ರಾಜಶೇಖರ ಕೋಟಿಯೆಂಬ ಸಂವೇದನಾಶೀಲ ಪತ್ರಕರ್ತ ಮೇಸ್ಟ್ರ ನೆನಪು

1999ರ ಕೊನೆಯ ತಿಂಗಳು .  ರಾಜಶೇಖರ ಕೋಟಿಯವರನ್ನು ಮೊದಲ ಬಾರಿಗೆ ಮುಖತಃ ಭೇಟಿಯಾಗಿದ್ದೆ. ಅದುವರೆಗೆ ದೂರದಿಂದ ನೋಡಿ ಇಲ್ಲವೇ ಪತ್ರಿಕೆಯಲ್ಲಿ ಓದಿ ತಿಳಿದಿದ್ದ ಕೋಟಿಯವರನ್ನು ಉದ್ಯೋಗಕ್ಕಾಗಿ ಕೇಳಿಕೊಂಡು ಹೋದ ಸಂದರ್ಭವದು. ಒಂದೆರಡು ನಿಮಿಷದ ಮಾತುಕತೆಯದು. “ಸರೀನ್ರಪ್ಪಾ ನಾಳೆಯಿಂದಲೇ ಕೆಲಸಕ್ಕೆ ಬನ್ನಿ. ನಿಮಗ ಯಾವುದೇ ಅನುಭವ ಇಲ್ಲ. ಆದ್ರು ತೊಂದರೆಯಿಲ್ಲ. ನಿಧಾನವಾಗಿ ಹೇಗೆ ಬರೆಯೋದು ಅಂತ ನೀವೆ ಕಲೀತೀರಿ” ಎಂದು ನನ್ನನ್ನು ವರದಿಗಾರ ಕೆಲಸಕ್ಕೆ ನೇಮಿಸಿಕೊಂಡ್ರು. ಮರು ದಿನವೇ ಚಾಮರಾಜನಗರದಲ್ಲಿದ್ದ ಆಂದೋಲನ ಕಛೇರಿಗೆ ಹೋಗಿ ಕೆಲಸ ಆರಂಭಿಸಿದ್ದೆ.

ಮೊದಲ ದಿನದಿಂದಲೇ ಕೋಟಿಯೆಂಬ ಜರ್ನಲಿಸಂ ಮೇಸ್ಟ್ರ ಕೈಕೆಳಗೆ ನನ್ನ ಕಲಿಕೆ ಆರಂಭವಾಯಿತು. ಒಂದು ವಾರ ಪೂರ್ತಿ ಪ್ರೆಸ್ ನೋಟ್‍ಗಳನ್ನು ಸುದ್ದಿಯಾಗಿಸಿ ಫ್ಯಾಕ್ಸ್ ಮಾಡುವ ಕೆಲಸ ನನ್ನದು. ಎರಡು ವಾರದ ನಂತರ ಅಂಗವಿಕಲರಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ಸರಿಯಾಗಿ ಸ್ಪಂದಿಸದ ಕುರಿತು ನನ್ನ ಮೊದಲ ವರದಿಯನ್ನು ಬರೆದು ಫ್ಯಾಕ್ಸ್ ಮಾಡಿದ್ದೆ. ಮರು ದಿನವೇ ಕೋಟಿಯವರಿಂದ ಫೋನ್ ಬಂತು.“ನಿನ್ನೆ ಸುದ್ದಿ ಸರಿಯಾಗಿತ್ತು, ಮುಂದುವರಿಸಿ” ಎಂದರು. ನಾಲ್ಕು ಜಿಲ್ಲೆಗಳಲ್ಲಿ ಪ್ರಸಾರವಿದ್ದ ಪತ್ರಿಕೆಯ ಸಂಪಾದಕರು, ಆಗತಾನೆ ಕೆಲಸಕ್ಕೆ ಸೇರಿದ ಅನುಭವರಹಿತ ವರದಿಗಾರನನ್ನು ಜೋಪಾನಿಸುತ್ತಿದ್ದ ರೀತಿಯದು.

ಒಂದು ತಿಂಗಳು ಕಳೆಯುವುದೊರಳಗೆ ನಾನು ಒಂದಿಷ್ಟು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಆರಂಭಿಸಿದೆ. ಯಾವುದೇ ಅನುಭವ ವಿಲ್ಲದ ನನ್ನಂತಹವನಿಗೆ ವಿಶ್ವಾಸ ಮೂಡುವ ಹಾಗೆ ನೆಡದುಕೊಳ್ಳುವುದು ಕೋಟಿಯವರಿಗೆ ಮಾತ್ರ ಸಾಧ್ಯವೆಂದು ನನ್ನ ತಿಳುವಳಿಕೆ. ಏಕೆಂದರೆ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಅವರು ಬಹುವಚನ ಬಿಟ್ಟು ಬೇರೆ ಏನನ್ನು ನನ್ನೊಂದಿಗೆ ಬಳಸಲಿಲ್ಲ. ನನ್ನೊಂದಿಗೆ ಮಾತ್ರವಲ್ಲ ಯಾರೊಂದಿಗೂ ಅವರು ಬಳಸುತ್ತಿರಲಿಲ್ಲ. ಗೌರವ ನೀಡುವುದು ಅವರ ಸ್ವಭಾವವಾಗಿತ್ತು. ಮತ್ತು ಅಷ್ಟೇ ಗೌರವದಿಂದ ಅನ್ನಿಸಿದ್ದನ್ನು ಹೇಳುವ ತಣ್ಣನೆಯ ಗಟ್ಟಿತನವೂ ಅವರಿಗಿತ್ತು. ಇದು ಕೊನೆಯ ತನಕವೂ ಹಾಗೇ ಇತ್ತು. ಅಲುಗಾಡದ ಅವರ ಬದ್ಧತೆಯೇ ಅವರ ಶಕ್ತಿಯಾಗಿತ್ತು.
ಇಂತಹ ಕೋಟಿಯವರು ನಿಧನರಾದರೆಂದು ಇದೇ23ರ ಮುಂಜಾನೆ ಫೋನ್ ಬಂದಾಗ ಏನು ಹೇಳಬೇಕೆಂದು ತಿಳಿಯದಾಯಿತು. ಕಾಲೇಜಿಗೆ ಹೊರಟ್ಟಿದ್ದರಿಂದ ಬಸ್ಸಿನಲ್ಲಿ ಹಾಗೆ ಕುಳಿತು ನನ್ನ ನೆನಪುಗಳನ್ನು ಮೆಲುಕು ಹಾಕಿದೆ. ಎಲ್ಲೂ ಅವರನ್ನು ದೂರುವ ಸಂದರ್ಭ ಕಾಣಿಸಲಿಲ್ಲ. ಒಂದೆರಡು ಸನ್ನಿವೇಶಗಳಲ್ಲಿ ನನಗೆ ಅವರ ಬಗ್ಗೆ ಬೇಸರ ಮೂಡಿತ್ತಾದರೂ, ಅವರನ್ನು ಕೆಟ್ಟವರೆಂದು ದೂರದ ಸನ್ನಿವೇಶಗಳು ಅವಾಗಿರಲಿಲ್ಲ. ನಾನು ಅವರ ಉದ್ಯೋಗಿಯಾಗಿ ಕಳೆದಿದ್ದ ಎರಡು ವರ್ಷಗಳು ಮತ್ತು ಆಂದೋಲನ ಪತ್ರಿಕೆಯ ಅಂಕಣಕಾರನಾಗಿ ಎರಡು ವರ್ಷಗಳನ್ನು ಈಗ ಪೂರೈಸುತ್ತಿರುವ ಸಂದರ್ಭದಲ್ಲೂ ಅವರನ್ನು ದೂರುವ ಸನ್ನಿವೇಶಗಳು ಇಲ್ಲವೆಂದೇ ಹೇಳಬೇಕು.

