ಪ್ರೇಮ ವೈಫಲ್ಯ : ಕೊನೆ ಆಸೆ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಗೌರಿ ಬಿದನೂರಿನ ಪೆದ್ದನಹಳ್ಳಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಗಾನವಿ (16) ಹಾಗೂ ಗಿರೀಶ್ (18) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ತಮ್ಮ ಕೊನೆಯ ಆಸೆಯನ್ನು ಬರೆದಿಟ್ಟಿದ್ದು, ಇಬ್ಬರನ್ನು ಒಂದೇ ಗುಂಡಿಯಲ್ಲಿ ಮುಚ್ಚಿ. ನಮ್ಮ ದೇಹಗಳನ್ನು ಪೋಸ್ಟ್ ಮಾರ್ಟಮ್‌ಗೆ ನೀಡಬೇಡಿ ಎಂದು ಪತ್ರದಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಾನವಿ 10ನೇ ತರಗತಿಯಲ್ಲಿ ಓದುತ್ತಿದ್ದು, ಗಿರೀಶ್ ನ್ಯಾಷನಲ್‌ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ಇಂದು ಬೆಳಗ್ಗೆ ಮನೆಯಿಂದ ಶಾಲೆಗೆ ಹೋದ ಇಬ್ಬರೂ ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರದ ಬುಡದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಾಲಕಿ ಶಾಲಾ ಬ್ಯಾಗ್‌ ಸಹ ಪತ್ತೆಯಾಗಿದೆ.

ಗಿರೀಶ್‌ ಹಾಗೂ ಗಾನವಿ ಇಬ್ಬರ ಮನೆಯಲ್ಲೂ ಪ್ರೀತಿ ವಿಚಾರ ಗೊತ್ತಾಗಿದೆ. ಇದಕ್ಕೆ ಎರಡೂ ಮನೆಯವರು ಒಪ್ಪದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಗೌರಿ ಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

 

Leave a Reply

Your email address will not be published.