋಗ್ಯಗಳಿಂದ ವಂಚಿತವಾಗಿರುವ ದಲಿತ ಸಮುದಾಯದ ಕುಟುಂಬಗಳ ದೊಡ್ಡ ದೊಡ್ಡ ಸಮೂಹಗಳನ್ನು ನೇರವಾಗಿ ನೋಡುತ್ತಿದ್ದೇವೆ. ಅದೇ ರೀತಿಯಲ್ಲಿ ಅವನ್ನು ಬರಿದೇ ನೋಡಿ ಜಾಣ ಕುರುಡುತನದಲ್ಲಿ ತಮ್ಮ ಕೆಲಸ, ಪಾಡು ನೋಡಿಕೊಳ್ಳುವ ಸಂತೃಪ್ತರು ಜವಾಬ್ದಾರಿಗಳನ್ನು ಗುರುತಿಸಿಕೊಳ್ಳುವುದರಲ್ಲೇ ಅಪ್ರಮಾಣಿಕರಾಗಿರುವುದು. ದಲಿತನೋ, ಅಥವಾ ಇನ್ನಾವುದೇ ಸಮುದಾಯದವನೋ, ವಸತಿ, ಆಹಾರ, ಆರೋಗ್ಯ ಮತ್ತು ಶಿಕ್ಷಣದ ಕೊರತೆಯಿಂದ ಬಳಲುತ್ತಿದ್ದಾನೆಂದರೆ, ಸಮಾಜದ ಯಾವುದೇ ನಾಗರಿಕ ತಕ್ಷಣವೇ ಯಾವುದೇ ಹಿನ್ನೆಲೆಯನ್ನು ನೋಡದೇ ಅದಕ್ಕೆ ತನ್ನಿಂದಾಗುವ ಕಾಣಿಕೆ ಮತ್ತು ಕಾಣ್ಕೆಗಳನ್ನು ನೀಡಬೇಕೆನ್ನುವುದು ಕರ್ತವ್ಯವೇ ಸರಿ. ಆದರೆ, ತಮ್ಮ ಸಮುದಾಯದ ಹೆಸರುಗಳನ್ನು ತಮ್ಮ ಔನ್ನತ್ಯಕ್ಕೆ ಬಳಸಿಕೊಳ್ಳುವ ಮತ್ತು ತನಗೆದುರಾಗುವ ಅಪಾಯಗಳಿಗೆ ಗುರಾಣಿಯಾಗಿ ಬಳಸುವ ಪ್ರಜ್ಞೆಗೇಡಿಗಳಿಗೆ ಸಮುದಾಯ ಪ್ರಜ್ಞೆ ಇದೆಯೇ ಎಂದು ತಿವಿಯುವ ಅಗತ್ಯವಿರುವುದು.
ಜಾತಿ, ಕುಲ, ಧರ್ಮ, ವರ್ಗ, ವರ್ಣಗಳ ಹೆಸರುಗಳಾವುವೂ ಜೀವ ಮತ್ತು ಜೀವಗಳ ಬದುಕನ್ನು ಪರಿಗಣಿಸುತ್ತಾ ಉತ್ತಮಗೊಳಿಸುತ್ತದೆ. ಘನತೆಯನ್ನು ನೀಡುತ್ತದೆ ಎಂದರೆ ಎಂತಾದರೂ ಬಳಸಿಕೊಳ್ಳಲಿ, “ಹೆಸರಲ್ಲೇನಿದೆ” ಎಂದು ಬಿಡಬಹುದಾಗಿತ್ತು. ಆದರೆ, ಅವೇ ಸಂಘರ್ಷಕ್ಕೆ, ಅಸಹನೆಗೆ, ವಿದ್ರೋಹಗಳಿಗೆ ಕಾರಣವಾಗಿದೆ ಎಂತಾಗಿರುವುದರಿಂದಲೇ ಈಗ ಸಮಸ್ಯೆ.
