ವಿದ್ಯುತ್ ಕೊರತೆ ನಿಭಾಯಿಸಲು, 10 ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಕ್ರಮ : ಡಿ.ಕೆ.ಶಿ

ಸುವರ್ಣ ವಿಧಾನಸೌಧ ಬೆಳಗಾವಿ(ಕರ್ನಾಟಕ ವಾರ್ತೆ) ನ.21:  ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ತುರ್ತು ಸಂದರ್ಭ ನಿಭಾಯಿಸಲು ಅಗತ್ಯ ಬಿದ್ದಲ್ಲಿ 10 ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲಿನ ಅಭಾವದಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸಾವಿರ ಮೆಗಾವ್ಯಾಟ್‍ನಷ್ಟು ಕೊರತೆಯುಂಟಾಗಿದೆ. ಇದರಲ್ಲಿ 900 ಮೆ.ವ್ಯಾ ನಷ್ಟು ವಿದ್ಯುತ್ ಖರೀದಿಸಲಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಲ್ಲಿದ್ದಲಿನ ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಪಕ್ಷಾತೀತವಾಗಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವಂತೆ ಕೋರಲಾಗಿದೆ.

ಇತ್ತೀಚಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪಿಯುಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಲಾಗಿದ್ದು, ಶೀಘ್ರವೇ ಕಲ್ಲಿದ್ದಲಿನ ಹಂಚಿಕೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಹಂಚಿಕೆಯಾದ ಕಲ್ಲಿದ್ದಲನ್ನು ರೈಲು-ಸಮುದ್ರ-ರೈಲು ಮಾರ್ಗವಾಗಿ ಸಾಗಾಟ ಮಾಡಲಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಅದನ್ನು ರೈಲು ಮತ್ತು ರಸ್ತೆ ಮಾರ್ಗವಾಗಿ ಸಾಗಿಸಲು ಅನುವಾಗುವಂತೆ ಕ್ರಮ ಜರುಗಿಸಲಾಗುತ್ತಿದೆ. ಕಲ್ಲಿದ್ದಲು ಹಂಚಿಕೆ ವಿಳಂಬವಾದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲು ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.

ಇಡೀ ರಾಷ್ಟ್ರದಲ್ಲಿ ಕಲ್ಲಿದ್ದಲಿನ ಕೊರತೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಮೂರು ವಿದ್ಯುತ್ ಸ್ಥಾವರಗಳಲ್ಲಿ ಮೂರು ಘಟಕಗಳಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಳೆದ 7 ತಿಂಗಳಲ್ಲಿ ಆರ್.ಟಿ.ಪಿ.ಎಸ್ ಘಟಕಕ್ಕೆ ಹಂಚಿಕೆಯಾಗಿದ್ದ 27 ಸಾವಿರ ಮೆ.ಟನ್ ಕಲ್ಲಿದ್ದಲಿನ ಪೈಕಿ ಅರ್ಧದಷ್ಟು ಮಾತ್ರ ಪೂರೈಕೆಯಾಗಿದೆ. ಬಿ.ಟಿ.ಪಿ.ಎಸ್‍ಗೆ ಹಂಚಿಕೆಯಾಗಿದ್ದ ಬಾರಾಂಜಾ ಬ್ಲಾಕ್ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದ್ದು, ಗಣಿಗಾರಿಕೆಗೆ ಟೆಂಡರ್ ಕರೆಯಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.

ಛತ್ತೀಸಗಢ ರಾಜ್ಯದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪಿಸಲು ಹಂಚಿಕೆಯಾಗಿರುವ ಜಾಗಕ್ಕೆ ಬಂದೋಬಸ್ತು ಮಾಡಲಾಗಿದ್ದು, ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದು ಹಂಚಿಕೆಯಾಗುವ ಅಂತಿಮ ಹಂತದಲ್ಲಿದೆ. ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಛತ್ತೀಸಗಢ ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

Leave a Reply

Your email address will not be published.