ಹರಕಲು ಸೀರೆ, ಮುರುಕಲು ಸೈಕಲ್‌ ಕೊಟ್ಟಿದ್ದೇ ಯಡಿಯೂರಪ್ಪ ಅವರ ಸಾಧನೆ : ಸಿದ್ದರಾಮಯ್ಯ

ಸೇಡಂ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಶ್ವೇತಪತ್ರ ಮಾತ್ರವಲ್ಲ, ಯಾವುದೇ ಪತ್ರ ಬೇಕಾದರೂ ಹೊರಡಿಸಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೇವಲ 40-50 ಕೋಟಿ ರೂ.ಗಳ ಅನುದಾನ ನಿಗಧಿ ಮಾಡುತ್ತಿದ್ದವರು ಈಗ ನಮ್ಮನ್ನು ಲೆಕ್ಕ ಕೇಳುತ್ತಿದ್ದಾರೆ. ಇಂತಹವರಿಗೆ ನಾಚಿಕೆ ಆಗಬೇಕು ಎಂದುಬಿಜೆಪಿ ವಿರುದ್ದ ಗುಡುಗಿದ್ದಾರೆ.

ತಮ್ಮ ರಾಜ್ಯ ಪ್ರವಾಸದ ನಾಲ್ಕನೇ ದಿನವಾದ ಇಂದು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು ಕಲಂ 371 ಜೆ ಜಾರಿಗೆ ತಂದವರು ನಾವೇ . ಹೀಗಿರುವಾಗ ಅಭಿವೃದ್ಧಿ ವಿಚಾರದಲ್ಲಿ ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ಲೆಕ್ಕ ಕೇಳುತ್ತಿರುವ ಬಿಜೆಪಿಯವರಿಗೆ ಕಿಂಚಿತ್ತೂ ಮಾನ, ಮರ್ಯಾದೆ ಇಲ್ಲ. ಇಷ್ಟಕ್ಕೂ ಉತ್ತರ ಕರ್ನಾಟಕದ ಅಭಿವೃದ್ದಿಗೆ ಬಿಜೆಪಿಯವರ ಕೊಡುಗೆಯಾದರೂ ಏನು ? ಎಂದು ಪ್ರಶ್ನಿಸಿದರು.
ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರದ ಬಿಜೆಪಿಯವರು ರೈತರ ವಿರೋಧಿಗಳು. ಯಾವುದೇ ಕಾರಣಕ್ಕೂ ರೈತರು ಆ ಪಕ್ಷಕ್ಕೆ ಮತ ಹಾಕಬಾರದು. ಮತ ಕೇಳುವ ನೈತಿಕ ಹಕ್ಕು ಸಹ ಬಿಜೆಪಿಯವರಿಗೆ ಇಲ್ಲ ಎಂದರು.


ಕಾಂಗ್ರೆಸ್ ಪಕ್ಷ ತ್ಯಾಗ ಮತ್ತು ಬಲಿದಾನ ಹಿನ್ನೆಲೆ ಇರುವ ಪಕ್ಷ. ಆದರೆ ಬಿಜೆಪಿಯವರು ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ. ಅದು ಅವರ ಭ್ರಮೆ ಮತ್ತು ಕನಸು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದವರು. ಪೂರ್ತಿ ಸತ್ಯ ಹೇಳುವುದು ಬೇಡ, ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನಾದರೂ ಜನರಿಗೆ ತಿಳಿಸಬೇಕಲ್ಲವೇ ? ಆದರೆ ಅವರು ಹೋದ ಕಡೆ ಬರೀ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಸತ್ಯದ ಪರಿಚಯವೇ ಇಲ್ಲ. ಹೀಗಾಗಿ ಬಿಜೆಪಿ ಎಂದರೆ ಬಂಡಲ್ ಪಾರ್ಟಿ ಎನ್ನುವಂತಾಗಿದೆ ಎಂದು ಟೀಕಿಸಿದರು.

ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟಿದ್ದೇ ಯಡಿಯೂರಪ್ಪ ಅವರ ಸಾಧನೆ. ತಮ್ಮ ಪ್ರಚಾರ ಭಾಷಣಗಳಲ್ಲಿ ಅವರು ಹೇಳುತ್ತಿರುವುದು ಆ ಒಂದನ್ನೇ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

 

Leave a Reply

Your email address will not be published.