ರಾಜಕಾರಣಿಗಳು ಹಾಲಿನಂತ ಜನರ ಮನಸ್ಸನ್ನು ಮಜ್ಜಿಗೆ ಮಾಡಿ, ಪನ್ನೀರ್ ಮಾಡಿ ಪ್ರಿಡ್ಜ್ನಲ್ಲಿಟ್ಟಿದ್ದಾರೆ : ಉಪೇಂದ್ರ
ಬೆಳಗಾವಿ : ವಿಧಾನಸೌಧದಿಂದ ಸುವರ್ಣಸೌಧಕ್ಕೆ ಯಾತ್ರೆ ಮುಕ್ತಾಯವಾಗುತ್ತಿದೆ. ಪ್ರಜಾಕಾರಣ ಪ್ರಜೆಗಳ ರಾಜಕಾರಣ ಆಗಬೇಕೆಂದು ಚಿತ್ರನಟ ಉಪೇಂದ್ರ ಹೇಳಿದ್ದಾರೆ. ಇಂದು ಬೆಳಗಾವಿ ಮಿಲನ್ ಹೊಟಲ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕಾರಣ ನಮ್ಮೆಲ್ಲರ ಮನಸ್ಸಿನಲ್ಲಿದೆ. ಹಣ, ಜಾತಿ ವ್ಯವಸ್ಥೆಯ ಒಡೆದಾಳುವ ನೀತಿಯನ್ನು ನಾವು ನೋಡುತ್ತಿದ್ದೇವೆ. ಹಾಲಿನಂತಹ ಮನಸ್ಸಿನ ಜನರನ್ನು, ಇಂದು ಮಜ್ಜಿಗೆ ಮಾಡಿ, ಆ ನಂತರ ಪನ್ನೀರ ಮಾಡಿ ಕೊನೆಗೆ ರಾಜಕಾರಣಿಗಳು ಫ್ರಿಜ್ ನಲ್ಲಿ ಜನರನ್ನು ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ ಸೂಕ್ಷ್ಮ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ ಎಂದಿರುವ ಉಪೇಂದ್ರ, ರಾಜ್ಯದ 226 ಸ್ಥಾನಗಳಿಗೆ ಶ್ರೀ ಸಾಮಾನ್ಯ ಜನ ಚುನಾವಣೆಗೆ ನಿಲ್ಲಲು ನಾವು ವೇದಿಕೆ ಮಾಡಿಕೊಡುತ್ತೇವೆ. ಬರೀ 20% ಜನರ ಬಳಿ ಮಾತ್ರ ಇಂದು ಅಧಿಕಾರ, ದುಡ್ಡು ಇದೆ. ಅದು ಉಳಿದ 80% ಶ್ರೀ ಸಾಮಾನ್ಯ ಜನರಿಗೆ ಹಂಚಬೇಕು. ಎಲ್ಲರಿಗೂ ಅಧಿಕಾರ, ಹಣ, ಅಂತಸ್ತು ಬರಬೇಕು. ರಾಜಕಾರಣ ಖಂಡಿತವಾಗಿ ಬಿಸಿನೆಸ್ ಆಗಬಾರದು. ಆದರೆ ಬಿಸಿನೆಸ್ ಆಗಿದೆ. ಹಿಂದೆ ರಾಜರು ಇದ್ದರು, ಹೋದರು, ಅವರ ಜಾಗಕ್ಕೆ ರಾಜಕಾರಣಿಗಳು ಬಂದರು. ರಾಜಕಾರಣಿಗಳು ಬರೀ ರಾಜರಾಗಿ ಮೆರೆಯುತ್ತಿದ್ದಾರೆ ಎಂದು ಖೇದ ವ್ಯಕ್ತತಪಡಿಸಿದರು.
ಜನರ ಬಳಿಯೂ ಸಾಕಷ್ಟು ಉತ್ತಮ ಯೋಜನೆ, ಯೋಚನೆ ಅಭಿರುಚಿಗಳು ಇವೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ರಾಜ್ಯದ ಪ್ರತಿಕ್ಷೇತ್ರದಿಂದ ಬರುವ ಪ್ರಮಾಣಿಕ ಮತ್ತು ಸೂಕ್ತ ಯೋಜನೆ ಹೊಂದಿದ ಅಭ್ಯರ್ಥಿಯ ಕೌನ್ಸಿಲಿಂಗ್ ಮಾಡಿ ಚುನಾವಣಾ ಸ್ಥಾನ ಕೊಡಲಾಗುವುದು. ಎಲ್ಲರಿಗೂ ಕ್ಷೇತ್ರ ಕೊಟ್ಟ ನಂತರ ಉಳಿದ ಕ್ಷೇತ್ರಕ್ಕೆ ನಾನು ನಿಲ್ಲುವೆ. ನಮಗೆ ಗೆಲ್ಲಲೇಬೇಕೆಂದೇನಿಲ್ಲ, ಪಕ್ಷಕ್ಕೆ ಹಣವೂ ಇರುವುದಿಲ್ಲ, ಜಾತಿ, ಮತ, ಜನಸಂಪರ್ಕದ ಹಂಗು ಬೇಕಿಲ್ಲ. ಎಲೆಕ್ಷನ್ ಒಂದು ಸಮಾಜ ಸೇವೆ ಅದಕ್ಕಾಗಿ ಬರುವ ಜನರಿಗೆ ದೇಶವಾಸಿಗಳು ಓಟ್ ಹಾಕಿ ತಮ್ಮ ಅಭ್ಯರ್ಥಿಯನ್ನು ಆರಿಸಬೇಕು. ಅದಕ್ಕೆ ಜನರಿಗೆ ಆಸೆ- ಆಮಿಷ ಒಡ್ಡುವ, ರ್ಯಾಲಿ ಮಾಡುವ ಅವಶ್ಯಕತೆ ನಮಗಿಲ್ಲ. ಆಧುನಿಕ ಸಂಪರ್ಕ ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತೇವೆ. ಪ್ರಜಾ ರಾಜಕೀಯ ಸಾಕಷ್ಟು ಯಶಸ್ಸು ಸಾಧಿಸುತ್ತದೆ ಎಂದರು. ಅನ್ಯಪಕ್ಷಗಳನ್ನು ಮತ್ತು ರಾಜಕಾರಣಿಗಳನ್ನು ನಾವು ತೆಗಳುವುದಿಲ್ಲ. ಧನಾತ್ಮಕವಾಗಿ ಮುಂದುವರೆಯುವುದು ನಮಗಿಷ್ಟ ಎಂದರು. ಇನ್ನು ಎಸ್. ಆರ್. ಹಿರೇಮಠ ಆರೋಪ ನಿರಾಧಾರವಾಗಿದ್ದು ನಾನು ನನ್ನ ಅಣ್ಣ ಸೇರಿ ರೆಸಾರ್ಟ್ ಕಟ್ಟಿದ್ದೇವೆ. ಆದರೆ ಆ ರೆಸಾರ್ಟ್ ಬೇರೆಯೇ ಇದೆ, ಅದರ ಹಿಂದೆ ನಮ್ಮ ಜಮೀನು ಬೇರೆ ಇದೆ. ಕೃಷಿ ಭೂಮಿಯಲ್ಲಿ ನಾವು ರೆಸಾರ್ಟ್ ಕಟ್ಟಿಲ್ಲ. KSTDC ಯಿಂದ ನಾವು ಅನುಮತಿ ತೆಗೆದುಕೊಂಡಿದ್ದೇವೆ ಎಂದರು.