ದಡ್ಡರಿಗೆ ಮಾತ್ರ ಇದು ಅಪ್ಪಟ ಹೊಳೆವ ಮುತ್ತು… : ರವಿ ಬೆಳಗೆರೆ ಕುರಿತು….

ಚಂದ್ರಶೇಖರ್‌ ಅವರ ಫೇಸ್‌ಬುಕ್‌ವಾಲ್‌ನಿಂದ

ಇವತ್ತು ಹಿರಿಯರಾದ ಅಶೋಕ್ ಶೆಟ್ಟರ್ ಮತ್ತು ನಾನು ಬಹುವಾಗಿ ಗೌರವಿಸುವ ಜಗದೀಶ್ ಕೊಪ್ಪ ಅವರ ಬರಹಗಳನ್ನು ಓದಿ, ಇನ್ನೂ ಸುಮ್ಮನಿರುವುದು ಕೂಡ ಅಪರಾಧ ಅನ್ನಿಸಿ ಈ ಟಿಪ್ಪಣಿ ಬರೆಯುತ್ತಿರುವೆ:

ಕ್ರಿಮಿನಲ್ ಲಾ, ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಸೈಕಾಲಜಿಗಳಲ್ಲಿ ‘Juvenile Delinquency’ ಎಂಬೆರಡು ಪದಗಳು ಬರುತ್ತವೆ; ಇದರರ್ಥ ‘ಬಾಲಾಪರಾಧ’ ಅಂತ. 1995ರಿಂದ 2001ರವರೆಗೆ ನಾನು ಕೂಡ ‘ಹಾಯ್ ಬೆಂಗಳೂರ್!’ ಎಂಬ ಕರಿಬಿಳಿ ಪತ್ರಿಕೆಯನ್ನು ಗಂಭೀರವಾಗಿ ಓದುತ್ತಿದ್ದೆ ಎಂಬುದನ್ನು ನಾನು ಎಸಗಿದ ‘Juvenile Delinquency’ ಎಂದೇ ಕರೆದುಕೊಳ್ಳುತ್ತೇನೆ.

ಲಂಕೇಶರನ್ನು ಓದುವ ಮುನ್ನ, ಲಂಕೇಶರು ನನಗೆ ದಕ್ಕುವ ಮುನ್ನ ಸದರಿ ಕರಿಬಿಳಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಆ ಪತ್ರಿಕೆಯ ಸಂಪಾದಕ, ಜಯಂತ ಕಾಯ್ಕಿಣಿ, ಜೋಗಿ, ಗಣೇಶ್ ಕಾಸರಗೋಡು… ಮೊದಲಾದವರನ್ನು ತೀವ್ರವಾಗಿ ಓದಿಕೊಂಡಿದ್ದೆ.

ಲಂಕೇಶರ ಮೇಲಿನ ಸಿಟ್ಟಿಗೆ ತೇಜಸ್ವಿ ಕೆಲಕಾಲ ಈ ಕರಿಬಿಳಿ ಪತ್ರಿಕೆಯಲ್ಲೂ ಬರೆದರು. ತೇಜಸ್ವಿಯವರ ಮೊದಲ ದರ್ಶನ ನನಗಾದದ್ದು ಇಲ್ಲೇ. ಅವರ ‘ಮುನಿಸಾಮಿ ಮತ್ತು ಮಾಗಡಿ ಚಿರತೆ’ ಅನೇಕ ಕಂತುಗಳಲ್ಲಿ ಸದರಿ ವಾರಪತ್ರಿಕೆಯಲ್ಲಿ ಪ್ರಕಟವಾಯಿತು.

1996ರಿಂದ 2001ರವರೆಗೆ ಕನ್ನಡದ ಯುವ ಮನಸ್ಸುಗಳನ್ನು ಉಪೇಂದ್ರ ಮತ್ತು ರವಿ ಬೆಳಗೆರೆ ತಮ್ಮ ವಿಕೃತ ಪ್ರತಿಭೆಯಿಂದಲೇ ಆವರಿಸಿಕೊಂಡ ಕಾಲಘಟ್ಟ ಅದು. ಇವತ್ತು ಗೋಡ್ಸೆಗೆ, ಹಿಟ್ಲರ್’ಗೆ, ರೇಪಿಸ್ಟ್ ಹೋರಿ ಸ್ವಾಮಿಗೆ ಭಕ್ತರಿರುವಂತೆ ಈ ವಿಕೃತ ಪ್ರತಿಭೆಗಳಿಗೂ ಭಕ್ತರಿದ್ದರು. ಅದರಲ್ಲೂ ಹೆಣ್ಣುಭಕ್ತರು.

