ಇದು ನನ್ನ ಷರಾ : ಕಾವೂ ಕೊಟ್ಟೆ ಸಾವೂ ಕೊಟ್ಟೆ… ಯೋಗೇಶ್ ಮಾಸ್ಟರ್ ಕಾಲಂ….

ಸ್ನಾನ ಮುಗಿಸಿ ಬಂದಾಗ ಒಗೆದು ಮಡಿ ಮಾಡಿರುವ ಬಟ್ಟೆ ದೇಹವನ್ನು ಅಪ್ಪಿದಾಗ ಮೂಡುವ ಶುಭ್ರತೆಯ ಒಂದು ಹಿತವಾದ ಅನುಭವ. ಮಡಿ ಮತ್ತು ಮೈಲಿಗೆ ಎಂಬುದು ದೇಹಕ್ಕಿದೆ, ಮನಸ್ಸಿಗಿದೆ. ಹಾಗೆಯೇ ವಸ್ತುಗಳಿಗೂ ಇದೆ. ಒಲ್ಲದ, ಒಪ್ಪದ, ಒಗ್ಗದ ಯಾವುದೇ ಆದರೂ ಅಂಟಿಕೊಳ್ಳಲು ಅಲ್ಲೊಂದು ಭಾರ. ಅದನ್ನು ತೊಳಕೊಂಡರೆ, ಕಳಕೊಂಡರೆ, ಕಳಚಿಕೊಂಡರೆ ಹಗುರ. ಮಡಿಯಿಂದ ಹಗುರ. ಮೈಲಿಗೆಯಿಂದ ಭಾರ.

ಆಗಷ್ಟೇ ಸ್ನಾನ ಮುಗಿಸಿ ಮಡಿಯಾದ ನನ್ನ ದೇಹಕ್ಕೆ, ತಾನು ಹಿಂದಿನ ದಿನಗಳೆರಡರ ಮುಂಚೆಯೇ ಮೈ ತೊಳೆದುಕೊಂಡು ನನ್ನ ದೇಹವನ್ನು ಅಪ್ಪಲು ಮಡಿಯಾಗಿ ಮಡಿಸಿಕೊಂಡು ಕಾಯುತ್ತಿದ್ದ ಬನಿಯನ್ನಿನ ವಿರಹವನ್ನು ತೊಡೆಯಲು ಮೈಗೇರಿಸಿಕೊಂಡೆ. ಹಿತವಾದ ಮತ್ತು ಬೆಚ್ಚಗಿನ ಅನುಭವವದು. ಅದರ ಮೇಲೊಂದು ಮಡಿಯಂಗಿ. ಇನ್ನು ಕನ್ನಡಿಯ ಮುಂದೆ ನಿಂತು ಸ್ವರೂಪವನ್ನು ಸ್ವರತಿಯಿಂದ ಸ್ವಾಲಂಕರಿಸಿಕೊಳ್ಳುತ್ತಾ ಮಗ್ನನಾಗಿರುವ ಹೊತ್ತಿಗೇ ಅಂಗಿಯ ಕಾಲರಿನ ತುದಿಗೆ ಒಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ನಡೆಯುತ್ತಿರುವ ಪುಟಾಣಿ ಕೀಟ. ಬಟ್ಟೆಯ ಮೇಲೆ ಇಂತಹ ಗಾಢ ಕಾಫಿ ಬಣ್ಣದ ಕೀಟವನ್ನು ನೋಡಿದರೆ ಮೇಲ್ನೋಟಕ್ಕೆ ಸಿಗುವ ಚಿತ್ರ ತಿಗಣೆಯದ್ದೇ. ಗಾಬರಿಗೊಂಡು ಕೈಗೆತ್ತಿಕೊಂಡು ನೋಡಿದರೆ, ಸಧ್ಯ, ಅಲ್ಲ.

