ಚುನಾವಣೆಗೋಸ್ಕರನಾದ್ರೂ ರಾಹುಲ್‌ ಗಾಂಧಿ ದೇವಸ್ಥಾನಕ್ಕೆ ಹೋದ್ರಲ್ಲ ಅಷ್ಟೇ ಸಾಕು : BSY

ಬೆಂಗಳೂರು : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲ ರಾಜ್ಯದಲ್ಲೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ್ದು, ಸತತ ಆರನೇ ಬಾರಿಗೆ ಗುಜರಾತಿನ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಜಾತಿ ರಾಜಕಾರಣದ ಮೇಲೆ ಅಧಿಕಾರಸೌಧ ನಿರ್ಮಿಸಬಹುದು ಅಂದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಇದೀಗ ಎಲ್ಲರ ಚಿತ್ತ ಕರ್ನಾಟಕದ ಮೇಲಿದೆ. ರಾಜ್ಯದಲ್ಲಿ ನೂರೈವ್ವತ್ತಕ್ಕೂ ಹೆಚ್ಚು ಸ್ಥಾನ ಗೆಲ್ತೇವೆ.  ಪರಿವರ್ತನಾ ರ್ಯಾಲಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ, ನಾಳೆಯಿಂದ ಮತ್ತಷ್ಟು ಹೆಚ್ಚಿನ ಬೆಂಬಲ ಪರಿವರ್ತನಾ ರ್ಯಾಲಿಗೆ ಸಿಗಲಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಪ್ರವಾಸದಿಂದ ಗೆಲವು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬಿಜೆಪಿಯ ಪರಿವರ್ತನಾ ಯಾತ್ರೆ ಕುರಿತು ಮಾತನಾಡಿದ ಬಿಎಸ್‌ವೈ, ನಾಳೆಯಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ಮತ್ತಷ್ಟು ಅದ್ದೂರಿಯಾಗುತ್ತದೆ. ಇನ್ನು ಅನೇಕರು ನಮ್ಮ ಪಕ್ಷಕ್ಕೆ ಸೇರುತ್ತಾರೆ. ಆದರೆ ಅವರಿಗೆ ಟಿಕೆಟ್ ಕೊಡುವ ಯಾವುದೇ ಭರವಸೆ ನೀಡಲ್ಲ. ನಾವು ಎರಡು ಮೂರು ಸಮೀಕ್ಷೆಗಳನ್ನು ಮಾಡಿಸುತ್ತಿದ್ದೇವೆ. ನಂತರ ಟಿಕೆಟ್ ಕೊಡುವ ವಿಷಯ ಸಂಬಂಧ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದಂತೆ ಕರ್ನಾಟಕ ಖಂಡಿತ ಗುಜರಾತ್ ಅಲ್ಲ ಎಂದಿರುವ ಯಡಿಯೂರಪ್ಪ, ಆದರೆ ನಾವು ಕರ್ನಾಟಕವನ್ನು ಗುಜರಾತ್ ನಂತೆ ಮಾಡುತ್ತೇವೆ. ಕುಣಿಯಲಾರದವರು ನೆಲ ಡೊಂಕು ಎಂದ ಹಾಗೆ ಕಾಂಗ್ರೆಸ್’ನವರು ಇವಿಎಂ ಗಳನ್ನು ದೂರುತ್ತಿದ್ದಾರೆ. ಅದೇ ಇವಿಎಂ ಗಳಲ್ಲಿನ ಮತದಾನದಿಂದಲೇ ಸಿದ್ದರಾಮಯ್ಯ ಗೆದ್ದು ಸಿಎಂ ಆಗಿದ್ದಾರೆ. ಇಂಥ ಬಾಲಿಶ ಹೇಳಿಕೆಗಳನ್ನ ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡಬಾರದು. ಚುನಾವಣಾ ದೃಷ್ಟಿಯಿಂದಲಾದ್ರೂ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರಲ್ಲ, ಅಷ್ಟು ಸಾಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com