ಮದುವೆಗೆ ಬರಲೇಬೇಕೆಂದು ಹಠ ಹಿಡಿದಿದ್ದ ಅಭಿಮಾನಿ ಮನೆಗೆ HDK ಭೇಟಿ

ಮಂಡ್ಯ : ತನ್ನ ಮದುವೆಗೆ ಎಚ್‌ಡಿ ಕುಮಾರಸ್ವಾಮಿಯವರು ಬರಲೇಬೇಕು ಎಂದು ಹಠ ಹಿಡಿದು ಉಪವಾಸ ಕುಳಿತಿದ್ದ ಅಭಿಮಾನಿ ರವಿ ಮನೆಗೆ ಇಂದು ಎಚ್‌ಡಿಕೆ ಭೇಟಿ ನೀಡಿದ್ದಾರೆ.

ಡಿಸೆಂಬರ್‌ 1ರಂದು ಎಚ್‌ಡಿಕೆ ಅಭಿಮಾನಿ ರವಿ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಎಚ್‌ಡಿಕೆ ನನ್ನ ಮದುವೆಗೆ ಬರಲೇಬೇಕು ಎಂದು ಹಠ ಹಿಡಿದ ರವಿ ಉಪವಾಸ ಕುಳಿತಿದ್ದರು. ಈ ವಿಚಾರ ತಿಳಿದ ಎಚ್‌ಡಿಕೆ, ರವಿಗೆ ಕರೆ ಮಾಡಿ ಮದುವೆಗೆ ಬರಲಾಗುವುದಿಲ್ಲ. ಆದರೆ ಮದುವೆಯಾದ ಮೇಲೆ ಖಂಡಿತ ಬರುತ್ತೇನೆ ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ರವಿ ಮದುವೆಯಾಗಿದ್ದರು.

ಕೊಟ್ಟ ಮಾತಿನಂತೆ ರವಿಯವರ ನಿವಾಸಕ್ಕೆ ಇಂದು ಕುಮಾರಸ್ವಾಮಿ ಆಗಮಿಸಿದ್ದು, ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಎಚ್‌ಡಿಕೆ, ಪಕ್ಷದ ನಿಷ್ಠಾವಂತರು ತಮ್ಮ ಕುಟುಂಬದ ಕಾರ್ಯಕ್ರಮಗಳಿಗೆ ಬರುವಂತೆ ಹಠ ಹಿಡಿಯುತ್ತಾರೆ. ಅವರ ಅಭಿಮಾನ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಇಕ್ಕಟ್ಟಿನ ಪರಿಸ್ಥಿತಿಗಳು, ಒತ್ತಡದ ಮಧ್ಯೆ ಕಾರ್ಯಕ್ರಮಕ್ಕೆ ಬರಲು ಹೇಳಿದರೆ ಬೇರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಿಂದೊಮ್ಮೆ ದಿನಕ್ಕೆ 50 ಮದುವೆಗೆ ಹೋಗುತ್ತಿದ್ದೆ. ಆದರೆ ಈ ಒತ್ತಡದ ಮಧ್ಯೆ ಕಷ್ಟವಾದರೂ ಬಂದಿದ್ದೇನೆ. ದಯವಿಟ್ಟು ಒತ್ತಡ ಹಾಕಬೇಡಿ. ಸಮಯವಿದ್ದಾಗ ನಾನೇ ಬಂದು ಹೋಗುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.