ಇಸವಿ 2001ರಲ್ಲಿ ‘ಗುಣಮುಖ’ ನಾಟಕದ ಮೂಲಕ ನನ್ನ ಬದುಕಿನೊಳಕ್ಕೆ ಲಂಕೇಶರ ಪ್ರವೇಶವಾಯಿತು. ಲಂಕೇಶರನ್ನು ನಾನು ತೀವ್ರವಾಗಿ ಓದಲು ಶುರುಮಾಡುತ್ತಿದ್ದಂತೆ ರವಿ ಬೆಳಗೆರೆ, ಜಯಂತ ಕಾಯ್ಕಿಣಿ, ಜೋಗಿ, ಗಣೇಶ್ ಕಾಸರಗೋಡು… ಮೊದಲಾದವರ ಬರಹಗಳು ತೀರಾ ಟೊಳ್ಳು ಮತ್ತು ಪೊಳ್ಳು ಅನ್ನಿಸತೊಡಗಿದವು. ಇವತ್ತಿಗೂ ಈ ಜೋಗಿ, ಗಣೇಶ್ ಕಾಸರಗೋಡು ತರಹದವರು ತಮ್ಮ ಮೂರನೇ ದರ್ಜೆ ಬರಹಗಳಿಂದಲೇ ಖ್ಯಾತಗೊಂಡವರು. ಇವರ ಬರವಣಿಗೆ ಸುಧಾರಿಸಿ ಒಂದಿಷ್ಟು ಮೇಲ್ದರ್ಜೆ ಸಾಹಿತ್ಯವನ್ನು ಕನ್ನಡಿಗರಿಗೆ ಇವರು ಕೊಡಬಲ್ಲರು ಎಂದು ನನಗೆ ಯಾವತ್ತೂ ಅನ್ನಿಸಿದ್ದಿಲ್ಲ.

ಮುಂದೆ ಲಂಕೇಶರೊಂದಿಗೆ ತೇಜಸ್ವಿ, ಅನಂತಮೂರ್ತಿ, ನಟರಾಜ್ ಹುಳಿಯಾರ್, ಮೊಗಳ್ಳಿ ಗಣೇಶ್, ಎನ್.ಎಸ್.ಶಂಕರ್, ಬಂಜಗೆರೆ ಜಯಪ್ರಕಾಶ್, ದಿನೇಶ್ ಅಮಿನ್ ಮಟ್ಟು, ಕೇಶವ ಮಳಗಿ… ಇವೇ ಮೊದಲಾದ ಲೇಖಕರ ಸಮಗ್ರ ಬರಹಗಳಿಗೆ ನಾನು ತೆತ್ತುಕೊಂಡೆ. ಬಹುಶಃ ಕನ್ನಡದ ಈ ಲೇಖಕರು ನನ್ನೊಳಕ್ಕೆ ಇಳಿಯದೇ ಇರುತ್ತಿದ್ದರೇ ಇವತ್ತು ಹಿರಿಯರಾದ ಅಶೋಕ್ ಶೆಟ್ಟರ್ ಮತ್ತು ಜಗದೀಶ್ ಕೊಪ್ಪ ಅವರು ಬರೆದಂತೆ ಆತ್ಮಮರುಕದ ಧಾಟಿಯಲ್ಲಿ ಪೇಲವವಾಗಿ ಮತ್ತು ನಿರ್ಜೀವವಾಗಿ ನಾನು ಬರೆಯುತ್ತಿದ್ದೇನೇನೋ.

