ಪ್ರಯಾಣ ಸಾಗುತ್ತಿದೆ…. ಈ ಅಣ್ಣನ ಸೈಕಲ್‌ನಲ್ಲಿ ಬೇಬಿ ಸೀಟೊಂದು ಖಾಲಿ ಇದೆ……..

ಸುಭಾಷ್‌ ಚಂದ್ರ, ಸಾಗರ

ದೇವರೇನಾದರೂ ಬಂದು ನಿನಗೆ ಏನು ಬೇಕು ಎಂದು ಕೇಳಿದರೆ ಹಿಂದೂ ಮುಂದು ಯೋಚಿಸದೆ ಪುಟ್ಟ ತಂಗಿ ಬೇಕು ಎಂಬ ಆಸೆ ನನ್ನದು.
ಚಿಕ್ಕಂದಿನಿಂದಲೂ ತಂಗಿ ಎಂದರೆ ಅತಿಯಾದ ಆಸೆ. ಆದರೆ ತಂಗಿಯೊಬ್ಬಳನ್ನು ಬಿಟ್ಟು ಉಳಿದವರು ಪ್ರೀತಿ ಸ್ವಲ್ಪ ಅತಿಯಾಗೇ ಸಿಕ್ಕಿದೆ. ಅವರೆಲ್ಲರ ಪ್ರೀತಿಯಂತೆ ತಂಗಿಯೂ ಸಿಕ್ಕಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದೆನೋ ಏನೋ…..ಆದರೆ ಅದೊಂದೇ ಕೊರತೆ ಕಾಡುತ್ತಿರುತ್ತದೆ.


ಆಸೆ ಆಕಾಶದಷ್ಟಿದೆ. ಅದರಲ್ಲಿ ತಂಗಿಯ ಆ ಪುಟ್ಟ ಕೈಗಳನ್ನು ನನ್ನ ಕೈಮೇಲಿಟ್ಟುಕೊಂಡು ಹಣೆಗೊಂದು ಮುತ್ತು ನೀಡಬೇಕು. ಸಣ್ಣದೊಂದು ಅಪ್ಪುಗೆ ಸಿಕ್ಕರೆ ಅದೇ ಸ್ವರ್ಗ. ಆಕೆ ನನ್ನ ಎರಡನೇ ತಾಯಿಯೞತಿರಬೇಕು. ಸದಾಕಾಲ ನನ್ನ ಬೆನ್ನಿಗೆ ಬಿದ್ದ ಬೇತಾಳನಂತೆ ನನ್ನ ಸುತ್ತಮುತ್ತಲೇ ಸುತ್ತುತ್ತಿರಬೇಕು. ನಾಯಿಯಂತೆ ನಾವಿಬ್ಬರು ಕಿತ್ತಾಡಬೇಕು. ಕೊನೆಗೆ ಆಕೆಯ ಮುಂದೆ ನಾನೇ ಸೋತು ಶರಣಾಗಿಬಿಡಬೇಕು.


ಅವಳು ಏನನ್ನಾದರೂ ಕೇಳುವುದಕ್ಕೂ ಮುನ್ನ ಎಲ್ಲವನ್ನು ಅವಳೆದುರು ತಂದಿಡಬೇಕು. ಆ ನನ್ನ ತಂಗಿೆಯ ಕೈಗಳು ನನ್ನ ತಲೆಯನ್ನು ನೇವರಿಸುತ್ತಲೇ ಇರಬೇಕು. ಅವಳು ಮಲಗುವಾಗ, ರಾಜ, ರಾಣಿ, ದೆವ್ವ, ಬೂತದ ಕಥೆ ಹೇಳಬೇಕು. ಜೊತೆಗೆ ಅವಳ ಚಾಕರಿ ಮಾಡುವುದು ನನ್ನ ಜನ್ಮಸಿದ್ದ ಹಕ್ಕಾಗಬೇಕು……….ಹೀಗೆ ಕನಸುಗಳಿಗೆ ಬರವೇ ಇಲ್ಲ. ಮನದ ಮೂಲೆ ಮೂಲೆಯಲ್ಲೂ ಆಕೆಯದ್ದೇ ಕನವರಿಕೆ,
ನನ್ನ ಸೈಕಲ್‌ನಲ್ಲಿ ತಂಗಿಗಾಗಿ ಒಂದು ಸೀಟನ್ನು ರಿಸರ್ವ್‌ ಮಾಡದೇ ಇರಲು ಹೇಗೆ ತಾನೆ ಸಾದ್ಯ. ಪ್ರತಿದಿನ ಅವಳು, ನಾನು ಇಬ್ಬರೇ ನನ್ನ ಸೈಕಲ್‌ನಲ್ಲಿ ಜಾಲಿ ರೈಡ್‌ ಹೋಗಬೇಕು. ನಮ್ಮನ್ನು ನೋಡಿ ಊರಿನ ಮಂದಿಯೆಲ್ಲ ಹೊಟ್ಟೆ ಉರಿ ಪಡಬೇಕು.


ಅವಳು ತಪ್ಪು ಮಾಡಿದಾಗ ಅಪ್ಪನ ಸ್ಥಾನದಲ್ಲಿ ನಿಂತು ಗದರಿಸಬೇಕು. ಅವಳು ನೊಂದಾಗ ನಾನು ಅವಳ ಅಮ್ಮನಾಗಬೇಕು. ಬರ್ತ್‌ಡೇ ಬಂದರೆ ಯಾವುದೋ ಮದುವೆ ಮನೆಯಂತೆ ಸಂಭ್ರಮ ನಮ್ಮನೆಯನ್ನಾವರಿಸಬೇಕು. ಸರ್ಪೈಜ್‌ ಗಿಫ್ಟ್‌ಗಳ ಸುರಿಮಳೆ ಈ ಅಣ್ಣನಿಂದ ಅವಳಿಗೆ ಸಿಗುವುದಂತೂ ಸತ್ಯ.
ಆಕೆಯ ಮದುವೆ ಜವಾಬ್ದಾರಿಯನ್ನು ಹೊತ್ತು ಮದುವೆಯ ಎಲ್ಲಾ ಕೆಲಸ ನಾನೇ ಮಾಡಬೇಕು. ಆಕೆಯ ಮಗನಿಗೆ ಮಾವನಾಗಬೇಕು. ನನ್ನಳಿಯನನ್ನು ಹೆಗಲ ಮೇಲೆ ಹೊತ್ತುಕೊಂಡು ಊರೆಲ್ಲಾ ಸುತ್ತಾಡಿಸಬೇಕು……


ಆಸೆಗಳ ಪಟ್ಟಿ ದೊಡ್ಡದಿದೆ…….ನಾ ಸಾಯೋವರೆಗೊ ಅವಳ ಆಳಾಗಿಯೇ ಇರಬೇಕು. ನನ್ನೆಲ್ಲಾ ಆಸೆ ಆಕಾಂಕ್ಷೆಗಳಿರುವುದು ಅವಳಿಗಾಗಿ ಮಾತ್ರ…….ಮುಂದಿನ ಜನ್ಮವೊಂದಿದ್ದರೆ,,,,, ನಾನು ನನ್ನ ತಂಗಿಯ ಜೀತದಾಳಾಗಬೇಕು,,,,,,,,,,,,,ಜೀತದಾಳಾಗಿಯೇ ಬದುಕಬೇಕು…..

 

Leave a Reply

Your email address will not be published.