ಜಿಗ್ನೇಶ್ ಗೆಲುವು, ಅಸೆಂಬ್ಲಿಗೆ ಪ್ರವೇಶ ಎನ್ನುವುದು ಹೋರಾಟವನ್ನು ಗಟ್ಟಿಗೊಳಿಸುತ್ತದೆ ಎಂಬ ಸೂಚನೆ ಎಂದಾಗುತ್ತಿದೆ.
ಸಮಸ್ಯೆ ಮತ್ತು ನೋವು ಎಂದರೆ ಇನ್ನೂ ಹೋರಾಡುತ್ತಲೇ ಇರಬೇಕಲ್ಲಾ ಎಂಬುದು. ಇನ್ನೆಷ್ಟು ಕಾಲಕ್ಕೆ ದಮನಿತರು, ದಲಿತರು, ಶೋಷಿತರು ನೆಮ್ಮದಿಯ ಉಸಿರುಬಿಡುವುದು? ತಟವಟಗಳೊಂದಿಗೆ ಹೋರಾಟ ಮಾಡಿಕೊಂಡು ನೆಮ್ಮದಿಯಾಗಿ ಉಣ್ಣುವುದು, ತೊಡುವುದು, ಬದುಕುವುದು, ಹಿತ ಬದುಕನ್ನು ಕಾಣುವುದು ಯಾವಾಗ? ಹೋರಾಟ ಮಾಡು, ಗಟ್ಟಿಯಾಗಿ ಮಾಡು. ಮತ್ತಷ್ಟು ಮಾಡು ಎಂಬುವ ಧ್ವನಿಗಳು ನಿಲ್ಲುವುದು ಯಾವಾಗ?

 ದಹಿಸಿಹೋದ ದಾನಮ್ಮ:
ದಾನಮ್ಮ ಎಂಬ ಹೆಣ್ಣುಮಗು ನಮ್ಮದೇ ಮನೆಗಳಲ್ಲಿರುವ ಸಾಧಾರಣ ಹೆಣ್ಣುಮಗುವಂತೆ ನೋಡುವ ನಮ್ಮಂತವರ ಕಂಗಳಿಗೂ ಬೇರೊಂದು ದೃಷ್ಟಿ ಬೇಕಿದೆ. ಅವಳ ಕುಟುಂಬವು ಉಸಿರಾಡುತ್ತಿರುವ ದಲಿತ ಸ್ಥಿತಿಗತಿಯ ಕಾರಣದಿಂದ ಎಳೆದವರ ಕೈಗೆಟಕುವಷ್ಟು ಅವಳು ನಿರ್ಬಲಳಾಗಿದ್ದಳಾ? ತಮ್ಮ ದೌರ್ಜನ್ಯಕ್ಕೆ ಅವಳನ್ನು ಎಳೆದುಕೊಳ್ಳುವಷ್ಟು ಅತ್ಯಾಚಾರಿಗಳು ಸಬಲರಾಗಿದ್ದರಾ? ಎರಡೂ ಕುಟುಂಬದ ಮತ್ತು ಸಮಾಜದಲ್ಲಿ ಅವರ ಸಾಮುದಾಯಿಕ ಹಿನ್ನೆಲೆಗಳನ್ನು ನೋಡುವ ಅಗತ್ಯ ಇದೆ. ತಮ್ಮ ಮಗ ಮಚ್ಚು ಲಾಂಗು ಹಿಡಿದುಕೊಂಡು ತನ್ನ ಕ್ರೌರ್ಯವನ್ನು ಪ್ರದರ್ಶಿಸುವಂತಹ ಚಿತ್ರಗಳನ್ನು ಮುಖಪುಟಗಳಲ್ಲಿ ಪ್ರಕಟಿಸುವಾಗ ಮಗ ದಾರಿ ತಪ್ಪಿದ್ದಾನೆ ಎಂದು ಕುಟುಂಬದ ಒಬ್ಬ ಸದಸ್ಯನೂ ನೋಡದೇ ಹೋಗಿದ್ದು ಅಸಡ್ಡೆಯೋ ಅಥವಾ ಅಜ್ಞಾನವೋ? ಇರಲಿ, ಏನೂ ಸಾಧಿಸಿರದ ಮಗನಿಗೆ ಫ್ಯಾನ್ ಪೇಜುಗಳು ಕ್ರಿಯೇಟ್ ಆಗಿದ್ದು ಅವನ ಅಹಂಕಾರ ಬಲಿಯುತ್ತಿದೆ ಎಂದರೆ ಅಭಿಮಾನ ಪಡುವ ಸಂಗತಿಯೋ ಅಥವಾ ಹುಸಿತನಕ್ಕೆ ಬೂಸಿತನ ಹೆಚ್ಚಾಗುತ್ತಿದೆ ಎಂದು ಆತಂಕ ಪಡುವ ವಿಷಯವೋ ಎಂಬಷ್ಟೂ ಗಮನ ಕೊಡಲಿಲ್ಲವೆಂದರೆ, ತಮ್ಮ ಕುಟುಂಬದ ಈ ಮಗುವಿನ ಕೃತ್ಯವನ್ನು ಈಗ ಹೇಗೆ ನೋಡುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ಜೊತೆಗೆ ರಾಜಕೀಯ ಪುಡಾರಿಗಳ ಪುಂಡ ಬಾಲಗಳು ಎಂಬ ಹುಂಬತನ. ಅಹಂಕಾರದ ಧೈರ್ಯ ಕ್ರೌರ್ಯವಾಗಿ ಪರಿಣಮಿಸುವುದು ಹೀಗೆಯೇ. ಹುಂಬತನ ಪುಂಡತನಕ್ಕೆ ತಿರುಗುವುದು ಹೀಗೆಯೇ.
ದಾನಮ್ಮನ ಕುಟುಂಬ ಜೋಪಡಿಗಳಲ್ಲಿರುವವರು. ಬದುಕು ಕೂಲಿ ಮಾಡಿಕೊಂಡು. ಆರ್ಥಿಕ ಭದ್ರತೆಯೂ ಇಲ್ಲ. ಜಾತಿಯ ಅಹಂಕಾರವೂ ಇಲ್ಲ. ಇದರ ಜೊತೆಗೆ ಅವರು ಎಟುಕಿಸಿಕೊಳಬಹುದಾದ ಹಕ್ಕುಗಳ ಅರಿವೂ, ಅದಕ್ಕೆ ನೆರವೂ ಇಲ್ಲ. ಬದುಕು ಹರಿದು ಹೋಗುವವರೆಗೂ ಅರಿವು ಎಟುಕದೇ ಹೋಯಿತೆಂದರೆ ಜೊತೆಗಿರುವವರ ಕರ್ತವ್ಯಗಳೆಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.