2000ದಲ್ಲಿ ನನ್ನ ಮೊದಲ ಲೇಖನವನ್ನು ಪ್ರಕಟಿಸಿದ್ದು ಶ್ರೀ ಕೋಟಿಯವರೇ. ಪತ್ರಿಕೆಗೆ ವರದಿಗಾರನಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮಕ್ಕಳ ವಿಷಯವನ್ನು ಕುರಿತು ಒಂದು ಲೇಖವನ್ನು ಬರೆದು ಕೋಟಿಯವರಿಗೆ ಕಳುಹಿಸಿಕೊಟ್ಟೆ. ಒಂದೆರಡು ದಿನಗಳಲ್ಲಿ ಲೇಖನ ಪ್ರಕಟವಾಯಿತು. ಅಷ್ಟೇ ಅಲ್ಲ ಲೇಖನಕ್ಕೆ ಹೊಂದಿಕೊಳ್ಳುವ ಫೋಟೋವನ್ನು ಕೋಟಿಯವರೇ ಹುಡುಕಿ ಹಾಕಿದ್ದರು! ಜೊತೆಗೆ ಮಾರನೆ ದಿನ ‘ಚೆನ್ನಾಗಿ ಬರೆಯುತ್ತೀರಿ, ಮುಂದುವರಿಸಿ’ ಎನ್ನುವ ಪ್ರೋತ್ಸಾಹದಾಯಕ ಮಾತುಗಳು ಬೇರೆ!.  ಅಂದು ಅವರು ಆಡಿದ ಮಾತುಗಳೇ ನನ್ನನ್ನು ಓರ್ವ ಬರಹಗಾರನಾಗಿ ಬೆಳೆಯುವಂತೆ ಮಾಡಿದ್ದು.
ಮೈಸೂರಿನ ಭಾಗದ ಜಿಲ್ಲೆಗಳಲ್ಲಿ ಶ್ರೀ ರಾಜಶೇಖರ ಕೋಟಿಯವರು ಪ್ರತೀ ಹಳ್ಳಿಯಲ್ಲೂ ಪರಿಚಿತವಿರುವ ವ್ಯಕ್ತಿ. ಇದಕ್ಕೆ ಕಾರಣವಿಲ್ಲದಿಲ್ಲ. ನಾನು ಕೆಲಸಕ್ಕೆ ಸೇರಿದ ಆರಂಭದಲ್ಲಿ ನನಗೆ ಅವರು ನೀಡಿದ ಸೂಚನೆಗಳಲ್ಲಿ ‘ಓದುಗರ ಪತ್ರಗಳು’ ಯಾವ ಕಾರಣಕ್ಕೂ ಮಿಸ್‍ ಆಗಬಾರದು ಎನ್ನುವುದು ಮುಖ್ಯವಾದ ಸೂಚನೆಯಾಗಿತ್ತು. ಒಂದು ಹಂತದಲ್ಲಿ ಕೋಟಿಯವರು ಓದುಗರ ಪತ್ರಕ್ಕೆ ನೀಡುವ ಮಹತ್ವನ್ನು ಸುದ್ದಿಗಳಿಗೇ ನೀಡುವುದೇ ಇಲ್ಲ ಎಂದು ನನಗೆ ಅನ್ನಿಸಿದ್ದಂತೂ ಸತ್ಯ. ಅಷ್ಟರ ಮಟ್ಟಿಗೆ ಓದುಗರ ಪತ್ರಗಳು ಕೋಟಿಯವರೆಗೆ ಮುಖ್ಯವಾಗಿದ್ದವು. ಇದು ನನಗೆ ಮುಖ್ಯವಾದ ಪಾಠವಾಗಿತ್ತು. ಜನರ ಸಮಸ್ಯೆಗೆ ಆಂದೋಲನವು ಖಚಿತ ವೇದಿಕೆಯಾಗಬೇಕೆನ್ನುವ ಹಂಬಲ ಸಂಪಾದಕರಾದ ಕೋಟಿಯವರದ್ದು. ಪತ್ರಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಲ್ಪಟ್ಟು ದೂರು ಪರಿಹಾರವಾದಾಗ ಪತ್ರಿಕೆಗೆ ಸಿಗುವ ‘ಗುಡ್ ವಿಲ್’ ಕೋಟಿಯವರೊಳಗಿದ್ದ ಪತ್ರಿಕೋದ್ಯಮಿಗೂ ಚೆನ್ನಾಗಿ ತಿಳಿದಿತ್ತು. ಇದು ಅವರು ಪತ್ರಿಕೆಯನ್ನು ಪರಿಭಾವಿಸಿದ ದೃಷ್ಟಿಕೋನದ ಪ್ರತೀಕವಾಗಿದೆ. ಇದುವೇ ಆಂದೋಲನ  ದಿನಪತ್ರಿಕೆಗೆ ಒಂದು ಕಾಲಘಟದಲ್ಲಿ ಒಂದು ಲಕ್ಷ ಪ್ರತಿಗಳ ಮಾರಾಟದ ದಾಖಲೆಯನ್ನು ಮುಟ್ಟಲು ಅವಕಾಶ ನೀಡಿದ್ದು.