ನಾಯಿಯ ಮೇಲಿರುವ ಪಿಡದೆಯಂತೆ ಕಾಣುವುದಾದರೂ ಅದಲ್ಲ. ಅದರಂತೆಯೇ ದೇಹದ ಎರಡೂ ಬದಿಗಳಲ್ಲಿ ನಾಲ್ಕು ನಾಲ್ಕು ಕಾಲುಗಳಿವೆ. ಹೇನಂತೂ ಅಲ್ಲ. ಯಾವುದಾದರೇನು? ಎರಡೊ ಕೈಗಳ ಹೆಬ್ಬೆಟ್ಟಿನ ಉಗುರುಗಳು ಇಕ್ಕಳಿಸಿ ಹೇನನ್ನು ಕುಕ್ಕಿದಂತೆಯೇ ಅದನ್ನು ಚಚ್ಚಿಯಾಯಿತು. ಅಂಗಿಯ ಗುಂಡಿಯ ಮೇಲೆ ಮತ್ತೊಂದು. ಮೆಲ್ಲನೆ ಹಿಡಿದು ಅದು ಹಿಂದೆ ಹೋದದುರ ದಾರಿಯನ್ನೇ ತೋರಿಸಿಯಾಯಿತು. ಆದರೆ ಅಂಗಿಯ ಮೇಲೆ ಮತ್ತೆರಡು ಕಾಣಿಸಿಕೊಂಡವು. ಅಂದರೆ ಯಾವುದೋ ಇಂತಹ ಕೀಟಗಳು ಹತ್ತಿಕೊಂಡಿವೆ ಅಂತಾಯ್ತು. ಅಂಗಿಯನ್ನು ತೆಗೆದು ಕೊಡವಲು ಇನ್ನೂ ನಾಲ್ಕು ಕಾಣಿಸಿಕೊಂಡವು. ಅದೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಸರಿದಾಡುತ್ತಿರುವ ಪುಟಾಣಿ ಕೀಟಗಳು. ಎಲ್ಲವನ್ನೂ ಕೊಡವಿ ಕುಕ್ಕಿ ಕೊಲ್ಲಲಾಯಿತು. ಅಂಗಿಯನ್ನು ಅತ್ತ ಹಾಕಿ, ಕನ್ನಡಿಯ ಮುಂದೆ, ಒಳ್ಳೆಯ ಬೆಳಗಿನ ಬೆಳಕಿನಲ್ಲಿ ಮುಂಡ ಭಾಗವನ್ನು ಸರಿಯಾಗಿ ನೋಡಿಕೊಂಡೆ. ಇನ್ನೆಲ್ಲಾದರೂ ಈ ಕೀಟಗಳು ಕಂಡವೋ ಎಂದು. ದೇಹದ ಮೇಲೆ ಎಲ್ಲೂ ಕಾಣಲಿಲ್ಲ. ಹಾ, ಅಲ್ಲೊಂದು ಬನಿಯನ್ನಿನ ಪಟ್ಟಿಯ ಮೇಲೊಂದು ಕಂಡಿತು. ಕುಕ್ಕಲಾಯಿತು. ಎದೆಯ ಮೇಲ್ಭಾಗದ ಅಂಚಿನಲ್ಲೊಂದು ಕಂಡಿತು. ಮೆಲ್ಲನೆ ಅದನ್ನೂ ಅದರ ಬನಿಯನ್ ಮಾರ್ಗದಿಂದ ಬಿಡಿಸಿ ಹೆಬ್ಬೆರಳಿನುಗುರ ಗಲ್ಲುಗಂಭಕ್ಕೆ ಏರಿಸಲಾಯ್ತು.

