ಬೆಳಗಾವಿ : ಕಬ್ಬಿನ ಬೆಲೆಗೆ ನಿಗದಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಪ್ರತಿಭಟನೆ

ಕಬ್ಬಿಗೆ ಎಸ್‌ಎಪಿ ಬೆಲೆ ನಿಗಧಿ ಮಾಡಲು, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಪರಿಹಾರದ ಹಣವನ್ನು ಕೂಡಲೇ ಪಾವತಿಸುವುದು, ಸಂಪೂರ್ಣ ಸಾಲಮನ್ನಾ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಲು ಹಾಗೂ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಎದುರು ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.

ಡಾ. ಎಂ.ಎಸ್‌. ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ ಮಾಡಿ ಕಾನೂನಾತ್ಮಕವಾಗಿ ಜಾರಿಗೆ ತರಲು ಮತ್ತು ಕೃಷಿಗೆ ಸಾಲಮುಕ್ತ ವ್ಯವಸ್ಥೆಯನ್ನು ರೂಪಿಸಿ ಜಾರಿಗೆ ತರಲು ಸರಕಾರದ ಮೇಲೆ ಒತ್ತಡ ಹೇರಿದರು.  ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಸಂಕಷ್ಟಕ್ಕೆ ಸ್ಪಂದಿಸದೇ ಕಾರ್ಪೋರೇಟ್ ಶಕ್ತಿಗಳು ರೂಪಿಸಿರುವ ನೀತಿಗಳ ಪರ ಕೆಲಸ ಮಾಡುತ್ತಿದ್ದು, ಶ್ರಮಿಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿವೆ.

ಕೇಂದ್ರ ಸರಕಾರ ರೈತರ ಸಮಸ್ಯೆಗಳತ್ತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದು, ದೇಶದ ವಿಮೆ ಕಂಪನಿಗಳಿಗೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆಂದು ಪ್ರತಿಭಟನೆಯಲ್ಲಿ ಆರೋಪಿಸಿದರು.  ಕಳಸಾ ಬಮಡೂರಿ ಮಹದಾಯಿ ಹೋರಾಟವನ್ನು ಎರಡು ವರ್ಷ ಕಳೆದರೂ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಿರ್ಲಕ್ಷ್ಯತನ ಬಿಟ್ಟು ಬಗೆಹರಿಸಬೇಕು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಪ್ರೀಮಿಯಮ್ ತುಂಬಿರುವ ಲಕ್ಷಾಂತರ ರೈತರಿಗೆ ಕೋಟ್ಯಾಂತರ ರು ಪರಿಹಾರ ಹಣ ಪಾವತಿ ಮಾಡದೇ ಉಳಿಸಿಕೊಂಡಿದ್ದು, ಕೂಡಲೇ ಈ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡಬೇಕು. ಸಹರಕಾ ಸಂಘದಲ್ಲಿ ಉಳಿದಿರುವ ರೈತರ ಸಂಪೂರ್ಣ ಸಾಲ ಮತ್ತು ಎಲ್ಲ ವಾಣಿಜ್ಯ ಬ್ಯಾಂಕುಗಳಲ್ಲಿರುವ ಕೃಷಿ ಸಾಲ ಮನ್ನಾ ಮಾಡಬೇಕು. ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿರುವ ಸಾಲಗಳನ್ನು ಕೂಡಾ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಇರುವ ಕೆಲ ಕಾರ್ಖಾನೆಗಳು ಕಬ್ಬಿನ ಬಾಕಿ ಉಳಿಸಿಕೊಂಡಿದೆ. ಅವನ್ನು ಕೂಡಲೇ ಬಿಲ್ಲು ಕೊಡಿಸಬೇಕು. ಕೇಂದ್ರ ಸರಕಾರ ಎಫ್ ಆರ್‌ಪಿ ದರದಲ್ಲಿ ಬೆಲೆ ನಿಗದಿ ಮಾಡಲಾಗುತ್ತಿದ್ದು, ಇದೂ ಕೂಡ ಲಾಭದಾಯಕವಾಗಿಲ್ಲದ ಕಾರಣ ರಾಜ್ಯ ಸರಕಾರ ಎಸ್‌ಎಪಿಯನ್ನು ಜಾರಿಗೆ ತಂದಿದೆ. ಕಬ್ಬು ಬೆಳೆಗಾರರಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು.

ಅಕಾಲಿಕ ಮಳೆಯಿಂದ ಹತ್ತಿ, ಗೋವಿನ ಜೋಳ, ರಾಗಿ, ಅಲಸಂದಿ, ಹೆಸರು, ಕಡಲೆ, ತೊಗರಿ, ಆಲುಗಡ್ಡೆ, ಇತರೆ ಅಲ್ಪಾವದಿ ಬೆಳೆಗಳು ನಷ್ಟ ಹೊಂದಿವೆ. ಈ ನಷ್ಟವನ್ನು ಸರಕಾರ ರೈತರಿಗೆ ತುಂಬಿಸಿಕೊಡಬೇಕು. ಕರಕುಶಲ ವಸ್ತುಗಳ ಮಾರಾಟವನ್ನು ಜಿಎಸ್‌ಟಿಯಿಂದ ಹೊರತರಬೇಕು. ರೈತರಿಗೆ ಆಗುವ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್‌ಟಿಯಿಂದ ಹೊರೆ ತಪ್ಪಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ರೈತರ ಮನವಿ ಸ್ವೀಕರಿಸಿದ ಕಾನೂನು ಮತ್ತು ಸಂಸದಿಯ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯಗಳಿಗೆ ಸರಕಾರ ಸ್ಪಂದಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ವರಿಷ್ಠರ ಮತ್ತು ಶಾಸಕರಾದ ಕೆ.ಎಸ್‌.ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷರಾದ ಕೆ.ಟಿ. ಗಂಗಾಧರ, ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ, ವರಿಷ್ಠ ಸದಸ್ಯರಾದ ಕಲ್ಯಾಣರಾವ್ ಮುಚಳಂಬಿ, ಜಿಲ್ಲಾಧ್ಯಕ್ಷರಾದ ಈರಣ್ಣ ಪಾಟೀಲ ಮತ್ತು ಸಾವಿರಾರು ರೈತರು ಭಾಗವಹಿಸಿದದ್ದರು.

Leave a Reply

Your email address will not be published.