ನಾಳೆ ಜೈಲಿನಿಂದ ಹೊರಬಂದು ಉಮೇಶ್ ರೆಡ್ಡಿ “ಸಾರ್ ಇದು ನಾನು ಜೈಲಿನಲ್ಲಿ ಕೂತು ಬರೆದ ಪ್ರೇಮಗವನಗಳು ನಿಮ್ಮದೊಂದು ಮುನ್ನುಡಿ ಬೇಕಿತ್ತು” ಎಂದೋ, ದಂಡುಪಾಳ್ಯದ ಕೊಲೆಗಡುಕರು “ಸಾರ್ ಇವು ನಾವೆಸಗಿದ 75 ಸಾಹಸ ಕಥನಗಳು, ಇದಕ್ಕೆ ನಿಮ್ಮದೊಂದು ಪ್ರಸ್ತಾವನೆ ಬೇಕಿತ್ತು” ಎಂದೋ ಇದೇ ಅಶೋಕ್ ಶೆಟ್ಟರ್, ಜಗದೀಶ ಕೊಪ್ಪ… ಮೊದಲಾದವರನ್ನು ಕೇಳಿಕೊಂಡರೇ ಇವರಿಂದೆಲ್ಲ ಏನು ಉತ್ತರ ಬರಬಹುದು? ಕುತೂಹಲ ನನ್ನದು.

ಚಿತ್ರನಟಿ ರಾಧಿಕಾ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಗುಪ್ತವಾಗಿ ವರಿಸಿ, ಸಂಸಾರ ಮಾಡಿಕೊಂಡು ಕಡೆಗೆ ಇವರಿಬ್ಬರಿಗೂ ಒಂದು ಹೆಣ್ಣುಮಗುವಾದಾಗ ಇದೇ ಕರಿಬಿಳಿ ಪತ್ರಿಕೆ ತನ್ನ ಮುಖಪುಟದಲ್ಲಿ ಕೊಟ್ಟ ಟೈಟಲ್ ಏನು ಗೊತ್ತೇ? ‘ರಾಧಿಕಾ ಮರಿ ಹಾಕಿದ ಸುದ್ದಿ ಬಂತು!’. ಈ ಕರಿಬಿಳಿ ಪತ್ರಿಕೆಯ ಸಂಪಾದಕ ತನ್ನ ಪ್ರತಿವರ್ಷದ ಅಫಿಡವಿಟ್’ನಲ್ಲಿ ‘ದೊರೆ, ಮೊದಲ ಹೆಂಡತಿ ಜೀವಂತವಾಗಿದ್ದಾಗ್ಯೂ ಇನ್ನೊಂದು ಮದುವೆಯಾಗಿದ್ದೇನೆ, ಆ ಎರಡನೆಯದಕ್ಕು ಒಂದು ಮರಿಹಾಕಿದ್ದೇನೆ. ಹಾರೈಸು ನನ್ನ ದೊರೆ!’ ಎಂದು ಬರೆದುಕೊಂಡದ್ದಂತೂ ನಾನು ಕಾಣೆ.

ಬದುಕೇ ಬೇರೆ ಬರವಣಿಗೆಯೇ ಬೇರೆ ಎಂದುಕೊಂಡ ದಡ್ಡರಿಗೆ ಮಾತ್ರ ಈ ರವಿ ಬೆಳಗೆರೆ ಅಪ್ಪಟ್ಟ ಹೊಳೆವ ಮುತ್ತಿನಂತೆ ಕಾಣಬಹುದು. ಇವತ್ತು ಇದೇ ಅಶೋಕ ಶೆಟ್ಟರ್ ಮತ್ತು ಜಗದೀಶ ಕೊಪ್ಪ ತರಹದ ಹಿರಿಯರು ಈ ಹೊಳೆವ ಮುತ್ತಿಗೆ ಅಂಟಿಕೊಂಡಿರುವ ಮಸಿಯನ್ನು ತಮ್ಮ ಒಳಉಡುಪು ತೆಗೆದು ಶುಚಿಗೊಳಿಸುತ್ತಿರುವಂತೆ ನನಗೆ ಕಾಣುತ್ತಿದೆ.