ದೇಹವನ್ನು ಆಪ್ತತೆಯಿಂದ ಅಪ್ಪಿಕೊಂಡಿದ್ದ ಬನಿಯನ್ನನ್ನು ಎದೆಯ ಭಾಗದಿಂದ ಬಿಡಿಸಿಕೊಂಡು ಒಳಗಿಣಿಕಿ ಕಂಡರೆ, ಅಲ್ಲಿ ಸುಮಾರು ಹತ್ತರಿಂದ ಹದಿನೈದು ಅದೇ ಬಗೆಯ ಕೀಟಗಳು ಬರುತ್ತಿವೆ. ಅವುಗಳ ಪಾಲಿಗೆ ವಿಶಾಲವಾಗಿ ತೆರೆದುಕೊಂಡಿರುವ ಬನಿಯನ್ನಿನ ಬಯಲಿನಲ್ಲಿ. ಮುಕ್ತವಾಗಿ ಹಜ್ಜೆಗಳನ್ನು ಇಟ್ಟುಕೊಂಡು ಬರುತ್ತಿವೆ. ಬನಿಯನ್ನಿನ ಒಳಭಾಗಕ್ಕೆ ಅಂಟಿಕೊಂಡಿರುವ ಪುಟ್ಟಪುಟ್ಟ ತತ್ತಿಗಳ ಹುತ್ತ. ಅವೆಷ್ಟು ಹಗುರವಾಗಿವೆ ಮತ್ತು ಸಣ್ಣವಿವೆ ಎಂದರೆ ದೇಹವನ್ನು ಸ್ಪರ್ಷಿಸಿದ್ದರೂ ಅದರ ಮುಟ್ಟುವಿಕೆ ತಟ್ಟದೇ ಇರುವಷ್ಟು. ಕೂಡಲೇ ಬನಿಯನ್ನನ್ನೂ ಕೂಡ ತೆಗೆದು ಹೆಂಡತಿಗೆ ಕರೆದು ಹರವಿಕೊಂಡಿರುವಂತ ಮೊಟ್ಟೆಗಳನ್ನೂ ಮತ್ತು ಆಗಷ್ಟೇ ಮೊಟ್ಟೆಯೊಡೆದು ಬರುತ್ತಿರುವ ಎಲ್ಲಾ ಕೀಟಗಳನ್ನೂ ಕೊಲ್ಲಲು ಆಜ್ಞೆ ನೀಡಿ ಮೈ ಎಲ್ಲವನ್ನೂ ಮತ್ತೊಮ್ಮೆ, ಮಗದೊಮ್ಮೆ ಇನ್ನೆಲ್ಲಾದರೂ ಅವಿವೆಯೇ ಎಂದು ನೋಡಿ, ಇಲ್ಲವೆಂದು ಖಾತ್ರಿ ಪಡಿಸಿಕೊಂಡು ಮತ್ತೊಂದು ಬನಿಯನ್ನಿನ ಅಪ್ಪುಗೆಗೆ ಮೊರೆ ಹೋದೆ.

ಚಿಕ್ಕ ಮಗಳು ಹೆಬ್ಬೆರಳಿನುಗುರುಗಳ ಅಪ್ಪಚ್ಚಿಸುವಿಕೆಯಿಂದ ತಪ್ಪಿಸಿಕೊಂಡು ಗೆದ್ದು ಬಂದಿರುವ ಕೀಟವೊಂದನ್ನು ಕಂಡು ಹೇಳಿದಳು. “ಎಷ್ಟು ಕ್ಯೂಟಾಗಿದೆ. ಪುಟ್ಟ ಪುಟ್ಟ ಕಾಲುಗಳು, ಪುಟಪುಟ ಅಂತ ಓಡಾಡುತ್ತಿದೆ. ಅದೆಷ್ಟು ಪುಟಾಣಿ ಇದೆ? ಅಪ್ಪಾ, ಇದಕ್ಕೂ ನಮ್ಮ ಹಾಗೇ ಕಣ್ಣು, ಮೂಗು, ಮೆದುಳು, ಕಿಡ್ನಿ, ಹೃದಯ ಎಲ್ಲಾ ಇರತ್ತಾ?”

ಸೃಷ್ಟಿಯ ದೃಷ್ಟಿಯಲ್ಲಿ:

