ಗುಜರಾತ್‌ನಲ್ಲಿ ಕೇಸರಿ ಪಡೆಯದ್ದೇ ಕಲರವ : “ಕೈ” ತಪ್ಪಿದ ಹಿಮಾಚಲ

ಅಹಮದಾಬಾದ್‌/ಧರ್ಮಶಾಲಾ : ದೇಶದ ಜನತೆ ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಗುಜರಾತ್‌ನಲ್ಲಿ ಮೋದಿ ಅಲೆ ಕಡಿಮೆಯಾಗಿ ಕಾಂಗ್ರೆಸ್‌ 80 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಆಡಳಿತಾರೂಢ ಬಿಜೆಪಿ 99 ಸ್ಥಾನಗಳಲ್ಲಿ ಜಯ ಗಳಿಸಿ ಗೆಲುವಿನ ನಗೆ ಬೀರಿದೆ. ಪ್ರಧಾನಿ ಮೋದಿಗೆ ಸೆಡ್ಡು ಹೊಡೆದು ಚುನಾವಣೆಗೆ ನಿಂತಿದ್ದ ಜಿಗ್ನೇಶ್ ಮೇವಾನಿ ಹಾಗೂ ಅಲ್ಪೇಶ್‌ ಠಾಕೂರ್‌ ಬಿಜೆಪಿ ವಿರುದ್ದ ಮೊದಲ ಬಾರಿಯೇ ಭರ್ಜರಿ ಜಯ ಗಳಿಸಿದ್ದಾರೆ.

ಮತ್ತೊಂದೆಡೆ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಜನ ಕೈ ಕೊಟ್ಟು ಕಮಲ ಅರಳುವಂತೆ ಮಾಡಿದ್ದಾರೆ. 68 ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 21 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಸ್ವತಂತ್ರ್ಯ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.

ಈ ಮೂಲಕ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಜನರ ಕುತೂಹಲ ತಣಿದಂತಾಗಿದೆ. ಇನ್ನು ದೇಶದ ಜನರ ಚಿತ್ತ ಕರ್ನಾಟಕದತ್ತ ನೆಟ್ಟಿದ್ದು, ರಾಜ್ಯದಲ್ಲೂ ಆಡಳಿತಾರೂಢ ಕಾಂಗ್ರಸ್‌ ಮೋದಿ ಅಲೆಗೆ ಧೂಳೀಪಟವಾಗುತ್ತಾ, ಅಥವಾ ಸಿದ್ದರಾಮಯ್ಯ ಸರ್ಕಾರವೇ ಗೆದ್ದು ಬೀಗುತ್ತದಾ ಎಂಬುದನ್ನು ಕುತೂಹಲದಿಂದ ಕಾದು ನೋಡಬೇಕಾಗಿದೆ.

Leave a Reply

Your email address will not be published.