ವಿಜಯ ಸಂಕೇಶ್ವರ! ಆಹಾ… ಈ ಹೆಸರನ್ನು ಯಾರಾದರೂ ಮರೆಯಲುಂಟೇ. ಕನ್ನಡ ಪತ್ರಿಕೋದ್ಯಮ ಈ ಪರಿ ಗಬ್ಬೆದ್ದು ಹೋಗಿದ್ದೇ ಇವರು ಪತ್ರಿಕೆಗಳ ಹೆಸರಿನಲ್ಲಿ ಹೂಡಿದ ಬಂಡವಾಳದಿಂದ. ಇವರ ದುಡ್ಡು ಕನ್ನಡದ ಪತ್ರಕರ್ತನಿಗೆ ಸಂಕೋಚ, ಮೌನ, ಲಜ್ಜೆಗಳಿಂದ ದೂರವೇ ಉಳಿಯುವಂತೆ ಮಾಡಿತು. ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ… ಮೊದಲಾದವರು ಪೆನ್ನನ್ನು ‘ಮೂತ್ರ ಹುಯ್ಯುವ ಶಿಶ್ನದಂತೆ’ (ಈ ಮೆಟಫರ್ ಬಂಜಗೆರೆ ಜಯಪ್ರಕಾಶರದು) ಬಳಸತೊಡಗಿದರು. ಕಲಿಸುವ ಕಲಿಯುವ ಸುದ್ದಿಕೊಡುವ ಪತ್ರಿಕೋದ್ಯಮ ಇವತ್ತು ಸುಲಭವಾಗಿ ದುಡ್ಡು ಮಾಡುವ, ಯಾರನ್ನಾದರೂ ಬ್ಲಾಕ್ ಮೇಲ್ ಮಾಡುವ, ರೋಲ್ಕಾಲ್ ಮಾಡುವ, ವಂಚಿಸುವ, ಕೊಲೆ ಮಾಡಿಸುವ, ಕೊಂದು ದಕ್ಕಿಸಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ಇದು ಇವತ್ತಿನ ಕನ್ನಡ ಪತ್ರಿಕೋದ್ಯಮ.

ಇವತ್ತು ಕನ್ನಡದ ಟ್ಯಾಬ್ಲಾಯ್ಡ್’ಗಳಲ್ಲಿ ಕೆಲಸ ಮಾಡುವ ನನ್ನ ಗೆಳೆಯರನ್ನು ಆಗೀಗಾ ಭೇಟಿ ಮಾಡಲೋ, ಫೋನ್ ಮಾಡಲೋ ನನಗೆ ಅಳುಕುಂಟುಗಾತ್ತದೆ. ಇದು ಕನ್ನಡ ಪತ್ರಿಕೋದ್ಯಮ ತಲುಪಿರುವ ರಸಾತಳ.

ಈ ಲೇಖನ ಮುಗಿಸುವ ಮುನ್ನ, 2010ರಲ್ಲಿ ಗೆಳೆಯ ಮಂಜುನಾಥ್ ಲತಾ ‘ತಿಂಗಳು’ ಪತ್ರಿಕೆಗೆ ಬರೆದ ಲಂಕೇಶರ ಕುರಿತ ಲೇಖನವೊಂದು ಬಿಟ್ಟೂಬಿಡದೆ ನೆನಪಾಗುತ್ತಿದೆ. ಆ ಲೇಖನದ ಆಯ್ದ ಭಾಗವೊಂದು ನನ್ನ ಈ ಲೇಖನಕ್ಕೆ ಸರಿಯಾಗಿ ಹೊಂದಿಕೊಳ್ಳಬಹುದು ಎಂದು ಊಹಿಸಿ ಇಲ್ಲಿ ಕೊಡುತ್ತಿದ್ದೇನೆ, ದಯವಿಟ್ಟು ಓದಿರಿ:

‘ಲಂಕೇಶ್ ಪತ್ರಿಕೆ’ಎಂದರೆ ಅದೊಂದು ಧೈರ್ಯವಂತನಾದ, ನಿಜವಾದ ಮನುಷ್ಯನ ಮಾತು ಎಂದೆಲ್ಲ ನನಗೆ ಅನ್ನಿಸಿದ್ದ ದಿನಗಳಲ್ಲಿ ಅದನ್ನೇ ನನ್ನ ಡಿಗ್ರಿ ಮೊದಲ ವರ್ಷದ ಸ್ನೇಹಿತರಿಗೆಲ್ಲ ಹೇಳಿಕೊಂಡು ಅವರೆಲ್ಲ ಬೆಚ್ಚುತ್ತಾರೇನೋ ಎಂದು ಅವರ ಮುಖ ನೋಡುತ್ತಿದ್ದೆ.

