IND vs SL : ಭಾರತದ ಸಾಧಾರಣ ಮೊತ್ತ : ಉತ್ತಮ ಸ್ಥಿತಿಯಲ್ಲಿ ಲಂಕಾ

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಲಂಕಾ ಮೈಲುಗೈ ಸಾಧಿಸಿದೆ. ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 172 ರನ್ ಮೊತ್ತ ಕಲೆಹಾಕಿ ಆಲೌಟ್ ಆಯಿತು. ಚೇತೇಶ್ವರ ಪೂಜಾರಾ 52 ಹಾಗೂ ವೃದ್ಧಿಮಾನ್ ಸಹಾ 29, ಮಹಮ್ಮದ್ ಶಮಿ 24 ರನ್ ಗಳಿಸಿದರು. ಲಂಕಾ ಪರವಾಗಿ ವೇಗದ ಬೌಲರ್ ಸುರಂಗಾ ಲಕ್ಮಲ್ 4 ವಿಕೆಟ್ ಪಡೆದರು.

ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಲಾಹಿರು ತಿರಿಮನ್ನೆ ಹಾಗೂ ಏಂಜೆಲೋ ಮ್ಯಾಥ್ಯೂಸ್ ಅರ್ಧ ಶತಕ ಗಳಿಸಿ ಆಸರೆಯಾದರು. ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು 165 ರನ್ ಸೇರಿಸಿದ್ದು, 7 ರನ್ ಹಿನ್ನಡೆಯಲ್ಲಿದೆ. ಭಾರತದ ಪರವಾಗಿ ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.

ಸದ್ಯ ಉತ್ತಮ ಸ್ಥಿತಿಯಲ್ಲಿರುವ ಲಂಕಾ ರವಿವಾರ ಮುನ್ನಡೆ ಗಳಿಸಲು ಪ್ರಯತ್ನಿಸಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು ಪಂದ್ಯ ಕುತೂಹಲ ಕೆರಳಿಸಿದೆ.

Leave a Reply

Your email address will not be published.