ನುಡಿ ಜಾತ್ರೆ : ಸರ್ವಾಧಿಕಾರ ಧೋರಣೆ ಇರಬಾರದು, ರಾಜಕೀಯ ನಿಲುವು ಅನಿವಾರ್ಯ – ಚಂಪಾ..

ಮೈಸೂರು:ನ-27: ‘ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಅನೇಕ ದನಿಗಳಲ್ಲಿ. ಆ ದನಿಗಳಿಗೆ, ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಸರ್ವಾಧಿಕಾರದ ಧೋರಣೆಯ ದನಿ ಇರಬಾರದು…’ ಸಂವಾದ’ದಲ್ಲಿ ‘ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರ ಮಾತು..

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಮ್ಮ ಭಾಷಣವನ್ನು ಸಮರ್ಥಿಸಿಕೊಳ್ಳುವ ದನಿ ಅವರ ಮಾತಿನಲ್ಲಿ ಅಡಗಿತ್ತು. ಭಾಷಣಕ್ಕೆ ವ್ಯಕ್ತವಾದ ವಿರೋಧವನ್ನು ಒಮ್ಮೆ ನಗುಮುಖದಿಂದ ಸ್ವಾಗತಿಸುತ್ತಲೇ, ಮತ್ತೊಮ್ಮೆ ಕೋಪಗೊಳ್ಳುತ್ತಲೇ ಮಾತು ಮುಂದುವರಿಸಿದರು.

‘ನನ್ನ ಭಾಷಣ ವಿರೋಧಿಸಿ ಮೈಸೂರಿನ ಸ್ನೇಹಿತರು ಪ್ರತಿಭಟನೆ ನಡೆಸಿದರು. ನನ್ನ 60 ವರ್ಷಗಳ ಅಕ್ಷರ ಲೋಕದ ಕ್ಷಿತಿಜ ಪ್ರತಿವರ್ಷ ದೊಡ್ಡದಾಗುತ್ತಲೇ ಇದೆ. ಹೆಗಲ ಮೇಲೆ ಕೈಹಾಕಿ ಎಂಥದ್ದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮನೋಭಾವ ನನ್ನದು‌. ಮತ–ಭಿನ್ನಮತ, ವಾದ–ವಾಗ್ವಾದ ಇಲ್ಲದಿದ್ದರೆ ಅದು ಸತ್ತ ಸಮಾಜ ಎಂದೇ ಅರ್ಥ’ ಎಂದು ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು.

‘ಜಾತಿ ವಿನಾಶ ಚಳವಳಿ ಹಿಂದೆಯೇ ಶುರುವಾಗಿದೆ. ಅದಕ್ಕೆ ಸ್ಫೂರ್ತಿ ನೀಡಿದ್ದು ಕುವೆಂಪು. ಬಸ್ಸು, ರೈಲಿನಲ್ಲಿ ಹೋದಾಗ, ಹೋಟೆಲಿಗೆ ಹೋದಾಗ ಜಾತಿ ಗೊತ್ತಾಗುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಜಾತಿ ವ್ಯವಸ್ಥೆ ತುಂಬಾ ಕ್ರೂರವಾಗಿದೆ. ಈ ವ್ಯವಸ್ಥೆಯನ್ನು ಮೀರಿ ನಿಲ್ಲುವುದೇ ಜಾತ್ಯತೀತತೆ. ಇದಕ್ಕೆ ರಾಜಕೀಯ ಭಾಷೆಯಲ್ಲಿ ಸೆಕ್ಯುಲರಿಸಂ ಎನ್ನುತ್ತೇವೆ. ನನ್ನ ನಿಲುವು ಪಾರದರ್ಶಕ. ಕದ್ದುಮುಚ್ಚಿ ಮಾತನಾಡುವುದಿಲ್ಲ’ ಎಂದರು.

‘ರಾಜಕೀಯ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿರಬೇಕು. ಅದರ ಒಂದು ಭಾಗವೇ ಚುನಾವಣೆ. ಜಾತಿ ವ್ಯವಸ್ಥೆ ಬದಲಾಯಿಸುವ ಶಕ್ತಿ ಹೊಂದಿರುವ ಜಾತ್ಯತೀತ ಪಕ್ಷಗಳಿಗೆ ಮತ ನೀಡಬೇಕು. ಸಂವಿಧಾನದ ಮೌಲ್ಯ, ಆಶಯ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ಪುನರುಚ್ಚರಿಸಿದರು.

ಚಂಪಾ ತುಸು ಸಿಟ್ಟಾದರು. ‘ಇದೊಂದು ಅಸಂಬದ್ಧ ಪ್ರಶ್ನೆ. ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದ್ದರೆ ಕೃಷಿ, ಶಿಕ್ಷಣ, ತಂತ್ರಜ್ಞಾನದ ಬಗ್ಗೆ ಸಮ್ಮೇಳನದಲ್ಲಿ ಗೋಷ್ಠಿಗಳನ್ನು ಏಕೆ ಇಟ್ಟುಕೊಂಡಿದ್ದೀರಿ? ಇಡೀ ಬದುಕಿನ ಕ್ರಮವೇ ಸಾಹಿತ್ಯ. ಸಾಹಿತ್ಯದ ದೃಷ್ಟಿಕೋನವನ್ನು ಮೊದಲು ಬದಲಾಯಿಸಿಕೊಳ್ಳಿ’ ಎಂದು ತಿರುಗೇಟು ನೀಡಿದರು.

 

‘ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಭರವಸೆ ಕೆಲವರಿಗಿದೆ. ಹಾಗೆಂದು ನಾವು ಪ್ರತಿರೋಧ ಒಡ್ಡುವುದನ್ನು ನಿಲ್ಲಿಸಬಾರದು. ಪರ್ಯಾಯ ಬದುಕು ಕಟ್ಟಿಕೊಳ್ಳಬೇಕು. ಪ್ರತಿಗಾಮಿಗಳ ಪರಂಪರೆ ಇರುವಂತೆ ಪ್ರತಿರೋಧದ ಜೀವಂತ ಪರಂಪರೆ ಇದೆ. ಇದು ಚರಿತ್ರೆಗಳ ನಡುವಿನ ಸಂಘರ್ಷದ ಕಥೆ. ಅದು ಮುಂದುವರಿಯುತ್ತಲೇ ಇರುತ್ತದೆ’ ಎಂದು ಹೇಳಿದರು.

 

Leave a Reply

Your email address will not be published.

Social Media Auto Publish Powered By : XYZScripts.com