ಕೋಟಿಯವರಲ್ಲಿದ್ದ ಮೇಸ್ಟ್ರಿಗೆ ಸಿಟ್ಟು ಜಾಸ್ತಿಯೇ. ಆದರೆ ಅದೊಂದು ಸಾತ್ವಿಕ ಸಿಟ್ಟು ಅಷ್ಟೇ. ವ್ಯಕ್ತಿಗತ ದ್ವೇಷ ಇರಲಿಲ್ಲ. ಎಲ್ಲ ವರದಿಗಾರರು ಅವರ ವಿದ್ಯಾರ್ಥಿಗಳೇ. ಅವರಿಗೆ ಸುದ್ದಿಯ‘ಎಸೆನ್ಸ್’ಅನ್ನು ತೀರ್ಮಾನಿಸುವ ವಿಶೇಷ ದೃಷ್ಟಿಕೋನವಿತ್ತು. ಅದರಲ್ಲೂ ಗ್ರಾಮೀಣ ಮಟ್ಟದ ಓದುಗರನ್ನು ತಲುಪುವ ಬದ್ಧತೆ ಅವರಿಗಿತ್ತು. ಯಾವ ಸುದ್ದಿಯನ್ನು ಯಾವ ರೀತಿಯಲ್ಲಿ ಪ್ರಕಟಿಸಿದರೆ ಜನರಿಗೆ ಎಟುಕುತ್ತದೆ ಎನ್ನುವ ಸ್ಪಷ್ಟತೆ ಅವರಿಗಿತ್ತು. ಅದನ್ನೇ ತಮ್ಮ ವರದಿಗಾರರಿಗೂ ಹೇಳಿಕೊಡುತ್ತಿದ್ದರು.ಯಾವುದೇ ಸುದ್ದಿಯನ್ನು ಪತ್ರಿಕೆಗೆ ಮುಖ್ಯವೇ ಅಲ್ಲವೇ ಎಂದು ನಿರ್ಧರಿಸುವ ಸ್ಪಷ್ಟತೆ ಅವರಿಗಿತ್ತು. ಈ ಆಯ್ಕೆಯ ಸಾರ್ಮಥ್ಯ ಒಂದು ಕಲೆ. ಅದನ್ನು ಕೋಟಿಯವರು ಚೆನ್ನಾಗಿ ಪಳಗಿಸಿಕೊಂಡಿದ್ದರು.

