ದೇಶಿ ಚಿಂತನೆಯನ್ನು ಕಟ್ಟಿಕೊಟ್ಟ ಜನಪದ ವಿದ್ವಾಂಸ ಸೂಗಯ್ಯ ಹಿರೇಮಠ

ಜಾನಪದದ ಜಾಡು ಹಿಡಿದು ಊರು, ಕೇರಿ, ಕಾಡು, ನೀರು, ನೆಲ, ಜಾತ್ರೆ, ದೇವರು, ಹಾಡು, ಕೂಗು, ಹೋರಾಟ ಹೀಗೆ ಮನುಷ್ಯ ಲೋಕಕ್ಕೆ ಅಂಟಿದ ಎಲ್ಲ ಸಂಗತಿಗಳ ಬಗೆಗೆ ಕಲೆ ಹಾಕುತ್ತ, ಕಲಾತ್ಮಕ ನೋಟದಿಂದ ವಿಶ್ಲೇಷಿಸುತ್ತ, ಜಾನಪದ ಜಗತ್ತೊಂದನ್ನು ವ್ಯಾಖ್ಯಾನಿಸುತ್ತ ದೇಶಿ ಚಿಂತನೆಯೊಂದನ್ನು ಕಟ್ಟಿಕೊಟ್ಟವರು ಸೂಗಯ್ಯ ಹಿರೇಮಠ. ದೇಶಿ ಸಂಸ್ಕೃತಿಯ ಪುನರ್ ಮೌಲೀಕರಣ, ಪುನರ್‍ಕಟ್ಟುವಿಕೆ ಮತ್ತು ಜಾನಪದದ ದಾಖಲೀಕರಣ ಮತ್ತು ನಿರೂಪಣೆ ಇವರ ಅಭಿವ್ಯಕ್ತಿಯ ಬಹು ಭಾಗವಾಗಿದೆ.

ಜಾನಪದದ ಅನುಸಂಧಾನವೆಂದರೆ, ಮನುಷ್ಯ ಜಗತ್ತಿನ ನಿಕಟಶೋಧನ ಎಂದೇ ಅರ್ಥ. ಅಂದರೆ, ಅನುಭವ ಜಗತ್ತಿಗೆ ಅಕ್ಷರ ಜಗತ್ತಿನ ಅಭಿಮುಖ ಆಗಿದೆ. ಹಿರೇಮಠ ಅವರು ತಮ್ಮ ಸೃಜನ ಸಾಹಿತ್ಯದ ಮೂಲಕ ಲೋಕವನ್ನು ವಿರ್ಮರ್ಶಿಸಿದರೆ, ಜಾನಪದದ ಮೂಲಕ ಸಾಂಸ್ಕೃತಿಕ ಪುನರ್ ವ್ಯಾಖ್ಯಾನದಲ್ಲಿ ತೊಡಗಿದ್ದು ಕಂಡುಬರುತ್ತದೆ. ಸಂಪ್ರದಾಯದ ದಾರಿಯಿಂದ, ಆಚರಣೆಗಳ ಸಂಗಾತದಿಂದ, ಸ್ಥಾಪಿತ ಧಾರ್ಮಿಕ ತತ್ವಗಳಿಂದ ಬಿಡಿಸಿಕೊಂಡು ಬಂಡಾಯ ಪರಂಪರೆಗೆ ಶಿಫ್ಟ್ ಆದ ಸೂಗಯ್ಯನವರ ಬೌದ್ಧಿಕ ಎಚ್ಚರ, ವೈಚಾರಿಕ ನಿಲುವು ಮತ್ತು ಸಾಹಿತ್ಯದ ಪ್ರಮಾಣಿಕ ಓದಿನಿಂದ ರೂಪುಗೊಂಡ ಅವರ ವ್ಯಕ್ತಿತ್ವದ ಬಿಂಬ, ಅವರಲ್ಲಿ ತಜ್ಞತೆ, ಕವಿತ್ವ ಸಂಶೋಧನ ಆಸ್ಥೆ ಸೃಷ್ಟಿಸಿತು.