ಈ ಹಿಂದೆ ಮಾದಿಗರ, ಹೊಲೇರ ಹೆಣ್ಣು ಮಕ್ಕಳ ಅದು ಚೆಂದ, ಇದು ಚೆಂದ ಅಂತ ಗಾದೆ ಮಾತಾಗುವಷ್ಟು ಭೂ ಮಾಲಿಕರು ದಲಿತರ ಹೆಣ್ಣು ಮಕ್ಕಳನ್ನು ತಮ್ಮಿಚ್ಛೆಗೆ ಬಳಸಿಕೊಳ್ಳುತ್ತಿದ್ದದ್ದು ಏನೂ ಗುಟ್ಟಾಗಿ ಉಳಿಯುತ್ತಿರಲಿಲ್ಲ. ಆ ಶೋಷಿತ ಹೆಣ್ಣುಮಕ್ಕಳ ಆ ಪಾಡು ಒದಗುತ್ತಿದ್ದದ್ದೂ ಆರ್ಥಿಕತೆಗೆ ಅವರನ್ನು ಅವಲಂಬಿಸುವ ಅನಿವಾರ್ಯತೆಗಳಿಂದ. ಬಡತನ ಮತ್ತು ಸಾಮಾಜಿಕ ಅಸಮಾನತೆಯ ಕೀಳರಿಮೆಯನ್ನು ಹೊರಿಸಲಾಗಿರುವ ದಾನಮ್ಮನ ಮನೆಯವರಂತರಿಗೆ ಸಂವಿಧಾನದ ಸದುಪಯೋಗ ಇನ್ನೂ ಆಗಿಲ್ಲ ಎಂದರೆ ವ್ಯವಸ್ಥೆಯ ಮತ್ತು ಸಮಾಜದ ವೈಫಲ್ಯ ಎಂತಹುದು ಎಂದು ನೇರವಾಗಿ ಕಾಣುತ್ತದೆ.

ಮೇವಾನಿ ಮೇಲಕ್ಕೆ ಬಂದದ್ದು ಭೂಮಿಯ ಹಕ್ಕಿಗಾಗಿ ಹೋರಾಡುತ್ತ. ದಾನಮ್ಮ ದಹಿಸಿ ಹೋಗಿದ್ದು ಹಕ್ಕುಗಳನ್ನು ಎಟುಕಿಸಿಕೊಳ್ಳದೇ ಹೋದಂತಹ ಪರಿಸ್ಥಿತಿಯಲ್ಲಿ ಬಾಳುತ್ತ. ಬಡ ಕುಟುಂಬ, ಕೂಲಿಕಾರ ತಂದೆ, ವಿದ್ಯೆಬುದ್ಧಿ ಕಲಿತು ಇನ್ನು ತನ್ನ ಮುಂದಿನ ಬದುಕು ಕಟ್ಟಿಕೊಳ್ಳಬೇಕಾಗಿದ್ದ ದಾನಮ್ಮನ ಈಗಾಗಲೇ ಬದುಕು ಕಟ್ಟಿಕೊಂಡಿರುವ ಮನೆ ಮಕ್ಕಳು ನಾಶ ಮಾಡಿದರು.
ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂದು ಧ್ವನಿಸಿದ ಉಡುಪಿ ಚಲೋದಲ್ಲಿ, ಉಪದನಿಯಾಗಿ ಪಂಕ್ತಿಬೇಧದ ಬಗ್ಗೆ ಮಾತಾಡಿದ ಜಿಗ್ನೇಶ್ ಮೇಮಾನಿಯವರ ಮಾತುಗಳನ್ನು ಹಿಡಿದು, ಜಗ್ಗಾಡಿ, ಅದರಲ್ಲಿ ಉಡುಪಿ ಚಲೋದ ಧ್ವನಿಯನ್ನೇ ಅಡಗಿಸಲು ಹೋದ ಸಮಾಜ ಘಾತುಕರ ವರ್ತನೆಗಳು ನಾವೇನು? ಇತಿಹಾಸವೇ ಮರೆಯೋದಿಲ್ಲ.
