ದಕ್ಷಿಣ ಭಾರತದ ಪ್ರಸಿದ್ಧ ಫಿಲ್ಮ್‌ ಕಾರ್ನಿವಲ್‌ಗೆ ಸಜ್ಜಾಗುತ್ತಿದೆ ರಾಮೋಜಿ ಫಿಲ್ಮ್‌ ಸಿಟಿ

ಹೈದರಾಬಾದ್‌ : ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಇಂಡಿವುಡ್‌ ಫಿಲ್ಮ್‌ ಕಾರ್ನಿವಲ್‌ಗೆ ದಿನಗಣನೆ ಆರಂಭವಾಗಿದೆ.  ಡಿಸೆಂಬರ್‌ 1ರಿಂದ 4ರವರೆಗೆ ನಾಲ್ಕು ದಿನಗಳ ಕಾಲ ಸಿನಿ ರಸಿಕರಿಗೆ ಮನರಂಜನೆ ನೀಡಲು ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿ ಸಜ್ಜಾಗುತ್ತಿದ್ದು, ಚಿತ್ರ ರಸಿಕರು ಕಾರ್ಯಕ್ರಮಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ವಿಶ್ವದ ಅತಿದೊಡ್ಡ ಫಿಲ್ಮ್‌ ಫೆಸ್ಟ್‌ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ 5 ಸಾವಿರ ಮಂದಿ ವ್ಯಾಪಾರ ಪ್ರತಿನಿಧಿಗಳು, 500 ಮಂದಿ ಹೂಡಿಕೆದಾರರು, 300 ವಸ್ತು ಪ್ರದರ್ಶನಕಾರರು ಹಾಗೂ 2500 ಮಂದಿ ಪ್ರತಿಭಾನ್ವಿತ ಕಲಾವಿದರು ಭಾಗವಹಿಸಲಿದ್ದಾರೆ.

ಯುಎಇ ಮೂಲದ ಎನ್‌ಆರ್‌ಐ ಕೈಗಾರಿಕೋದ್ಯಮಿ ಸೋಹನ್‌ ರಾಯ್ ನೇತೃತ್ವದಲ್ಲಿ ಈ ಕಾರ್ನಿವಲ್‌ ನಡೆಯಲಿದೆ. ಫಿಲ್ಮ್‌ ಕಾರ್ನಿವಲ್‌ನಲ್ಲಿ ಬಿಲಿಯನೇರ್ ಕ್ಲಬ್‌ ಉದ್ಘಾಟನೆ ಕೇಂದ್ರ ಬಿಂದುವಾಗಿರಲಿದ್ದು, ಭಾರತೀಯ ಮೂಲದ 50ಕ್ಕೂ ಹೆಚ್ಚು ಮಂದಿ ಬಿಲಿಯನೇರ್‌ಗಳು, ವಿದೇಶದ 500ಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ಇದರಲ್ಲಿ ಭಾಗಿಯಾಗಲಿದ್ದಾರೆ.

ALIIFF, 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 115ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ಮಾಡಲಿದೆ. ALIIFFನ ಮೂರನೇ ಆವೃತ್ತಿಯಲ್ಲಿ 80 ರಾಷ್ಟ್ರಗಳಿಂದ ಸುಮಾರು 1000 ಸಿನಿಮಾಗಳ ಪ್ರದರ್ಶನಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳಲ್ಲಿ 115 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳನ್ನು ಆರು ಸ್ಪರ್ಧೆಗಳಲ್ಲಿ ಹಾಗೂ8 ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶನ ಮಾಡಲಾಗುತ್ತದೆ.

ಕಾರ್ಯಕ್ರಮದ ನಿರ್ದೇಶಕರಾಗಿ ಪದ್ಮಭೂಷಣ ಪ್ರಶಸ್ತಿ ವಿಜೇತ ಶ್ಯಾಮ್‌ ಬೆನಗಲ್‌ ಕಾರ್ಯ ನಿರ್ವಹಿಸಲಿದ್ದಾರೆ. ಪಲಂಕಾ ಪ್ರಶಸ್ತಿ ವಿಜೇತ ಫಿಲಿಪಿನೋ ಸಿನಿಮಾ ನಿರ್ದೇಶಕ ಜನ್ ರೋಬೆಲ್ಸ್‌ ಲಾನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಜೊತೆಗೆ ಈ ಬಾರಿ ಆ್ಯನಿಮೇಶನ್‌ ಹಾಗೂ ಪರಿಸರಕ್ಕೆಸಂಬಂಧಿಸಿದ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಇಂಡಿವುಡ್‌ ಫಿಲ್ಮ್‌ ಮಾರ್ಕೆಟ್‌, ಸಿನಿಮಾ ತಯಾರಕರು, ನಿರ್ಮಾಪಕರು, ಹೂಡಿಕೆದಾರರು, ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದವರು, ಸಿನಿಮಾ ಇಂಡಸ್ಟ್ರಿಯ ಸ್ಟಾಕ್‌ ಹೋಲ್ಡರ್ಸ್‌ಗಳಿಗೆ ಅವಕಾಶ ಒದಗಿಸಿಕೊಡುತ್ತಿದೆ. ಈ ಕಾರ್ನಿವಲ್‌ನಿಂದಾಗಿ ಹೊಸ ಹೊಸ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗಲಿದ್ದು, ಹೊಸ ಪ್ರತಿಭೆಗಳ ಅನಾವರಣವಾಗಲಿದೆ.

 

 

 

 

 

 

Leave a Reply

Your email address will not be published.