ಸಂವಿಧಾನ ಬದಲಿಸುವ ಹೇಳಿಕೆ : ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ ಸಚಿವ ಹೆಗಡೆ

ದೆಹಲಿ : ನಾವು ಸಂವಿಧಾನವನ್ನು ಬದಲಿಸುವ ಸಲುವಾಗಿ ಅಧಿಕಾರಕ್ಕೆ ಬಂದಿದ್ದೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್‌ ಹೆಗಡೆ ಕೊನೆಗೂ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಸಂವಿಧಾನ ಬದಲಿಸುವ ಹೇಳಿಕೆಯ ವಿರುದ್ದ ಕಾಂಗ್ರೆಸ್‌ ಬುಧವಾರ ಪ್ರತಿಭಟನೆ ನಡೆಸಿದ್ದು, ಹೆಗಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿತ್ತು. ಅಲ್ಲದೆ ಕಲಾಪಕ್ಕೂ ಅಡ್ಡಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೆಗಡೆ ಸ್ಪೀಕರ್‌ ಸುಮಿತ್ರಾ ಮಹಜನ್ ಅವರ ಸೂಚನೆ ಮೇರೆಗೆ ಗುರುವಾರ ಲೋಕಸಭೆಯಲ್ಲಿ  ಕ್ಷಮೆಯಾಚಿಸಿದ್ದಾರೆ.

ಇಂದೂ ಸಹ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಬಳಿಕ ಕಾಂಗ್ರೆಸ್‌ ನಾಯಕರು ಹೆಗಡೆ ರಾಜೀನಾಮೆ ನೀಡಲಿ ಇಲ್ಲವೇ ಕ್ಷಮೆ ಯಾಚಿಸಲಿ ಎಂದು ಪಟ್ಟು ಹಿಡಿದರು.ಈ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸಿದ ಹೆಗಡೆ, ನನಗೆ ಕ್ಷಮೆ ಯಾಚಿಸಲು ಯಾವುದೇ ಬೇಸರವಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.

ನಾನೂ ಸಂವಿಧಾನವನ್ನು ಗೌರವಿಸುತ್ತೇನೆ. ಅಂಬೇಡ್ಕರ್ ಅವರನ್ನೂ ಗೌರವಿಸುತ್ತೇನೆ. ನನಗೆ ನಮ್ಮ ಸಂವಿಧಾನವೇ ಶ್ರೇಷ್ಠ. ಅದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ನಾಗರಿಕನಾಗಿ ಸಂವಿಧಾನ ವಿರೋಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com