ಬಾಬ್ರಿ ಮಸೀದಿ ಧ್ವಂಸಕ್ಕಿಂದು 25 ವರ್ಷ : ದೇಶದೆಲ್ಲೆಡೆ ಬಿಗಿ ಭದ್ರತೆ

ಲಖನೌ : ಉತ್ತರ ಪ್ರದೇಶದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದು 25 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಹಾಕಲಾಗಿದೆ.

ಈ ಮಧ್ಯೆ ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ಹಿನ್ನೆಲೆಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳು ಎಲ್ಲೆಡೆ ಶೌರ್ಯ ದಿನವನ್ನಾಗಿ ಆಚರಣೆ ಮಾಡುವಂತೆ ಕರೆ ನೀಡಿವೆ.

ಕೆಲವೆಡೆ ಸಂಭ್ರಮಾಚರಣೆ ಹಾಗೂ ಪ್ರತಿಭಟನೆ ನಡೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕೋಮುಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರಕ್ಕೆ ಗುಪ್ತಚರ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

1992ರ ಡಿಸೆಂಬರ್ 6ರಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿ ರ್ಯಾಲಿ ನಡೆಸಿದ್ದರು. ಈ ವೇಳೆ ಕರಸೇವಕರು ಎಂದು ಕರೆಯಲ್ಪಟ್ಟ ಒಂದು ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆ ತಲುಪುತ್ತಿದ್ದಂತೆ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಭದ್ರತಾ ಪಡೆಯನ್ನು ಬದಿಗಟ್ಟಿ, ಅಯೋಧ್ಯೆಯಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಇದಾದ ಬಳಿಕ ದೇಶದಲ್ಲೆಡೆ ಕೋಮು ದಳ್ಳುರಿ ಹೊತ್ತಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

 

 

Leave a Reply

Your email address will not be published.

Social Media Auto Publish Powered By : XYZScripts.com