Doctor Strike : ಸಿಎಂ ಸಂಧಾನ ಯಶಸ್ವಿ : ಮುಷ್ಕರ ಹಿಂಪಡೆದ ಖಾಸಗಿ ವೈದ್ಯರು…

ಬೆಳಗಾವಿ : ಕೆಪಿಎಂಇ ತಿದ್ದುಪಡಿ ವಿಧೇಯಕ ಸಂಬಂಧ ಖಾಸಗಿ ವೈದ್ಯರ ಜತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಮುಷ್ಕರವನ್ನ ಹಿಂಪಡೆಯಲು ಐಎಂಎ ಅಧ್ಯಕ್ಷ ಡಾ. ರವೀಂದ್ರ ನಿರ್ಧರಿಸಿದ್ದಾರೆ. ವಸುವರ್ಣಸೌಧದಲ್ಲಿ ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಆರೋಗ್ಯ ಸಚಿವ ರಮೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಐಎಂಎ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿದರು.

ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2007 ಕೆಪಿಎಂಇ ಕಾಯ್ದೆಗೆ ಕೆಲ ಸುಧಾರಣೆಯಾಗಬೇಕಿತ್ತು. ಹೀಗಾಗಿ ತಿದ್ದುಪಡಿ ವಿಧೇಯಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಕಾಯ್ದೆ ಜಾರಿಯಿಂದ ಯಾರಿಗೂ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತಾಗಬೇಕು. ಎಲ್ಲರ ಜೀವ ಉಳಿಯಬೇಕು ಎಂಬುದು ನಮ್ಮ ಉದ್ಧೇಶ ಎಂದು ತಿಳಿಸಿದರು.

ಕೆಲವು ಮಾರ್ಪಾಡುಗಳೊಂದಿಗೆ ವಿಧೇಯಕ ಮಂಡನೆಗೆ ಸರ್ಕಾರ ಸಿದ್ದವಿದ್ದು ಸೋಮವಾರ ಮಸೂದೆ ಮಂಡನೆಯಾಗಲಿದೆ ಎಂದು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಕಾಯ್ದೆಯಲ್ಲಿ ಕೆಲವು ಬದಲಾವಣೆ ಮಾಡುತ್ತೇವೆ. ತಪ್ಪಿತಸ್ಥ ವೈದ್ಯರಿಗೆ ಶಿಕ್ಷೆ ಬದಲು ದಂಡ ವಿಧಿಸಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಸಮಿತಿ ರಚಿಸಲು ನಿರ್ಧರಿಸಿದ್ದೇವೆ.ಇನ್ನು ದೂರು ಪ್ರಾಧಿಕಾರ ಕೈಬಿಡಲು ಸರ್ಕಾರ ಸಮ್ಮತಿಸಿದ್ದು, ಆರೋಗ್ಯ ಸೇವೆಯಲ್ಲಿ ಕರ್ನಾಟಕದಲ್ಲಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದ್ದೇವೆ. ಖಾಸಗಿ ಆಸ್ಪತ್ರೆ ಸಹಕಾರದೊಂದಿಗೆ ಜನರಿಗೆ ಹೆಲ್ತ್ ಸ್ಕೀಮ್ ಜಾರಿಗೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂಸಿದ್ದರಾಮಯ್ಯ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಅಧ್ಯಕ್ಷ ರವೀಂದ್ರ ಅವರು, ಕೆಪಿಎಂಇ ತಿದ್ದುಪಡಿ ವಿಧೇಯಕ ಸಂಬಂಧ ಸಂಧಾನ ಸಭೆ ಯಶಸ್ವಿಯಾಗಿದ್ದು, ವೈದ್ಯರಲ್ಲಿ ಇದ್ದ ಆತಂಕ ದೂರವಾಗಿದೆ. ಇಂದಿನ ಸಭೆಯಲ್ಲಿ ತೃಪ್ತಿಯಾಗುವ ನಿರ್ಧಾರ ಬಂದಿದೆ. ವೈದ್ಯರ ಮುಷ್ಕರ ವಾಪಸ್ ಪಡೆಯುವ ವಿಚಾರ ಧರಣಿ ನಿರತರಿಂದ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.ಅಲ್ಲಿ ನಿರ್ಧಾರ ಘೋಷಿಸುವೆ. ವೈದ್ಯರ ಮುಷ್ಕರದಿಂದ ಸಾವು ಸಂಭವಿಸಿದ್ದರೇ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com