ಅಂಗವಿಕಲ ಮಗನಿಗಾಗಿ ಅಪ್ಪನ ಹುಡುಕಾಟ : 5 ತಿಂಗಳಿಂದ ಸೈಕಲ್ನಲ್ಲೇ ಸುತ್ತಾಟ
ಆಗ್ರಾ : ಆರು ತಿಂಗಳ ಹಿಂದೆ 11 ವರ್ಷದ ಅಂಗವಿಕಲ ಮಗ ಕಳೆದು ಹೋಗಿದ್ದು, ಆತನಿಗಾಗಿ ತಂದೆ ಸತೀಶ್ ಚಂದ್ ಐದು ತಿಂಗಳಿನಿಂದ ಸೈಕಲ್ನಲ್ಲಿ ಸುತ್ತುತ್ತಿದ್ದಾರೆ.
ಸತೀಶ್ ಚಂದ್ ರೈತಾಪಿ ವರ್ಗದವರಾಗಿದ್ದು, ಕಳೆದುಹೋಗಿರುವ ಅಂಗವಿಕಲ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಸಹ ಮಗನ ಹುಡುಕಾಟಕ್ಕೆ ಸಾಥ್ ನೀಡಿದ್ದಾರೆ.
ಕಳೆದ ಜೂನ್ನಲ್ಲಿ ಸತೀಶ್ ಅವರ ಮಗ ಮನೆಯಿಂದ ಶಾಲೆಗೆಂದು ಹೋಗಿದ್ದು, ಮತ್ತೆ ವಾಪಸ್ ಮನೆಗೆ ಬಂದಿಲ್ಲ. ಶಾಲೆಯಲ್ಲಿ ವಿಚಾರಿಸಿದಾಗಲೂ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಸತೀಶ್ ಮಗನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಮಗ ಆದಷ್ಟು ಬೇಗ ಸಿಗಲಿ ಎಂಬ ಕಾರಣಕ್ಕೆ ತಮ್ಮ ಸೈಕಲ್ ತೆಗೆದುಕೊಂಡು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನನ್ನ ಬಳಿ ಹಣಂವಿಲ್ಲ, ಪ್ರಭಾವ ಇಲ್ಲ. ನನಗೆ ಯಾರು ಸಹಾಯ ಮಾಡುತ್ತಾರೆ. ದಾರಿಯುದ್ದಕ್ಕೂ ಮಗನ ಫೋಟೋ ತೋರಿಸಿಕೊಂಡು ಆತನಿಗಾಗಿ ಹಗಲು ರಾತ್ರಿ ಹುಡುಕಾಡುತ್ತಿದ್ದೇನೆ ಎಂದಿದ್ದಾರೆ.
ಈ ಹಿಂದೆ ಸತೀಶ್ ಅವರ ಮಗಳು ಸರಿತಾ ಮೃತಪಟ್ಟಿದ್ದಳು. ಬಳಿಕ 2011ರಲ್ಲಿ ಮಗ ಅಪಘಾತದಲ್ಲಿ ಸಾವಿಗೀಡಾಗಿದ್ದನು. ಈಗ ಇದ್ದ ಮತ್ತೊಬ್ಬ ಮಗ ಸಹ ನಾಪತ್ತೆಯಾಗಿದ್ದು, ತಂದೆಯ ಗೋಳು ಹೇಳತೀರದಾಗಿದೆ.