ಸೂಗಯ್ಯ ಹಿರೇಮಠ ಅವರು 1950 ಮೇ 09 ರಂದು ಯಾದಗಿರಿ ಜಿಲ್ಲೆಯ ಶಾಹಾಪುರ ತಾಲೂಕಿನ ಸಿಂಗನಹಳ್ಳಿಯಲ್ಲಿ ಜನಿಸಿದರು. ತಂದೆ ಶರಣಯ್ಯ ಹಿರೇಮಠ. ತಾಯಿ ಶಾಂತಮ್ಮ. ತಮ್ಮೂರಿನಲ್ಲಿ ಕೇಳಿಸಿಕೊಂಡ ಹಾಡು, ನೋಡಿದ ಜಾತ್ರೆ, ಕೌಟುಂಬಿಕ ಆವರಣದಲ್ಲಿ ಕೇಳಿಸಿಕೊಂಡ ವೇದ, ಪುರಾಣ, ಭಜನೆ, ನಿಜಗುಣ ಶಿವಯೋಗಿಗಳ ರಚನೆ, ಪ್ರಭುಲಿಂಗಲೀಲೆ, ಜೈಮಿನಿಭಾರತ, ಸಣ್ಣಾಟ, ದೊಡ್ಡಾಟ ಜಾನಪದ ಜಗತ್ತಿನ ಸಂಗಡದ ಇವರ ಆಪ್ತತೆಗಳು ಇವರಲ್ಲಿ ಸೃಜನ ಮತ್ತು ಸೃಜನೇತರ ಸಾಹಿತ್ಯಾಭಿವ್ಯಕ್ತಿಗೆ ಮಾರ್ಗವಾದವು.

ಸಿಂಗನಹಳ್ಳಿ, ಬೊನ್ಹಾಳ, ಸುರಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿದ ಹಿರೇಮಠರು, ಕಲಬುರ್ಗಿಯಲ್ಲಿ ಕಾಲೇಜು ಕಲಿತರು. ಕಲಬುರ್ಗಿಯಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಿಂದ ಕನ್ನಡ ಮತ್ತು ಜಾನಪದದಲ್ಲಿ ಎಂ.ಎ. ಪದವಿಯನ್ನು ಪಡೆದರು(1975). ಯು.ಜಿ.ಸಿ ಸಂಶೋಧನಾ ಯೋಜನೆ ಅಡಿಯಲ್ಲಿ ಜಾನಪದ ವಿದ್ವಾಂಸ ಡಾ. ಬಿ.ಬಿ.ಹೆಂಡಿಯವರ ಜತೆಗೆ ಸಹಾಯಕ ಸಂಶೋಧಕರಾಗಿ ಕರ್ನಾಟಕದ ಏಳು ಜಿಲ್ಲೆಗಳು ಸುತ್ತಾಡಿ, ಕ್ಷೇತ್ರ ಕಾರ್ಯಕೈಗೊಂಡು, ಮೌಖಿಕ ಪರಂಪರೆಯನ್ನು ಸಂಗ್ರಹಿಸಿ ಜನಪದ ಸಾಹಿತ್ಯವೆಂಬ ಅಕ್ಷರರೂಪ ನೀಡಿ ಪ್ರಕಟಿಸಿದರು. ಇದು ಅವರಲ್ಲಿ ಜಾನಪದದ ಕುರಿತು ವಿದಗ್ಧತೆಯನ್ನು ಹೆಚ್ಚಿಸಿ ಸಂಶೋಧನಾತ್ಮಕ ದೃಷ್ಟಿಕೋನ ಬೆಳೆಸಿತು.

ಕವಿ, ಕತೆಗಾರ, ವಿಮರ್ಶಕ, ಸಂಶೋಧಕ, ಸಂಪಾದಕ, ಜಾನಪದ ತಜ್ಞರಾದ ಸೂಗಯ್ಯನವರು ‘ಉಂಡು ಮಲಗಿದವರು’ (1984) ಕವನ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ್ದಾರೆ. ‘ಜಾನಪದಸಾಹಿತ್ಯದಲ್ಲಿ ಮೌಲ್ಯಗಳು’, ‘ಜನಪದ ವೈದ್ಯ ಪದ್ದತಿ’, ‘ಜನಪದಒಗಟಿನ ಕವನಗಳು’(2006), ಜಾನಪದ ಸಾಹಿತ್ಯದಲ್ಲಿ ಶೃಂಗಾರ ಗೀತೆಗಳು (ವಿಮರ್ಶೆ), ‘ಅಂತರ’, ಹುಳಗಳು, ಬೇವು ಕಚ್ಚಿದ ಬಾಯಿ, ಅಂತರಂಗದ ಗುಡಿಯ ಒಳಗೆ, ಕಂಗಳ ಮುಂದಣಕತ್ತಲೆ (ಕಥಾ ಸಂಕಲನಗಳು), ಉರಿಲಿಂಗ ಪೆದ್ದಿ, ಕಿನ್ನರಿ ಬೊಮ್ಮಯ್ಯ ಹೇಮರೆಡ್ಡಿ ಮಲ್ಲಮ್ಮ, ಎಡೆಯೂರು ಸಿದ್ಧಲಿಂಗೇಶ್ವರ, ತಿಂಥಣಿ ಮೋನಪ್ಪ, ಗುರುನಾನಕ(ಚರಿತ್ರೆ), ಮನೆ ಮದ್ದು, ದೇವದೇವ ವನ, ಮುಂತಾದ ಕೃತಿಗಳು ಸೇರಿ ನಲವತ್ತಕ್ಕು ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ.