ಕೋಟಿಯವರ ಮೇಸ್ಟ್ರ ಹಿಂದೆ ಅವರ ಗುರುಗಳಾದ ಪಾಟೀಲ ಪುಟ್ಟಪ್ಪನವರ ಪ್ರಭಾವ ಗಾಢವಾಗಿತ್ತು. ಒಂದು ವರ್ಷದ ಹಿಂದೆ ಹೀಗೆ ಮಾತನಾಡುತ್ತಿರುವಾಗ ಕೋಟಿಯವರು ಪಾಟೀಲ ಪುಟ್ಟಪ್ಪನವರ ಬಗ್ಗೆ ಮಾತನಾಡುತ್ತಾ “ಅವರೊಂದು ಶಕ್ತಿ ಕಣ್ರೀ. ಅವರು ಸುದ್ದಿ ಬರೆಯುವುದನ್ನು ಕಲಿಸುತ್ತಿದ್ದ ರೀತಿಯೇ ವಿಶಿಷ್ಟವಾಗಿತ್ತು. ನಾನು ಯಾವುದೇ ಸುದ್ದಿಯನ್ನು ಬರೆದುಕೊಟ್ಟರು ಇಲ್ಲ ಅನ್ನದೇ ಹಾಕುತ್ತಿದ್ದರು. ನಾನು ಬರೆದಿರುವ ಸುದ್ದಿ ರೀತಿಯ ಇನ್ನೊಂದು ಸುದ್ದಿ ಅದೇ ಸಂಚಿಕೆಯಲ್ಲಿ ಅವರೇ ಬರೆಯುತ್ತಿದ್ದರು. ಪ್ರಕಟವಾದ ಮೇಲೆ ಅವರ ಬರಹ ನಾನು ಬರೆದಿರುವ ಬರಹದ ದೋಷಗಳನ್ನು ತೋರಿಸುವ ರೀತಿ ಇರುತಿತ್ತು. ಅಂತಹ ವಿಷಯಗಳ ಕುರಿತು ಬರಹ ಹೇಗಿರಬೇಕೆಂಬ ಸೂಚನೆ ಅಲ್ಲಿರುತಿತ್ತು. ಹೀಗೆ ಅವರು ನನಗ ಕಲಿಸುತ್ತಿದ್ರು” ಎಂದಿದ್ದರು.“ನಾನು ಹೀಗೆ ಕಲಿಯಲು ಆರಂಭಿಸಿದ್ದು. ಇಲ್ಲಿಯೂ ನಾನು ಅದನ್ನೇ ಮಾಡುತ್ತಿರುವುದು. ಕಲಿಕೆ ಹೀಗೆ ಇರಬೇಕು” ಎಂದು ಸಹಾ ಅವರು ಹೇಳಿದ್ದರು.
ಕೋಟಿಯವರು ವರದಿಗಾರರ ಭಾಷೆಯ ಜೊತೆಗೆ ಅವರ ವ್ಯಕ್ತಿತ್ವದ ಮಿತಿಗಳನ್ನು ಅರಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ವಿಶೇಷವೆಂದರೆ ವ್ಯಕ್ತಿಯ ಮಿತಿಯ ಒಳಗೆಯೇ ಕೆಲಸಮಾಡಿಸಿಕೊಳ್ಳುವ ಸೂತ್ರ ಅವರಾದಗಿತ್ತು. ಬಹಳ ಅಪರೂಪಕ್ಕೆ ಇಂತಹ ಮಿತಿಗಳ ಕುರಿತು ಅವರ ಅಸಮಾಧಾನ ವ್ಯಕ್ತಪಡಿಸುತಿದದ್ದು. ‘ಕೊಟ್ಟ ಕುದುರೆಯನ್ನು ಏರುವ ಹುಮ್ಮಸ್ಸು’ ಮಾತ್ರ ಅವರದ್ದು. ಯಾರ ಮಿತಿಯನ್ನು ದೂರುತ್ತಾ ಕೂರದೆ, ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಂಡು ಕೆಲಸವಾಗುವುದರ ಕಡೆಗೆ ಅವರ ಗಮನವಿರುತಿತ್ತು.
