ಗ್ರಾಮೀಣ ಸೊಗಡಿನ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಯ ಹಿನ್ನೆಲೆ..

ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಹತ್ತಿರ, ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಕಡಲೆಕಾಯಿ ಜಾತ್ರೆಯನ್ನು ಕಡಲೆಕಾಯಿ ಪರಿಷೆ ಎಂದು ಕರೆಯಲಾಗುತ್ತದೆ. ಇದು ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆಯ ಪ್ರತೀಕವಾಗಿದೆ. ಕಡಲೆಕಾಯಿ ಬೆಳೆಗಾರರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುತ್ತಾರೆ.

ಈ ವರ್ಷವೂ ಕಡಲೆಕಾಯಿ ಪರಿಷೆ ಸಂಭ್ರಮದಿಂದ ನಡೆಯುತ್ತಿದೆ. ಕಾರ್ತಿಕ ಮಾಸದ ಕೊನೆಯ ವಾರ ನಡೆಯುವ ಗ್ರಾಮೀಣ ಸೊಗಡಿನ ಇತಿಹಾಸ ಪ್ರಸಿದ್ಧ ಪರಿಷೆಗಾಗಿ ಬಸವನಗುಡಿಯಲ್ಲಿ ಕಡಲೆಕಾಯಿ ಮಾರಾಟ ಮಳಿಗೆಗಳು ತಲೆಯೆತ್ತಿವೆ. ರಾಜ್ಯದ ನಾನಾ ಭಾಗಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ.

ಹಿನ್ನೆಲೆ

ಹಿಂದೆ ಈ ಪ್ರದೇಶ ಸುಂಕೇನಹಳ್ಳಿ ಎಂದು ಹೆಸರಾಗಿದ್ದು ರೈತರು ಕೃಷಿ ಮಾಡುವ ಭೂಮಿಯಾಗಿತ್ತು. ಹೆಚ್ಚಾಗಿ ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಹೀಗಿರುವಾಗ ಸಮೃದ್ಧವಾಗಿ ಬೆಳೆದಿದ್ದ ಬೆಳೆಯನ್ನು ರಾತ್ರಿ ಹೊತ್ತಿನಲ್ಲಿ ಹೋರಿಯೊಂದು ಬಂದು ತಿಂದು ಬಿಡುತ್ತಿತ್ತು. ಇದರಿಂದ ನಷ್ಟ ಅನುಭವಿಸುತ್ತಿದ್ದ ರೈತರು ರಾತ್ರಿ ವೇಳೆಯಲ್ಲಿ ಕಾದು ಕುಳಿತು ನೋಡಿದಾಗ ಬೃಹತ್ ಗಾತ್ರದ ಬಸವ ಕಾಣಿಸಿತು. ರೈತರಿಗೆ ಇದು ದೈವೀಶಕ್ತಿಯನ್ನು ಹೊಂದಿದ ನಂದಿಯ ಪ್ರತಿರೂಪದಂತೆ ಕಾಣಿಸಿತು.

ದಯವಿಟ್ಟು ನಮ್ಮ ಬೆಳೆಯನ್ನು ಹಾಳು ಮಾಡಬೇಡ. ಇದೇ ಸ್ಥಳದಲ್ಲಿ ನಿನಗೊಂದು ಗುಡಿ ಕಟ್ಟಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಕಡಲೇಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ಅದರ ಕೃಷಿ ಚಟುವಟಿಕೆ ಮುಗಿದ ನಂತರ ಕಾರ್ತಿಕ ಮಾಸದ ಕೊನೆಯ ಸೋಮವಾರ ನಿನ್ನ ಹೆಸರಿನಲ್ಲಿ ಕಡಲೆಕಾಯಿ ಪರಿಷೆ ನಡೆಸುತ್ತೇವೆ ‘ ಎಂದು ಬಸವಣ್ಣನಿಗೆ ಮನವಿ ಮಾಡಿಕೊಂಡರು. ರೈತರ ಮೊರೆಯನ್ನು ಆಲಿಸಿದ ಬಸವಣ್ಣ ಅಂದಿನಿಂದ ರೈತರ ಬೆಳೆಯನ್ನು ನಾಶಗೊಳಿಸದೆ ಕಾಪಾಡುತ್ತಾನೆ. ಅಂದಿನಿಂದಲೂ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಕಡಲೆಕಾಯಿ ಪರಿಷೆಯನ್ನು ನಡೆಸುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com