ಜಯಪ್ರಕಾಶ ನಾರಾಯಣರ ಮತ್ತು ಸಮಾಜವಾದ ಸಿದ್ಧಾಂತಗಳ ಪ್ರಭಾವದಿಂದ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ನಿಲುವು, ಸಂಘಟನೆ, ಚಳುವಳಿಗಳು ಅವರೊಳಗೆ ಪ್ರತಿರೋಧದ ಮತ್ತು ಪ್ರಗತಿಪರ ಚಿಂತನಾಕ್ರಮವೊಂದು ಸೃಷ್ಟಿಯಾಗಲು ಸಾಧ್ಯವಾಯಿತು. ಧಾರ್ಮಿಕತೆಯ ಕೇಂದ್ರದಿಂದ ಸಾಮಾಜಿಕಕ್ಕೂ, ಜಾನಪದಕ್ಕೂ ಪಲ್ಲಟಗೊಂಡು, ಜೀವಪರ ಲೋಕಪರವಾದ ಅಲೋಚನೆಗಳು ಅವರ ಅಭಿವ್ಯಕ್ತಿಯಲ್ಲಿ ಮೂಡಿದವು.

ವಿಡಂಬನೆ, ವ್ಯಂಗ್ಯ, ತಾರ್ಕಿಕತೆಯಿಂದ ಲೋಕವನ್ನು ಕಾಣುವ ಸೂಗಯ್ಯನವರು, ಭಾಷೆಯ ಮೊನಚು ಮತ್ತು ನೇರ ನಿರೂಪಣಾಶೈಲಿಯಲ್ಲಿ ಸಾಂಪ್ರದಾಯಿಕ ಪರಂಪರೆಯನ್ನು ಪ್ರತಿರೋಧಿಸುವ, ಲೋಕದ ಸ್ಥಾಪಿತ ಪರಿಪ್ರೇಕ್ಷವನ್ನು ಖಂಡಿಸುವ ಕಾವ್ಯ ಕಟ್ಟಿದ್ದಾರೆ. ಸಮಾಜಕ್ಕೊಂದು ವಿನ್ಯಾಸರೂಪಿಸುವ ವ್ಯಕ್ತಿಗಳು ನೈತಿಕವಾಗಿ ಭ್ರಷ್ಟತೆಗಿಳಿದದ್ದು, ಧಾರ್ಮಿಕ ಸಂಸ್ಧೆಗಳಲ್ಲಿ ಪ್ರಾರ್ಥನೆ, ಮಂತ್ರ, ಪೂಜೆಗಳು ನಡೆಯುವಜಾಗದಲ್ಲಿ ಮಡುಗಟ್ಟಿದ ‘ಅಶಾಂತಿ‘ ನಡುವೆ ‘ಶಾಂತಿ’ ಸತ್ಯದ ಹುಡುಕಾಟ ನಡೆಸಿದ ಇವರಕಾವ್ಯ ‘ಲೋಕದ ವಿಪರ್ಯಾಸವೊಂದನ್ನುತೆರೆದಿಡುತ್ತದೆ. ಮನುಷ್ಯ ಲೋಕ ಆವರಿಸಿದ ಕ್ರೌರ್ಯ, ಅಪ್ರಮಾಣಿಕತೆ, ಮೌಢ್ಯ, ಅಹಮ್ಮಿಕೆ ಕುರಿತು ಇವರ ಕತೆಗಳು ಮಾತನಾಡುತ್ತವೆ(ನೀರು ನೆಲೆ).