ಕಾಡುಗಳ್ಳ ವೀರಪ್ಪನ್ ವಿಷಯದಲ್ಲಿ ಕೋಟಿಯವರ ನಿಲುವು ಸ್ಪಷ್ಟವಾಗಿತ್ತು. ಅವನ ಅಟ್ಟಹಾಸ ಮತ್ತು ಕ್ರೂರತೆಗಳನ್ನು ವರದಿ ಮಾಡುವುದರಲ್ಲಿ ಇದ್ದ ನಿಷ್ಟೆಯನ್ನು ಇತರ ವಿಷಯಗಳಲ್ಲೂ ಮುಂದುವರಿಸಿದ್ದರು. ಹಳ್ಳಿ ಹಳ್ಳಿಯಲ್ಲೂ ಇರುತ್ತಿದ್ದ ಪತ್ರಿಕೆಯ ಏಜೆಂಟರ್‍ಗಳ ಸಹಾಯದೊಂದಿಗೆ ಸುದ್ದಿಯ ವಿವಿಧ ಮಜಲುಗಳನ್ನು ಅರಿತುಕೊಂಡು ವರದಿಗಾರರು ನೀಡುತ್ತಿದ್ದ ವರದಿಗಳ ವಸ್ತುನಿಷ್ಟೆತೆಯನ್ನು ಅಳೆಯುವ ಗುಣ ಅವರಲ್ಲಿತ್ತು. ಪತ್ರಿಕೆಯ ಎಲ್ಲಾ ಏಜೆಂಟರೊಂದಿಗೆ ಕೋಟಿಯವರ ಸಂಪರ್ಕವಿರುತಿತ್ತು. ಎಲ್ಲರನ್ನು ಸಮಾನವಾಗಿ ಕಾಣುವ ಗುಣದಿಂದಲೇ ಕೋಟಿಯವರು ಏಜೆಂಟರೊಂದಿಗೆ ವಿಶ್ವಾಸಾರ್ಹ ಸಂಬಂಧ ಹೊಂದಲು ಸಾಧ್ಯವಾಗಿರುತಿತ್ತು. ಈ ಸಂಬಂಧ ಗಟ್ಟಿಯಿದ್ದ ಕಾರಣದಿಂದಲೇ ಪತ್ರಿಕೆ ದಿಕ್ಕು ತಪ್ಪದಂತೆ ನಡೆಸಿಕೊಳ್ಳಲು ಅವರಿಗೆ ಸಾಧ್ಯವಾಗಿದ್ದು. ಹಾಗಾಗಿಯೇ ವೀರಪ್ಪನ್ ವಿರುದ್ಧದ ಕಾರ್ಯಚರಣೆಗಳಲ್ಲಿ ಉಂಟಾಗುತಿದ್ದ ದೌರ್ಜನ್ಯಗಳನ್ನು ನಿಖರವಾಗಿ ವರದಿ ಮಾಡಲು ಸಾಧ್ಯವಾಗಿತ್ತು.

1970ರ ದಶಕದಲ್ಲಿ ಸಮಾಜವಾದಿ ಚಳುವಳಿಯ ಪ್ರಭಾವದಿಂದ ಪ್ರೇರಿತರಾಗಿ ಮೈಸೂರಿಗೆ ಬಂದು ಪತ್ರಿಕೆ ಆರಂಭಿಸಿದ ಕೋಟಿಯವರ ಆರಂಭಿಕ ದಿನಗಳು ಕಷ್ಟಕರವಾಗಿದ್ದವು. ಅಚ್ಚಿನ ಮೊಳೆಗಳನ್ನು ಜೋಡಿಸುವುದರಿಂದ ಹಿಡಿದು ಮುದ್ರಣ ಕಾರ್ಯದವರೆಗೂ ಎಲ್ಲವನ್ನೂ ನಿಭಾಯಿಸುತಿದ್ದ ಅವರು, ಸೈಕಲ್ ಮೇಲೆ ಪತ್ರಿಕೆಗಳನ್ನು ಹೇರಿಕೊಂಡು ಹೋಗಿ ಮಾರಾಟವನ್ನು ಮಾಡುತ್ತಿದ್ದರು!. ಇಷ್ಟಾದರೂ, ಪತ್ರಿಕೆಯ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಲಿಲ್ಲ. ಆಗ ಅವರ ನೆರವಿಗೆ ಬಂದವರು ಸಮಾಜವಾದಿ ಗೆಳೆಯರು. ಅವರ ಬೆಂಬಲದ ಕಾರಣದಿಂದಲೇ ಕೋಟಿಯವರು ಪತ್ರಕರ್ತರಾಗಿ ಮತ್ತು ಪತ್ರಿಕೋದ್ಯಮಿಯಾಗಿ ಉಳಿಯಲು ಬೆಳೆಯಲು ಆಗಿದ್ದು. ತಮ್ಮಕಷ್ಟಕಾಲದಲ್ಲಿ ಸಹಾಯ ಮಾಡಿದ್ದ ಎಲ್ಲರನ್ನು ನೆನಯುವ ಸೌಜನ್ಯ ಕೋಟಿಯವರಿಗೆ ಕೊನೆಯವರೆಗೂ ಇತ್ತು.