ಹೌದಲ್ಲಾ? ನಮ್ಮ ಹಾಗೇ ಅವಕ್ಕೆ ಕಣ್ಣು, ಮೂಗು, ಮೆದುಳು, ಕಿಡ್ನಿಗಳು ಇಲ್ಲದಿದ್ದರೂ, ನಮ್ಮ ಹಾಗೇ ಅವಕ್ಕೂ ಬದುಕಿದೆ. ಈ ಸೃಷ್ಟಿಯಲ್ಲಿ ಅವೂ ಹುಟ್ಟುತ್ತವೆ. ಅವೂ ಬಾಳುತ್ತವೆ. ಅವೂ ಸಾಯುತ್ತವೆ. ಈ ಸೃಷ್ಟಿಯ ದೃಷ್ಟಿಯಲ್ಲಿ ನನ್ನ ಹುಟ್ಟು ಮತ್ತು ಸಾವುಗಳ ನಡುವಿನ ಅವಧಿಯಾದ ಬದುಕು, ಈ ಕೀಟದ ಬದುಕಿಗಿಂತ ಯಾವ ರೀತಿಯಲ್ಲಿ ಶ್ರೇಷ್ಟ? ನನ್ನ ದೇಹದ ಮೇಲೆ ಅತಿಕ್ರಮಣ ಪ್ರವೇಶ ಮಾಡಿತೆಂದು ಈ ಮಾರಣ ಹೋಮವಾಯ್ತೇ? ನನ್ನ ಬನಿಯನ್ನಿನ ಕ್ಷೇತ್ರದಲ್ಲಿ ನನ್ನ ಅನುಮತಿಯಿಲ್ಲದೇ ಅಪರಿಚಿತ ಜೀವಿ ಮೊಟ್ಟೆಗಳನ್ನು ಇಟ್ಟದ್ದು ಈ ಕೀಟದ ಮರಿಗಳು ವಧೆಯಾಗಲೇ ಬೇಕಾದ ಶಿಕ್ಷೆಗೆ ಒಳಪಟ್ಟವೇ?

ಅಯ್ಯೋ, ಸೃಷ್ಟಿಯಲ್ಲಿ ಸೃಷ್ಟಿಯಾಗುವ ಭಾಗ್ಯ ಆ ಕೀಟಗಳಿಗಿತ್ತು. ಈ ಸೃಷ್ಟಿಯು ನನ್ನ ಬನಿಯನ್ನಿಗೆ ಸೃಷ್ಟಿ ಕಾರ್ಯಕ್ಕೆ ಕ್ಷೇತ್ರವಾಗಿ ಒದಗುವ ಅನುಗ್ರಹವನ್ನು ಮಾಡಿತ್ತು. ಪ್ರಕೃತಿಯಲ್ಲಿನ ಮಂಗಳಕರವಾದ ಆ ಜೀವೋತ್ಪತ್ತಿಯ ಕಾರ್ಯ ತನ್ನ ದೇಹದ ಮೇಲಾಗುವ ಅಪೂರ್ವ ಅವಕಾಶವಿತ್ತು. ನನ್ನ ದೇಹದ ಬೆಚ್ಚಗಿನ ಸ್ಪರ್ಷವು ತತ್ತಿಗಳಿಗೆ ಕಾವಾಗಿ ಜೀವಗಳು ಹುಟ್ಟಿ ಬಂದವು. ನಾನೇ ಕಾವು ಕೊಟ್ಟೆ, ನಾನೇ ಸಾವು ಕೊಟ್ಟೆ.

ಕಾವು ಕೊಟ್ಟವನೇ ಸಾವು ಕೊಡುವುದೆಂದರೆ ಅದೆಂತಹ ದ್ರೋಹ? ಜೀವ ವಿರೋಧಿಯ ನಡೆ!

