ನಾಳೆ ಹುಬ್ಬಳ್ಳಿಯಲ್ಲಿ ಮಹದಾಯಿ ವಿವಾದಕ್ಕೆ ತೆರೆ ಎಳೆಯುತ್ತೇವೆ : B.S ಯಡಿಯೂರಪ್ಪ

ಹುಬ್ಬಳ್ಳಿ : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಬಳಿಕ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಹೈಕಮಾಂಡ್‌ನಿಂದ ಬುಲಾವ್ ಬಂದಿತ್ತು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಗೋವಾ ಸಿಎಂ ಮನೋಹರ್‌ ಪರ್ರಿಕ್ಕರ್‌ ಹಾಗೂ ಯಡಿಯೂರಪ್ಪ ಅವರ ಜೊತೆ ಮಹದಾಯಿ ವಿಚಾರವಾಗಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

ದೆಹಲಿಯಲ್ಲಿಂದು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಹದಾಯಿ ವಿವಾದ ಪರಿಹಾರ ಸಂಬಂಧ ಅಮಿತ್ ಶಾ, ಪರ್ರಿಕ್ಕರ್‌ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ನಾಯಕರ ಸಲಹೆಯನ್ನು ಪರ್ರಿಕ್ಕರ್‌ ಆಲಿಸಿದ್ದಾರೆ. ನಾಳೆ ಅವರು ಅಂತಿಮ ನಿರ್ಧಾರವನ್ನು ಕಳುಹಿಸುವುದಾಗಿ ಹೇಳಿದ್ದು,  ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಎಲ್ಲರೆದುರು ಓದುವುದಾಗಿ ಘೋಷಿಸಿದ್ದಾರೆ.

ನಮ್ಮ ರಾಜ್ಯದ ರೈತರು ಈ ವಿವಾದದಿಂದಾಗಿ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಅವರ ಕಷ್ಟಕ್ಕೆ ಸ್ಪಂದಿಸಬೇಕಾದ ಅಗತ್ಯವಿತ್ತು, ಅಮಿತ್ ಶಾ ಅವರು ಈ ಕುರಿತು ಪರ್ರಿಕ್ಕರ್‌ ಜೊತೆ ಮಾತುಕತೆ ನಡೆಸಿದ್ದಾರೆ. ನಾಳೆ ಒಳ್ಳೆಯ ವಿಚಾರವೇ ಸಿಗಲಿದೆ ಎಂಬ ನಂಬಿಕೆ ನನ್ನದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕಳಸಾ ಬಂಡೂರಿ ವಿಚಾರವನ್ನು ಒಂದು ತಿಂಗಳ ಒಳಗಾಗಿ ಬಗೆಹರಿಸುವುದಾಗಿ ಬಿಎಸ್‌ ವೈ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸಮಾವೇಶದಲ್ಲಿ ಮಹದಾಯಿ ವಿವಾದ ಅಂತ್ಯ ಕಾಣಬಹುದು ಎಂಬ ನಿರೀಕ್ಷೆ ಹುಟ್ಟಿದೆ.

 

Leave a Reply

Your email address will not be published.