ಆಂದೋಲನ ಪತ್ರಿಕೆ ದಲಿತರ ದಮನಿತರ ದನಿಯಾಗಿ ಕೊನೆಯವರೆಗೂ ಇರುವಂತೆ ಕೋಟಿಯವರು ನೋಡಿಕೊಂಡರು. ದನಿ ಇಲ್ಲದವರಿಗೆ ದನಿಯಾಗುವ ಉದ್ದೇಶದಿಂದ ಆಂದೋಲನ ವಿಮುಖವಾಗಲೇ ಇಲ್ಲ. ಇದೇ ಪತ್ರಿಕೆಯ ಶಕ್ತಿಯಾಗಿತ್ತು. ಅದೇ ಸಮಯದಲ್ಲಿ ಇತರೆ ದನಿಗಳಿಗೂ ಪತ್ರಿಕೆ ವೇದಿಕೆಯಾಗುತಿತ್ತು. ಇದರಿಂದಾಗಿಯೇ ಪತ್ರಿಕೆ ತನ್ನ ವಿಶ್ವಾಸವನ್ನು ಉಳಿಸಿಕೊಳ್ಳಲು ಅವಕಾಶವಾಗುತಿತ್ತು. ಆಂದೋಲನ ಎನ್ನುವುದು ಒಂದು ಸಾಮಾಜಿಕ ಉದ್ದಿಮೆಯೆಂದೇ ಅವರು ಗ್ರಹಿಸಿದ್ದರು. ಅದನ್ನುತಮ್ಮ ಉದ್ಯೋಗಿಗಳಿಗೆ ಕಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಎಂದೂ ಮಾಲೀಕರಾಗಿ ಅವರು ವರ್ತಿಸಿದ್ದೇ ಇಲ್ಲ. ಯಾವುದೇ ವಿಷಯದೆ ಹಿಂದೆ ಇರುವ ಸಂಕೀರ್ಣತೆಯನ್ನು ಗುರುತಿಸುವ ಕಲೆಯನ್ನು ವರದಿಗಾರರು ಹೊಂದಬೇಕೆಂಬ ಪಾಠವನ್ನು ತಮ್ಮ ಬಳಿಯಿರುತಿದ್ದ ಪತ್ರಕರ್ತರಿಗೆ ಕಲಿಸುವ ಅವರ ಉತ್ಸಾಹ ಕೊನೆಯವರೆಗೂ ಬತ್ತಲೇ ಇಲ್ಲ. ಹಾಗಾಗಿ ಶ್ರೀ ರಾಜಶೇಖರಕೋಟಿಯವರು ಸಮಾಜಮುಖಿ ಪತ್ರಿಕೋದ್ಯಮದ ಅತ್ಯುತ್ತಮ ಉದಾಹರಣೆಯಾಗೇ ಉಳಿಯುತ್ತಾರೆ.
………………
-ಸದಾನಂದ ಆರ್
ಮೈಸೂರು.
(1999 ರಿಂದ 2001 ರವರೆಗೆಆಂದೋಲನ ಪತ್ರಿಕೆಯಲ್ಲಿ ವರದಿಗಾರನಾಗಿ ವೃತ್ತಿ. 2015ರಿಂದ ಇಲ್ಲಿಯವರೆಗೂ ಅದೇ ಪತ್ರಿಕೆಯಲ್ಲಿ ಅಂಕಣಕಾರನಾಗಿ ಸಂಬಂಧ ಮುಂದುವರಿದಿದೆ. ವೃತ್ತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕ. ಪ್ರಸುತ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜು, ಹುಣಸೂರು ಇಲ್ಲಿ ವೃತ್ತಿ.)

Leave a Reply

Your email address will not be published.

Social Media Auto Publish Powered By : XYZScripts.com