ಜನ್ನ ಕವಿಯ ಯಶೋಧರನ ಕೇಳಲು ಅವನು ಸರಿಯಾಗಿ ಹೇಳುವನು. ಏಕೆಂದರೆ ಯಶೋಧರನ ಹೆಂಡತಿ ಅಮೃತಮತಿ ಗಜಶಾಲೆಯಲ್ಲಿ ಸಂಗೀತದಿಂದ ಮರಳು ಮಾಡಿದ ಅಷ್ಟಾವಂಕನಿಗೆ ಮರುಳಾಗಿ ಗಂಡನ ಮಗ್ಗುಲ ತೊರೆದಳು. ವಿಷಯ ತಿಳಿದು ನೊಂದ ರಾಜ ಯಶೋಧರ ರಾತ್ರಿ ದುಃಸ್ವಪ್ನದಿಂದ ಸುಖ ನಿದ್ರೆಗಳ ಗಳಿಗೆಗಳನ್ನು ಕಳೆದುಕೊಂಡಾಗ ಅವನ ತಾಯಿ ದೇವಿಗೆ ಒಂದು ಪ್ರಾಣಿಬಲಿ ಕೊಡಲು ಹೇಳುತ್ತಾಳೆ. “ವಧೆ ಹಿತವಲ್ಲ. ಜೀವದಯೆ ಜೈನಧರ್ಮ” ಎಂದು ತನ್ನ ಧರ್ಮದ ಮಾರ್ಗವನ್ನು ಬಿಡಲು ಯಶೋಧರ ಸಿದ್ಧನಿಲ್ಲ. ಆದರೂ ತಾಯಿ ಬಿಡಲೊಲ್ಲಳು. ನಿಜವಾದ ಪ್ರಾಣಿಯಲ್ಲದಿದ್ದರೂ ಹಿಟ್ಟಿನ ಕೋಳಿಯನ್ನಾದರೂ ಬಲಿಗೊಡಲು ಹಟ ಹಿಡಿದಳು. ಸುಂದರವಾದ ಹಿಟ್ಟಿನ ಕೋಳಿ ತಯಾರಾಯಿತು. ಅದರ ಸೌಂದರ್ಯವನ್ನು ಕಂಡ ಯಾವುದೋ ಚೈತನ್ಯ ಅದರಲ್ಲಿ ಸೇರಿತು. ಹಿಟ್ಟಿನ ಕೋಳಿಯನ್ನು ಕಡಿದಾಗ ಅದು ಕೊಕ್ಕೊಕ್ಕೋ ಎಂದು ವಿಕಾರವಾಗಿ ಕೂಗುತ್ತಾ ಕೆಳಗೆ ಬಿತ್ತು.

ಈ ಸಂಕಲ್ಪ ಹಿಂಸೆಯನ್ನು ಮಾಡಿದ ತಾಯಿ ಮತ್ತು ಮಗ ಮುಂದೆ ಜನ್ಮಾಂತರಗಳನ್ನು ಎತ್ತಿದ ಕತೆ ನನಗೀಗ ಬೇಡ. ಆದರೆ ಮನಸ್ಸಿನಲ್ಲಿ ಮೂಡಿದ ಸಂಕಲ್ಪವೂ ಸೂಕ್ಷ್ಮ ಹಿಂಸೆಯಾಗಿದ್ದು ಸ್ಥೂಲ ಹಿಂಸೆಗಿಂತ ಯಾವ ರೀತಿಯಲ್ಲಿ ಕ್ಷಮ್ಯವೋ ನಾ ಕಾಣೆ.

ಮನುಷ್ಯನ ಕೊಂದರೆ ಅದು ಕೊಲೆ, ಪ್ರಾಣಿಯನ್ನು ಕೊಂದರೆ ಅದು ಕೊಲೆಯಲ್ಲ ಎಂದು ಸೃಷ್ಟಿಯ ಯಾವ ಪ್ರತಿನಿಧಿ ಹೇಳಿದ್ದು? ಮನುಷ್ಯನ ಪ್ರತಿನಿಧಿ ನಿರ್ಣಯಾಧಿಕಾರಿಯೇ? ಸೃಷ್ಟಿಯ ದೃಷ್ಟಿಯಲ್ಲಿ ಈ ಪ್ರಕೃತಿಯಲ್ಲಿ ಮನುಷ್ಯ ಯಾವ ರೀತಿಯಲ್ಲಿ ಶ್ರೇಷ್ಟ?

ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಚೆಗೆ,

ಒಲ್ಲೆನಯ್ಯ ಪರಸತಿಯರ ಸಂಗವ,

ಬಲ್ಲೆನಯ್ಯ ಮುಂದೆ ಕೆಡಕುಂಟೆಂಬುದ.

ಬಳ್ಳದ ಬಾಯಂತೆ ಒಂದೇ ಮನವ ಮಾಡಿ,

ನಿಲ್ಲೆಂದು ನಿಲಿಸಯ್ಯ ಕೂಡಲಸಂಗಮ ದೇವಾ ಎಂದು ಬಸವಣ್ಣ ನನ್ನ ಕಿವಿಗಳಲ್ಲಿ ಉಸುರುತ್ತಿದ್ದಾನೆ.

