ನನ್ನ ಕೊಲೆಗೆ ರವಿ ಸುಪಾರಿಕೊಟ್ಟಿದ್ದರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ : ಸುನಿಲ್ ಹೆಗ್ಗರವಳ್ಳಿ

ಬೆಂಗಳೂರು : ಪತ್ರಕರ್ತ ರವಿ ಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್‌ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ್ದರು ಎಂಬ ವಿಚಾರ ಪತ್ರಿಕೋದ್ಯಮ ವಲಯದಲ್ಲೇ ಸಂಚಲನ ಮೂಡಿಸಿದೆ.

ರವಿ ಬೆಳೆಗೆರೆಯವರ ಜೊತೆ ಸುನಿಲ್ ಹೆಗ್ಗರವಳ್ಳಿ 14 ವರ್ಷಗಳ ಒಡನಾಟ ಹೊಂದಿದ್ದರು. 2 ವರ್ಷಗಳ ಹಿಂದೆಯೇ ಪತ್ರಿಕೆಯ ಕೆಲಸ, ವ್ಯವಸ್ಥೆ ಅಲ್ಲಿನ ವಾತಾವರಣದಿಂದ ಬೇಸತ್ತು ಕೆಲಸ ಬಿಟ್ಟಿದ್ದರು. ಆದರೆ ರವಿ ಬೆಳೆಗೆರೆಯವರೇ ಅವರನ್ನು ವಾಪಸ್ ಬರುವಂತೆ ಆಹ್ವಾನಿಸಿದ್ದರು ಎಂದು ಸುನಿಲ್‌ ಹೇಳಿದ್ದಾರೆ.

ಈ ಸುದ್ದಿಯಿಂದ ನನಗೂ ಶಾಕ್ ಆಗಿದೆ. ನಿನ್ನೆ ತನಕ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಇಂದು ಬೆಳಗ್ಗೆ ನಗರದ ಹಿರಿಯ ಪೊಲೀಸರು ನನ್ನನ್ನು ಕರೆಸಿ ಈ ವಿಚಾರ ತಿಳಿಸಿದರು. ಆಗ ನಂಬಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಅಲ್ಲದೆ ಕೆಲ ದಿನಗಳಿಂದ ನನ್ನ ಮನೆಯ ಸುತ್ತಮುತ್ತ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ನನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನಿಸುತ್ತಿತ್ತು. ಆರೋಪಿ ಶಶಿಧರ್ ನಮ್ಮ ಕಚೇರಿಗೆ ಬಂದಾಗ ರವಿ ಬೆಳೆಗೆರೆ ನನಗೆ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು. ಇವರು ಒಂದೆರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದಿದ್ದರು. ಆದರೆ ಅವರನ್ನೇ ನನ್ನ ಕೊಲೆ ಮಾಡಲು ಸುಪಾರಿ ನೀಡುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.

ಗೌರಿ ಲಂಕೇಶ್ ಕೊಲೆಯಾದ ಮರು ಕ್ಷಣದಿಂದಲೇ ರವಿ ಬೆಳಗೆರೆ ನನ್ನ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ ಹಾಯ್ ಬೆಂಗಳೂರು ಪತ್ರಿಕೆಗೆ ಬಾ ಎಂದಿದ್ದರು. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಏನು ಮಾಡಲಿ ಎಂದು ಸ್ಟೇಟಸ್‌ ಹಾಕಿದ್ದೆ. ಆಗ ಖುದ್ದು ರವಿ ಬೆಳಗೆರೆಯವರೇ ಪಾವಸ್ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ನಾನು ಪತ್ರಿಕೆಗೆ ಹೋಗಿ ಸೇರಿದ್ದೆ. ಆದರೆ ಹತ್ತಿರವಿದ್ದುಕೊಂಡೇ ನನ್ನನ್ನು ಹತ್ಯೆ ಮಾಡಿಸುವ ಸಂಚು ರೂಪಿಸಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ ಮೇಲೆಯೇ ಅರಿವಾಯಿತು ಎಂದಿದ್ದಾರೆ.
ನನ್ನ ಹತ್ಯೆ ಆಗುವುದಿದ್ದರೆ, ಗೌರಿ ಲಂಕೇಶ್‌ ಹತ್ಯೆಗೂ ಮುನ್ನವೇ ನನ್ನ ಹತ್ಯೆ ಆಗಬೇಕಿತ್ತು. ನನ್ನನ್ನು ಕೊಲೆ ಮಾಡಿಸುವಂತಹ ಕೋಪ ಅವರಿಗೆ ನನ್ನ ಮೇಲೆ ಏನಿತ್ತು ಎಂದು ಅವರೇ ಹೇಳಬೇಕು ಎಂದಿದ್ದಾರೆ.

Leave a Reply

Your email address will not be published.