ಜಿಗ್ನೇಶ್ ಮೇಮಾನಿಗೆ ಈಗ ಹೋರಾಟದ ಮುಂದುವರಿಕೆ ಹೇಗೆ ಮಾಡಬೇಕೆಂದು, ಯಾವುದನ್ನು ಧ್ವನಿಸಲೇ ಬೇಕು. ಯಾವ ಅಪಸ್ವರವನ್ನು ಯಾವುದಕ್ಕೂ ಎತ್ತಬಾರದೆಂಬ ಮನವರಿಕೆಗಳಾಗಿರುತ್ತವೆ ಎಂದು ಭಾವಿಸುತ್ತೇನೆ. ಯಾವ ಭರವಸೆಯಲ್ಲಿ ಎಲ್ಲರೂ ಒಗ್ಗೂಡಿ ತನ್ನ ಬೆಂಬಲಿಸಿದರು ಎಂಬ ಆಶಯಕ್ಕೆ ತಾನು ವಚನ ಬದ್ಧನಾಗಿರುವುದರ ಪ್ರಜ್ಞೆಯಿಂದ ವಿಚಲಿತರಾಗಿವುದಿಲ್ಲ ಎಂದೂ ಭರವಸೆ ಹೊಂದುತ್ತೇನೆ. ನಮ್ಮ ಯಾವುದೇ ಅಪಸ್ವರವೂ ಸಮಾಜ ಘಾತುಕರ ಮಹಾ ಸಂಗೀತ ಮೇಳವಾಗಿ ಅದನ್ನೇ ಜನ, ಮಾದ್ಯಮಗಳೆಲ್ಲಾ ಒಕ್ಕೊರಲಿಂದ ಹಾಡುತ್ತಿರುತ್ತಾರೆ ಎಂಬ ಮಹದೆಚ್ಚರಿಕೆಯಿಂದಲೇ ಜಿಗ್ನೇಶ್ ಮಾದರಿಯ ಹೋರಾಟಗಾರರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬೇಕು.

ಕೊನೆಗೊಂದು ಷರಾ:
ಬಡವಾ ನೀ ಮಡಗ್ದಂಗಿರು ಎಂದು ಹೇಳುವ ಕರ್ತವ್ಯಗೆಟ್ಟಿರುವ ದನಿ ಇನ್ನು ಧ್ವನಿಸಬಾರದು. ತನ್ನ ಸೂರು, ಮಾರು, ಆಹಾರ, ಆರೋಗ್ಯಗಳಿಗೆ ಒದ್ದಾಡಿಕೊಂಡಿರುವ, ಅದಕ್ಕಾಗಿಯೇ ಇನ್ನೂ ಹೋರಾಡುತ್ತಿರುವ ಅನೇಕ ಬಡ ಮತ್ತು ದಲಿತ ಕುಟುಂಬಗಳನ್ನು ಬಲಿತವರು, ಬಲ್ಲಿದರು ಎಂತಾದರೂ ಉಪಭೋಗಿಸಿಕೊಳ್ಳಬಹುದು ಎಂಬ ಧೋರಣೆ ಅವರದ್ದು. ದುಡ್ಡೇ ದೊಡ್ಡಪ್ಪ ಎನ್ನುವವರದ್ದು. ತಮಗಿರುವ ರಾಜಕೀಯ ಪ್ರಭಾವಿಗಳ ಕೃಪೆ, ಹಣದಿಂದ ಎಂತಹ ಸಾಮಾಜಿಕ ನ್ಯಾಯವನ್ನೂ ಉಲ್ಲಂಘಿಸಬಹುದೆಂಬ ಅಹಂಕಾರವೇ ಅವರ ಧೈರ್ಯ ಮತ್ತು ಆ ಧೈರ್ಯದಿಂದಲೇ ಕ್ರೌರ್ಯ.
ಭೂಮಿಯ ಒಡೆತನದ ಹಕ್ಕನ್ನು ಹೊಂದಿದ್ದು, ಆರ್ಥಿಕವಾಗಿ ಸಾಮಾಜಿಕವಾಗಿ ದಾನಮ್ಮನ ಕುಟುಂಬ ಸದೃಢವೇ ಆಗಿದ್ದ ಪಕ್ಷದಲ್ಲಿ ಅವಳನ್ನು ಬೀಡಾಡಿ ಪುಂಡರು ಅಷ್ಟು ಸುಲಭವಾಗಿ ದಹಿಸಿಹೋಗುವಂತೆ ಮಾಡಲಾಗುತ್ತಿರಲಿಲ್ಲ ಎಂದೇ ನನಗನ್ನಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com