ಹಿಂಸೆಯ ಸೂಕ್ಷ್ಮತೆಯು ಮನಸ್ಸಿನಂತರಾಳದಲ್ಲಿಯಾದರೂ ಉಳಿಯದಿರುವಂತೆ ದಾರಿ ತೋರಲು ಯತ್ನಿಸಿದ ಜನ್ನನ ಯಶೋಧರ ಚರಿತ್ರೆ ಕಾವುಕೊಟ್ಟು ಸಾವುಕೊಟ್ಟವನ ನಿಜ ಚಾರಿತ್ರ್ಯವನ್ನು ಪ್ರಶ್ನಿಸುತ್ತಿದೆ. ದಯವೇ ಧರ್ಮದ ಮೂಲ ಎನ್ನುತ್ತಾ ನನ್ನಂತೆಯೇ ಇರುವ ಮನುಷ್ಯರ ಕೊಲೆಗಳನ್ನು ಪ್ರಶ್ನಿಸುವ, ಖಂಡಿಸುವ ನನ್ನ ಯಶೋಧರ ಚರಿತೆಯು ಕೇಳಿದ್ದು ನೀನು ಮನುಷ್ಯರ ಪ್ರತಿನಿಧಿ ಮಾತ್ರವೇನು? ಜೀವನ್ಮುಖಿ, ಜೀವಪರ ಎನ್ನುವ ನೀನು ಸೃಷ್ಟಿಯಲ್ಲಿ ಎಲ್ಲಾ ಜೀವಗಳ ಕಡೆಗೆ ಕಣ್ಣಾಡಿಸದಷ್ಟು ಸಂಕುಚಿತ ದೃಷ್ಟಿಯವನೇಕಾದೆ ಎಂದು ಕೇಳುತ್ತಿದೆ.

ಕೊನೆಗೊಂದು ಷರಾ:

ಹಿಂಸೆಯೆಂಬುದು ಬರಿದೇ ಭೌತಿಕವಲ್ಲ. ಕೊಂದರೆ ಮಾತ್ರವೇ ಕೊಲೆಯಲ್ಲ. ಸುಪಾರಿ ಕೊಟ್ಟವನೆಂದರೆ ಹತ್ಯೆಗೆ ಸಂಚು ಮಾಡಿದ್ದವನು ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಕೊಂದುಬಿಡುವಷ್ಟು ಕೋಪ ಬಂತು ಆದರೆ ಕೊಲ್ಲಲಿಲ್ಲವೆಂದರೆ ಅವನು ಅಪರಾಧಿಯಾಗಲಿಲ್ಲ ಎಂದಲ್ಲ ಅರ್ಥ. ನನ್ನಲ್ಲಿ ಮೂಡುವ ಅಪರಾಧ ಪ್ರಜ್ಞೆಗೆ ಶಿಕ್ಷೆ ಸಿಗದಿರಬಹುದು. ಏಕೆಂದರೆ ಭೌತಿಕ ಸಾಕ್ಷ್ಯಗಳು ಕೊರತೆಯಾಗಿ ಕಾಪಾಡುತ್ತದೆ. ಆದರೆ ಅಂತರಂಗದಲ್ಲಿ ಉಳಿದಿರುವ ಅಪರಾಧ ಪ್ರಜ್ಞೆಯು ಕೆಲಸದ ಮಧ್ಯೆ ಮರೆತುಹೋಗಬಹುದು. ಆದರೆ ಮನಸ್ಸು ಎಂದಿಗೂ ಮಡಿಯಾಗದು.

7 thoughts on “ಇದು ನನ್ನ ಷರಾ : ಕಾವೂ ಕೊಟ್ಟೆ ಸಾವೂ ಕೊಟ್ಟೆ… ಯೋಗೇಶ್ ಮಾಸ್ಟರ್ ಕಾಲಂ….

Leave a Reply

Your email address will not be published.