ಕಾಂಗ್ರೆಸ್ – ಪಟೇಲ್ ಸಮುದಾಯದ ಸಂಘರ್ಷ ಅಂತ್ಯ : ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿಗೆ
ಗಾಂಧಿನಗರ : ಗುಜರಾತ್ ರಾಜ್ಯದ ವಿಧಾನ ಸಬಾ ಚುನಾವಣೆ ಸಮೀಪಿಸುತ್ತಿದ್ದು, ಇದಕ್ಕಾಗಿ ರಾಷ್ಟ್ರೀಯ ಪಕ್ಷಗಳು ಗೆಲ್ಲಲು ಶತಪ್ರಯತ್ನ ಮಾಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಪಟೇಲ್ ಸಮುದಾಯದ ಮಧ್ಯದ ಸಂಘರ್ಷ ಕೊನೆಗೂ ಮುಕ್ತಾಯವಾಗಿದ್ದು, ಪಟೇಲ್ ಸಮುದಾಯದ ಬೇಡಿಕೆಗಳಿಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿರುವುದಾಗಿ ಹೋರಾಟಗಾರ ಹಾರ್ದಿಕ್ ಪಟೇಲ್ ಘೋಷಿಸಿದ್ದಾರೆ.
ಈ ಕುರಿತು ಅಹಮದಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಟೇಲ್, ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿದೆ. ಅದರಂತೆ ಸಂವಿಧಾನದ ಕಲಂ 46ಕ್ಕೆ ತಿದ್ದುಪಡಿ ತಂದು ಪಟೀಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿರುವುದಾಗಿ ಹೇಳಿದ್ದಾರೆ.
ಕೇವಲ ಪಟೇಲ್ ಸಮುದಾಯಕ್ಕೆ ಮಾತ್ರವಲ್ಲದೆ, ಇತರೆ ಹಿಂದುಳಿದ ವರ್ಗಗಳಿಗೂ ಮೀಸಲಾತಿಯನ್ನು ಮುಂದುವರಿಸಲು ಕಾಂಗ್ರೆಸ್ ಪಕ್ಷ ಒಪ್ಪಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ತಾವು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿರುವ ಹಾರ್ದಿಕ್, ನಾವು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆಯೇ ಹೊರತು ಯಾವುದೇ ಪಕ್ಷ ಸೇರುವುದಿಲ್ಲ. ಅಲ್ಲದೆ ನಾವು ನೇರವಾಗಿ ಯಾವುದೇ ಪಕ್ಷಕ್ಕೆ ಬೆಂಬಲಿಸುವುದಿಲ್ಲ ಎಂದಿದ್ದಾರೆ.
ನಮ್ಮ ಸಮಸ್ಯೆಗಳ ಬಗ್ಗೆ ಯಾರು ಕಾಳಜಿ ವಹಿಸುತ್ತಾರೋ, ನಮ್ಮ ಸಮಸ್ಯೆಗಳನ್ನು ನಿವಾರಿಸಲು ನಿಜವಾಗಿ ಯಾರು ಪ್ರಯತ್ನಿಸುತ್ತಾರೋ ಅವರಿಗೇ ನಾವು ಮತ ನೀಡುವುದಾಗಿಯೂ ಹೇಳಿದ್ದಾರೆ.