ದಾರಿ ತಪ್ಪಿದ ಮಂಗ : ಗದಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ರಂಪಾಟ

ಗದಗ: ದಾರಿ ತಪ್ಪಿ ಬಂದ ಮಂಗವೊಂದು ಗದಗ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಕೆಲಹೊತ್ತು ಆತಂಕ ಉಂಟು ಮಾಡಿದ ಘಟನೆ ಇಂದು ನಡೆದಿದೆ.

ಗದಗ್‌ನ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಪಂಚಾಯತ್ ಕಚೇರಿಯ ಆಡಳಿತ ವಿಭಾಗ, ಜಿಲ್ಲಾಪಂಚಾಯತ್ ಸಿಇಒ ಕೊಠಡಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಗೆ ನುಗ್ಗಿದ ಮಂಗನನ್ನು ನೋಡುತ್ತಲೆ ಕೆಲ ಸಿಬ್ಬಂದಿ ಕಚೇರಿಯಿಂದ ಹೊರ ಓಡಿಬಂದರು.

ಕೆಲವರು ಮಂಗನನ್ನು ಹೊರ ಹಾಕಲು ಹರಸಾಹಸ ಪಟ್ಟರು. ಆದ್ರೆ ಮಂಗ ಮಾತ್ರ ಜನರನ್ನೆ ಮಂಗನ ರೀತಿಯಲ್ಲಿ ಆಟ ಆಡಿಸ್ತು. ಕೊನೆಗೆ ಈ ತುಂಟ ಮಂಗ ಮಹಿಳಾ ಶೌಚಾಲಯದ ಒಳಕ್ಕೆ ನುಸುಳಿತು. ಒಳಗೆ ನುಸುಳಿದ್ದ ಮಂಗನನ್ನು ಹೊರ ಹಾಕಲು ಸಿಬ್ಬಂದಿ ದೊಡ್ಡ ಸರ್ಕಸ್ ಮಾಡಬೇಕಾಯಿತು. ಸಿಇಒ ಕೊಠಡಿಯತ್ತ ಮಂಗ ತೆರಳುತ್ತಿದ್ದಂತೆ, ಅದನ್ನು ಓಡಿಸಲು ಓಡೋಡಿ ಬಂದ ಸಿಬ್ಬಂದಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಯಿತು.

ಮಂಗನ ತುಂಟಾಟ, ಪುಂಡಾಟಕ್ಕೆ ಸಾಕಾಗಿ ಕೊನೆಗೆ ಬಡಿಗೆ ಕೋಲು ತಂದು ಹೊರಹಾಕಲು ಸಿಬ್ಬಂದಿ ಯಶಸ್ವಿಯೂ ಆದ್ರು. ಈ ರೀತಿ ಮಂಗಗಳ ಹಾವಳಿ ಇದೇ ಮೊದಲಲ್ಲ. ಆಗಾಗ ಇಂತಹ ಘಟನೆಗಳು ಇಲ್ಲಿ ಜರಗುತ್ಲೆ ಇರುತ್ತವೆ. ಮಂಗಗಳ ದೊಡ್ಡ ಗುಂಪು ಜಿಲ್ಲಾಡಳಿತ ಭವನದ ಆಸುಪಾಸು ಇರೋದ್ರಿಂದ ಇವುಗಳ ಕಾಟಕ್ಕೆ ಸಿಬ್ಬಂದಿಗಳಿಗೆ ತಲೆನೋವಾಗಿದೆ. ಇಲ್ಲಿಗೆ ಬರುವ ಜನರಿಗೂ ಇವು ಆಗಾಗ ಕಾಟ ಕೊಡ್ತವೆ. ಅರಣ್ಯ ಇಲಾಖೆ ಸಿಬ್ಬಂದಿ ಮಂಗಗಳ ಹಾವಳಿ ತಡೆಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com