ನಿಜವೇನೆಂದರೆ; ನಾನು ಲಂಕೇಶರನ್ನು ಕೊನೆಯವರೆಗೂ ಖುದ್ದಾಗಿ ನೋಡಲಾಗಲೇ ಇಲ್ಲ. ನಾನು ಸ್ನೇಹಿತರೊಂದಿಗೆ ‘ಅವರು ಭಾಷಣ ಮಾಡೋದನ್ನ ನೀನು ಕೇಳಬೇಕು… ಹೆಂಗೆ ಅಂದ್ರೆ ಗುಂಡು ಹೊಡೆದಂಗೆ…!’ ಎಂದು ಹೇಳಿದ್ದೆಲ್ಲ ಎಷ್ಟು ಹಸಿ ಸುಳ್ಳು ಎನ್ನುವುದು ಗೊತ್ತಾಗಿದ್ದು ಅವರು ಅಂತಹ ಭಾಷಣಕಾರರಲ್ಲ ಎಂಬುದನ್ನೆಲ್ಲ ಓದಿದ ನಂತರವೇ!

ಹೆಚ್ಚು ಕಡಿಮೆ ಅದೇ ಹೊತ್ತಿನಲ್ಲಿ ನಾನು ತೀವ್ರವಾಗಿ ಹಚ್ಚಿಕೊಂಡ ಮತ್ತೊಬ್ಬ ಸಂಪಾದಕ ಕೂಡ ನನ್ನ ಪ್ರೀತಿಯ ‘ಕಲರ್ಫುಲ್’ ಲಂಕೇಶರನ್ನು ಮೀರಿಸಲು ಕೊನೆಗೂ ಸಾಧ್ಯವಾಗಲಿಲ್ಲ. ಆ ‘ಪಾಪಿಗಳ ಲೋಕ’ದ ಸಂಪಾದಕ ಕೂಡ ಈ ಲಂಕೇಶನಿಂದಲೇ ಎಲ್ಲವನ್ನೂ ಕಲಿತುಕೊಂಡವನಂತೆ ತನ್ನ ವರಸೆಗಳನ್ನು ಮಂಡಿಸತೊಡಗಿದಾಗ ನಾನು ಅತ್ತ ಆಕರ್ಷಿತನಾಗಿದ್ದೆ. ಅದು ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ ನಾನು ನನ್ನ ಡೈರಿಯಲ್ಲಿ ‘ಯಾರು ನನ್ನ ಮೊದಲ ಆಯ್ಕೆ, ಯಾರು ನನ್ನ ನಿಜವಾದ ನಾಯಕ?’ ಎಂದು ಅವರಿಬ್ಬರೂ ನನ್ನನ್ನು ಕಾಡಿದ ಕ್ಷಣಗಳನ್ನೆಲ್ಲ ನನ್ನ ಹದಿಹರೆಯದ ತಲ್ಲಣ, ಸಂಕಟದಲ್ಲಿ ಬರೆದುಕೊಂಡಿದ್ದೆ. ಆದರೆ ಆ ಇನ್ನೊಬ್ಬ ಸಂಪಾದಕನ ಬಣ್ಣ ಕೆಲವೇ ದಿನಗಳಲ್ಲಿ ತನ್ನ ‘ಶೇಪು’ ಕಳೆದುಕೊಂಡು ಅವನ ಪತ್ರಿಕೆಯ ಹಾಗೆಯೇ ಕೇವಲ ‘ಬ್ಲ್ಯಾಕ್ ಅಂಡ್ ವ್ಹೈಟ್’ಮಾತ್ರವಾಗಿ ಕಾಣತೊಡಗಿತ್ತು. ಆತ ‘ಪಾಪಿಗಳ ಲೋಕದ ಪಾಲುದಾರ’ನಂತೆ ಕಾಣುತ್ತಿದ್ದರೆ ಲಂಕೇಶರು ಎಂದಿನಂತೆ ನನ್ನ ಮುಂದೆ ‘ವರ್ಣರಂಜಿತ’ ಮನುಷ್ಯನಾಗಿ ನಿಂತಿದ್ದರು; ಅವರ ಪತ್ರಿಕೆ ಕೂಡ!

Leave a Reply

Your email address will not be published.