ಹೈದ್ರಾಬಾದ ಶಿಕ್ಷಣ ಸಂಸ್ಥೆಯ ಚಿಂಚೋಳಿಯಲ್ಲಿನ ಬಿ.ಸಿ. ಪಾಟೀಲ್ ಕಲಾ ಮಹಾವಿದ್ಯಾಲಯದಲ್ಲಿ 1983ರಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕರಾದ ಸೂಗಯ್ಯನವರು 1996ರಲ್ಲಿ ಬೀದರ ಬಿ.ವಿ. ಭೂಮರೆಡ್ಡಿ ಕಾಲೇಜಿಗೆ ವರ್ಗವಾಗಿ 2008ರಲ್ಲಿ ಇಲ್ಲಿಯೇ ನಿವೃತ್ತಿ ಹೊಂದಿದರು. 25 ವರ್ಷಗಳ ಕಾಲ ಸಾಹಿತ್ಯದ ಪಾಠ, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆಯ ಜೊತೆ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬರಹಗಳು ಬರೆದಿದ್ದಾರೆ. ಬೀದರ ಜಿಲ್ಲೆಯ ಶಾಸನಗಳು ಒಳಗೊಂಡ ವಿಷಯ, ವಸ್ತು, ಭಾಷಾ ವಿಜ್ಞಾನಕ್ಕೆ ಸಂಬಂಧಿತ ಬರಹ, ವಚನ ಸಾಹಿತ್ಯದ ಕುರಿತು ಲೇಖನಗಳು(ಸಾಹಿತ್ಯ ಸಂಪದ), ನಾಟಿ ವೈದ್ಯಪದ್ದತಿ ಮತ್ತು ಸಸ್ಯ ಸಂಪತ್ತಿನಲ್ಲಿರುವ ಔಷಧದ ಗುಣಗಳು, ಜಾನಪದದಲ್ಲಿನ ಜಾತಿ ಸಂಘರ್ಷ, ಶರಣರಲ್ಲಿ ಜನಪದೀಯತೆ ಇಂಥ ಅನೇಕ ಸಂಗತಿಗಳು ಅಧ್ಯಯನ ಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಸೂಗಯ್ಯ ಹಿರೇಮಠರ ಸಾಹಿತ್ಯಿಕ ಸಾಧನೆಗೆ ಡಾ. ಬಿ.ಎಸ್. ಗದ್ದಗಿ ಮಠ ಜಾನಪದ ತಜ್ಞ ಪ್ರಶಸ್ತಿ, ನೂರೊಂದೇಶ್ವರ ಪ್ರಶಸ್ತಿ, ಮಹಾಂತಜ್ಯೋತಿ ಪ್ರತಿಷ್ಠಾನದ ಕಾಯಕರತ್ನ ಪ್ರಶಸ್ತಿ, ಶಿಕ್ಷಣದ ಸಿರಿ ಪ್ರಶಸ್ತಿ, ಸೇರಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳು ಬಂದಿವೆ. ಬರಹ, ಭಾಷಣ ಸಾಹಿತ್ಯದ ಚಟುವಟಿಕೆಗಳಿಗೆ ತೊಡಗಿರುವ ಸೂಗಯ್ಯನವರು ಸಾಹಿತ್ಯದ ಓದುಗರಿಗೆ ಜಾನಪದದ ಜಗತ್ತನ್ನು ನೋಡುವ ಒಳನೋಟವೊಂದನ್ನು ನೀಡಿದ್ದಾರೆ. ಬೀದರ, ಕಲಬುರ್ಗಿ, ಯಾದಗಿರಿಯ ಸಾಂಸ್ಕೃತಿಕ ವಲಯದಲ್ಲಿ ಇದ್ದವರಿಗೆ ಅನುಭಾವ ಸಾಹಿತ್ಯ ಮತ್ತು ಲೋಕ ಸಾಹಿತ್ಯ ಗ್ರಹಿಸುವ ದಾರಿಯೊಂದನ್ನು ನಿರ್ಮಿಸಿದ್ದಾರೆ.

-ಭೀಮಾಶಂಕರ ಬಿರಾದಾರ.

Leave a Reply

Your email address will not be published.

Social Media Auto Publish Powered By : XYZScripts.com